ಇಂಫಾಲ್: ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂಬ ಅಂಕಿ ಅಂಶಗಳು ಲಭ್ಯವಾಗಿವೆ. ಇವು ಸರ್ಕಾರದ ಪತನ ಅಥವಾ ಮುಖ್ಯಮಂತ್ರಿ ಬದಲಾವಣೆಯ ಮಟ್ಟಕ್ಕೂ ಹೋಗಬಹುದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಮಣಿಪುರ ಹಿಂಸೆ ಅವಲೋಕನಕ್ಕೆ ಸೋಮವಾರ ಸಂಜೆ ಬಿರೇನ್ ಎನ್‌ಡಿಎ ಶಾಸಕರ ಸಭೆ ಕರೆದಿದ್ದರು. 7 ಶಾಸಕರಿದ್ದ ಎನ್‌ಪಿಪಿ ಬೆಂಬಲ ಹಿಂಪಡೆದ ನಂತರ, 60 ಶಾಸಕರು ಇರುವ ವಿಧಾನಸಭೆಯಲ್ಲಿ ಎನ್‌ಡಿಎ ಬಲ ಈಗ 46ಕ್ಕೆ ಇಳಿದಿದೆ. ಈ 46 ಶಾಸಕರ ಪೈಕಿ ಸಭೆಗೆ ಹಾಜರಾಗಿದ್ದು ಕೇವಲ 27 ಶಾಸಕರು. ಇನ್ನುಳಿದ 19 ಶಾಸಕರು ಗೈರು ಹಾಜರಾಗಿದ್ದಾರೆ.19ರಲ್ಲಿ 7 ಶಾಸಕರು ವೈದ್ಯಕೀಯ ಸಬೂಬು ಹೇಳಿ ಗೈರು ಹಾಜರಾದರೆ ಉಳಿದ 12 ಜನ ಹೇಳದೇ ಕೇಳದೇ ಗೈರು ಹಾಜರಾಗಿದ್ದಾರೆ. ಇದು ಸರ್ಕಾರಕ್ಕೆ ಬಹುಮತ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಕಾಂಗ್ರೆಸ್ ಅಕ್ರೋಶ:ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಕೇವಲ 27 ಶಾಸಕರು ಸಿಎಂ ಕರೆದ ಸಭೆಗೆ ಹಾಜರಾಗಿದ್ದಾರೆ ಎಂದರೆ ಗೋಡೆಯ ಮೇಲೆ ಏನು ಬರೆದಿದೆ ಎಂಬುದು ನಿಚ್ಚಳವಾಗಿ ಕಾಣಿಸುತ್ತದೆ. ಆದರೆ ಇದನ್ನು ನೋಡಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮ್ಮನೇ ಕೂತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
==ಮಣಿಪುರ: 7 ದಿನದಲ್ಲಿ ಕುಕಿ ಉಗ್ರರ ದಮನಕ್ಕೆ ಗೊತ್ತುವಳಿಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಜನಾಂಗೀಯ ಹಿಂಸಾಚಾರದಿಂದ 6 ಜನರ ಸಾವಿಗೆ ಕಾರಣವಾದ ಕುಕಿ ಉಗ್ರರ ವಿರುದ್ಧ 7 ದಿನದಲ್ಲಿ ಸಾಮೂಹಿಕ ಕಾರ್ಯಾಚರಣೆ ನಡೆಸಬೇಕು ಎಂದು ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಶಾಸಕರ ಸಭೆ ಗೊತ್ತುವಳಿ ಅಂಗೀಕರಿಸಿದೆ.
ಸೋಮವಾರ ರಾತ್ರಿ ಎನ್‌ಡಿಎಯ 27 ಶಾಸಕರು ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಭೆ ನಡೆಸಿತ್ತು. ಈ ಸಭೆಯಲ್ಲಿ ‘6 ಜನ ನಾಗರಿಕರನ್ನು ಕೊಂದ ಕುಕಿ ಉಗ್ರರ ವಿರುದ್ಧ 7 ದಿನದಲ್ಲಿ ಸಾಮೂಹಿಕ ಕಾರ್ಯಾಚರಣೆಯನ್ನು ನಡೆಸಬೇಕು. ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು’ ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.ವಿರೋಧ:ಆದರೆ ಆಡಳಿತ ಪಕ್ಷದ ಶಾಸಕರು ಹೊರಡಿಸಿರುವ ಈ ಗೊತ್ತುವಳಿಯನ್ನು ಮೈತೇಯಿ ನಾಗರಿಕ ಸಮಾಜದ ಸಂಘಟನೆ ವಿರೋಧಿಸಿದೆ. ಅಲ್ಲದೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದೆ.==
ಮಣಿಪುರ ವಿಷಯದಲ್ಲಿ ಮಧ್ಯಪ್ರವೇಶಿಸಿ: ಮುರ್ಮುಗೆ ಖರ್ಗೆ ಪತ್ರನವದೆಹಲಿ: ಸಂಘರ್ಷ ಪೀಡಿ ಮಣಿಪುರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜನ ಶಾಂತಿಯುತವಾಗಿ ಬಾಳ್ವೆ ನಡೆಸುವಂತೆ ಮಾಡಲು ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.‘18 ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರವು ಮಕ್ಕಳು, ಮಹಿಳೆಯರು ಸೇರಿದಂತೆ 300ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಅನೇಕರು ನಿರ್ಗತಿಕರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೋತಿವೆ. ಆದ್ದರಿಂದ ಸಂವಿಧಾನದ ರಕ್ಷಕರಾದ ನೀವು ಕೂಡಲೇ ಮಧ್ಯಪ್ರವೇಶಿಸಬೇಕು. ಇದರಿಂದ ಜನ ಮತ್ತೆ ಸುರಕ್ಷಿತರಾಗಿ ಬದುಕುವಂತಾಗುತ್ತದೆ ಎಂಬ ನಂಬಿಕೆಯಿದೆ’ ಎಂದು ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.