ಜನಾಂಗೀಯ ಹಿಂಸಾಚಾರ ಮತ್ತೆ ತೀವ್ರ ಗೊಂಡ ಕಾರಣ ಮಣಿಪುರಕ್ಕೆ ಇನ್ನೂ 10 ಸಾವಿರ ಯೋಧರು

KannadaprabhaNewsNetwork |  
Published : Nov 23, 2024, 12:34 AM ISTUpdated : Nov 23, 2024, 04:34 AM IST
ಮಣಿಪುರ | Kannada Prabha

ಸಾರಾಂಶ

ಜನಾಂಗೀಯ ಹಿಂಸಾಚಾರ ಮತ್ತೆ ತೀವ್ರಗೊಂಡ ಕಾರಣ ಮಣಿಪುರಕ್ಕೆ 10,800 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಣಿಪುರದ ಮುಖ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹೇಳಿದ್ದಾರೆ.

ಇಂಫಾಲ್‌: ಜನಾಂಗೀಯ ಹಿಂಸಾಚಾರ ಮತ್ತೆ ತೀವ್ರಗೊಂಡ ಕಾರಣ ಮಣಿಪುರಕ್ಕೆ 10,800 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಣಿಪುರದ ಮುಖ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಸಭೆಯಲ್ಲಿ 5 ಸಾವಿರ ಹೆಚ್ಚುವರಿ ಕೇಂದ್ರೀಯ ಪಡೆಗಳ ಯೋಧರನ್ನು ರವಾನಿಸಲು ನಿರ್ಧರಿಸಲಾಗಿತ್ತು ಎಂದು ಮೂಲಗಳು ಹೇಳಿದ್ದವು. ಆದರೆ 5 ಸಾವಿರದ ಬದಲು 10,800 ಯೋಧರ ನಿಯೋಜನೆಗೆ ಕೇಂದ್ರ ನಿರ್ಧರಿಸಿದೆ.

‘ಈಗಾಗಲೇ ರಾಜ್ಯದ ರಾಜಧಾನಿ ಇಂಫಾಲ್‌ಗೆ ಹಲವು ತುಕಡಿಗಳು ತಲುಪಿವೆ. ಉಳಿದ ಪಡೆಗಳನ್ನು ಶೀಘ್ರದಲ್ಲೇ ಪ್ರದೇಶದಾದ್ಯಂತ ನಿಯೋಜಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ’ ಎಂದು ಸಿಂಗ್‌ ಹೇಳಿದ್ದಾರೆ.

ಇದೇ ವೇಳೆ, ಈವರೆಗೆ ರಾಜ್ಯದಲ್ಲಿ ಒಂದೂವರೆ ವರ್ಷದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 258 ಜನ ಮೃತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಣಿಪುರ: ಸಚಿವರಿಂದಲೇ ಸಿಎಂ ಬಿರೇನ್‌ ರಾಜೀನಾಮೆಗೆ ಆಗ್ರಹ! 

ಇಂಫಾಲ್‌: ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ಇದೀಗ ರಾಜಕೀಯ ಬಿಕ್ಕಟ್ಟೂ ಸೃಷ್ಟಿಯಾಗಿದೆ. ಸ್ವತಃ ಸಚಿವರೊಬ್ಬರು ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆಗೆ ಆಗ್ರಹಿಸಿದ್ದಾರೆ.

‘ಕಳೆದ 18 ತಿಂಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಂತಿ ಮರುಸ್ಥಾಪಿಸುವಲ್ಲಿ ಸೋತಮೇಲೆ ಸಿಎಂ ಬಿರೇನ್‌ ಏಕೆ ರಾಜೀನಾಮೆ ನೀಡುತ್ತಿಲ್ಲ?’ ಎಂದು ರಾಜ್ಯದ ಪೌರಾಡಳಿತ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯುಮನಾಮ್‌ ಖೇಂಚಂದ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪರಿಸ್ಥಿತಿ ಅವಲೋಕನಕ್ಕೆ ಸೋಮವಾರ ಸಿಎಂ ಬಿರೇನ್‌ ಕರೆದಿದ್ದ ಎನ್‌ಡಿಎ ಶಾಸಕರ ಸಭೆಗೆ ಗೈರಾದ 19 ಜನರ ಪೈಕಿ ಯುಮನಾಮ್‌ ಕೂಡ ಒಬ್ಬರು.

ಸಚಿವರ ಮನೆ ರಕ್ಷಣೆಗೆ ಬೇಲಿ:ಪೂರ್ವ ಇಂಫಾಲ್‌ನ ಖುರೈನಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ದಾಳಿಕೋರರಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಚಿವ ಸುಸಿಂಡೋ ಮೈತೇಯಿ ಮನೆ ಸುತ್ತ ಮುಳ್ಳು ತಂತಿಯ ಬೇಲಿ, ಕಬ್ಬಿಣದ ಬಲೆ ಹಾಕಿದ್ದಾರೆ. ನ.16ರ ದಾಳಿ ಸೇರಿದಂತೆ 3 ಬಾರಿ ತಮ್ಮ ನಿವಾಸದ ಮೇಲೆ ದಾಳಿ ನಡೆದ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ಸುಸಿಂಡೋ ತಿಳಿಸಿದ್ದಾರೆ.

7 ದಾಳಿಕೋರರು ಸೆರೆ: ನ.16ರಂದು ಮಣಿಪುರದ ಕೆಲ ಸಚಿವರು ಹಾಗೂ ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಗೆ ಹಾನಿಯುಂಟುಮಾಡಿದ ಸಂಬಂಧ 7 ಜನರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್‌ ವೈಫಲ್ಯ: ನಡ್ಡಾ ಕಿಡಿ

ನವದೆಹಲಿ: ಮಣಿಪುರ ಸಂಘರ್ಷ ನಿಯಂತ್ರಿಸುವಲ್ಲಿ ಕೇಂದ್ರ ಸೋತಿದೆ ಎಂದು ಆರೋಪಿಸಿ ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದು, ‘ಮಣಿಪುರದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ’ ಎಂದಿದ್ದಾರೆ.

‘ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಮಯದಲ್ಲಿ ಮಣಿಪುರದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೋತುದರ ಫಲವನ್ನು ರಾಜ್ಯ ಇಂದು ಅನುಭವಿಸುತ್ತಿದೆ. ಪಿ. ಚಿದಂಬರಂ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಭಾರತಕ್ಕೆ ವಿದೇಶಿ ಉಗ್ರಗಾಮಿಗಳ ಅಕ್ರಮ ವಲಸೆಯನ್ನು ಕಾನೂನುಬದ್ಧಗೊಳಿಸಿ, ಅವರಿಗೆ ಆಶ್ರಯ ನೀಡಲಾಯಿತು ಹಾಗೂ ಅವರೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಅದರ ಫಲವಾಗಿಯೇ ಇಂದು ಅರಾಜಕತೆ ಸೃಷ್ಟಿಯಾಗಿದೆ’ ಎಂದು ನಡ್ಡಾ ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದಲ್ಲಿ ಮತ್ತೆ 2 ಕಂಪನಿಗೆ ವಿಮಾನ ಸೇವೆಗೆ ಅನುಮತಿ
ತೆಲಂಗಾಣ ಸಾರಿಗೆ ಅಧಿಕಾರಿ ₹100 ಕೋಟಿ ಆಸ್ತಿ ಒಡೆಯ?