ನವದೆಹಲಿ: ಸಂಸತ್ ಭವನದಲ್ಲಿ ಮತ್ತೆ ಭದ್ರತಾ ಲೋಪವೊಂದು ಸಂಭವಿಸಿದ್ದು, 20ರ ಯುವಕನೊಬ್ಬ ಸಂಸತ್ ಭವನದ ಕಾಂಪೌಂಡ್ ಜಿಗಿದು ಒಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿಯು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಾಹ್ನ 2.45ರ ಸುಮಾರಿಗೆ ಇಮ್ತಿಯಾಜ್ ಖಾನ್ ಮಾರ್ಗ್‌ನಲ್ಲಿ ಘಟನೆ ನಡೆದಿದೆ. ಇದರ ಸಂಪೂರ್ಣ ಚಿತ್ರಾವಳಿಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ. ಯುವಕನನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ಪಡೆದು, ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದರ ತನಿಖೆ ನಡೆಸಿದ ಪೊಲೀಸರು ಯುವಕನ ಹೆಸರು ಮನೀಶ್ ಎಂದು ಗುರುತಿಸಲಾಗಿದ್ದು, ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ. ಮೇಲ್ನೋಟಕ್ಕೆ ಅಕ್ರಮ ನುಸುಳುವಿಕೆ ಹಿಂದೆ ಯಾವುದೇ ಷಡ್ಯಂತ್ರಗಳು ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.
ಬಿಹಾರಕ್ಕೆ ಏರ್‌ಪೋರ್ಟ್ ಯೋಜನೆ: ಕೇಂದ್ರ ಗಿಫ್ಟ್
ನವದೆಹಲಿ: ಬಜೆಟ್‌ನಲ್ಲಿ ಬಿಹಾರಕ್ಕೆ ಭರಪೂರ ಕೊಡುಗೆ ನೀಡಿದ್ದ ಕೇಂದ್ರ ಸರಕಾರ ಇದೀಗ ಮತ್ತೊಂದು ಬಂಪರ್ ಯೋಜನೆಯನ್ನು ಬಿಹಾರಕ್ಕೆ ಘೋಷಿಸಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ 2962 ಕೋಟಿ ರು. ಮೊತ್ತದ ವಿಮಾನ ನಿಲ್ದಾಣ ಸಂಬಂಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳದ ಬಗ್‌ಡೊಗ್ರಾ ಮತ್ತು ಬಿಹಾರದ ಬಿಹಾಟದಲ್ಲಿನ ಸಿವಿಲ್ ಎನ್‌ಕ್ಲೇವ್ ಸೇರಿದೆ.
ಚೀನಾ ನಂಟಿನ ಬೆಟ್ಟಿಂಗ್;400 ಕೋಟಿ ವಂಚನೆ ಕೇಸಲ್ಲಿ ನಾಲ್ವರ ಸೆರೆ
ನವದೆಹಲಿ: ಚೀನಾ ನಂಟಿನ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಗೇಮಿಂಗ್ ಆ್ಯಪ್ ಮೂಲಕ 400 ಕೋಟಿ ರು. ವಂಚನೆ ಮಾಡಿದ ಆರೋಪ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ನಾಲ್ವರನ್ನು ಜಾರಿ ನಿದೇರ್ಶನಾಲಯ ಶುಕ್ರವಾರ ಬಂಧಿಸಿದೆ. ಅರುಣ್ ಸಾಹು, ಅಲೋಕ್ ಸಾಹು, ಚೇತನ್ ಪ್ರಕಾಶ್ ಹಾಗೂ ಜೋಸೆಫ್ ಸ್ಟಾಲಿನ್ ಬಂಧಿತರು. ಈ ನಾಲ್ವರು ‘ಫೈವಿನ್’ ಆ್ಯಪ್ ಮುಖಾಂತರ ಆನ್‌ಲೈನ್ ಗೇಮರ್‌ಗಳನ್ನು ವಂಚಿಸಿ 400 ಕೋಟಿ ರು, ಹಣವನ್ನು ಗಳಿಸಿದ್ದು, ಈ ಹಣವನ್ನು ಚೀನಾದ ಗ್ಲೋಬಲ್ ಕ್ರಿಪ್ಟೋ ಎಕ್ಸ್‌ಚೇಂಜ್ ವ್ಯಾಲೆಟ್‌ಗೆ ಜಮಾ ಮಾಡಿದ್ದಾರೆ. ಇವರ ವಿರುದ್ಧ ಕೋಲ್ಕತ್ತಾದ ಕಾಸ್ಸಿಪೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗಿ ಬಂದಿದೆ.