ಮೈಕ್ರೋಸಾಫ್ಟ್‌ನ ಕ್ಲೌಡ್‌ ಸೇವೆಗಳಲ್ಲಿ ಸಮಸ್ಯೆ : ಬೆಂಗಳೂರಲ್ಲಿ ಮ್ಯಾನ್ಯುಯಲ್‌ ಚೆಕ್‌ ಇನ್‌- ಇದೇ ಮೊದಲು

KannadaprabhaNewsNetwork |  
Published : Jul 20, 2024, 12:49 AM ISTUpdated : Jul 20, 2024, 05:20 AM IST
ಟಿಕೆಟ್‌ | Kannada Prabha

ಸಾರಾಂಶ

ಮೈಕ್ರೋಸಾಫ್ಟ್‌ನ ಕ್ಲೌಡ್‌ ಸೇವೆಗಳಲ್ಲಿ ಸಮಸ್ಯೆ ಎದುರಾದ ಕಾರಣ ಬೆಂಗಳೂರು, ನವದೆಹಲಿ ಸೇರಿದಂತೆ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಯಿತು.

ನವದೆಹಲಿ: ಮೈಕ್ರೋಸಾಫ್ಟ್‌ನ ಕ್ಲೌಡ್‌ ಸೇವೆಗಳಲ್ಲಿ ಸಮಸ್ಯೆ ಎದುರಾದ ಕಾರಣ ಬೆಂಗಳೂರು, ನವದೆಹಲಿ ಸೇರಿದಂತೆ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಯಿತು.

ಸಾಮಾನ್ಯವಾಗಿ ಬೋರ್ಡಿಂಗ್‌ ಪಾಸ್‌ ವಿತರಣೆ ಅತ್ಯಂತ ತ್ವರಿತವಾಗಿ ಆಗುವ ಪ್ರಕ್ರಿಯೆ. ಆದರೆ ಕಂಪ್ಯೂಟರ್‌ಗಳಲ್ಲಿ ಸಮಸ್ಯೆ ಆದ ಕಾರಣ, ಪ್ರಯಾಣಿಕರಿಗೆ ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್‌, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌. ಅಕಾಸಾ ಏರ್‌ಲೈನ್ಸ್‌ ಸಿಬ್ಬಂದಿ ಕೈಯಲ್ಲೇ ಬರೆದುಕೊಟ್ಟ ಬೋರ್ಡಿಂಗ್‌ ಪಾಸ್‌ ವಿತರಣೆ ಮಾಡಿದರು. ಇಂಥ ಬೆಳವಣಿಗೆ ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬಹುತೇಕ ವಿಮಾನ ನಿಲ್ದಾಣಗಳ ಟಿಕೆಟ್‌ ಕೌಂಟರ್‌ ಮತ್ತು ಬೋರ್ಡಿಂಗ್‌ ಪಾಸ್‌ ವಿತರಣೆ ಕೌಂಟರ್‌ಗಳಲ್ಲಿ ಪ್ರಯಾಣಿಕರ ಉದ್ದನೆಯ ಸಾಲು ಕಂಡುಬಂದಿತು.

ಇದರ ಹೊರತಾಗಿ ಚೆಕ್‌ ಇನ್‌, ಟಿಕೆಟ್‌ ಬುಕಿಂಗ್‌ ಸೇವೆಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿತು.

ಮೈಕ್ರೋಸಾಫ್ಟ್‌ ಸಮಸ್ಯೆ ಭದ್ರತಾಲೋಪ, ಸೈಬರ್‌ ದಾಳಿ ಅಲ್ಲ: ಕ್ರೌಡ್‌ಸ್ಟ್ರೈಕ್‌

ವೆಲ್ಲಿಂಗ್ಟನ್‌: ಶುಕ್ರವಾರ ಜಗತ್ತಿನಾದ್ಯಂತ ಮೈಕ್ರೋಸಾಫ್ಟ್‌ ಸೇವೆಗಳಲ್ಲಿ ವ್ಯತ್ಯಯವಾದ ಘಟನೆ, ಕಂಪನಿಯ ಸಾಫ್ಟ್‌ವೇರ್‌ನಲ್ಲಿನ ಭದ್ರತಾ ಲೋಪ ಅಲ್ಲ ಎಂದು ಸೈಬರ್‌ ಸೆಕ್ಯುರಿಟಿ ಕಂಪನಿಯಾದ ಕ್ರೌಡ್‌ಸ್ಟ್ರೈಕ್‌ ಸ್ಪಷ್ಟನೆ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಸಿಇಒ ಜಾರ್ಜ್‌ ಕರ್ಟ್ಜ್‌, ‘ಇದು ಭದ್ರತಾ ವಿಷಯ ಅಥವಾ ಸೈಬರ್‌ ದಾಳಿಯಾಗಲೀ ಅಲ್ಲ. ಸಮಸ್ಯೆ ಏನೆಂದು ಪತ್ತೆಹಚ್ಚಿ ಅದರ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಕ್ರೌಡ್‌ಸ್ಟ್ರೈಕ್‌, ಮೈಕ್ರೋಸಾಫ್ಟ್‌ಗೆ ಸೈಬರ್‌ ಭದ್ರತೆ ನೀಡುವ ಸಂಸ್ಥೆಯಾಗಿದೆ. ಬಗ್‌ ಒಂದರ ಅಪ್ಡೇಟ್‌ ಬಿಡುಗಡೆ ಮಾಡಿದ ವೇಳೆ ಶುಕ್ರವಾರ ಸಮಸ್ಯೆ ಕಾಣಿಸಿಕೊಂಡು ವಿಶ್ವಾದ್ಯಂತ ಮೈಕ್ರೋಸಾಫ್ಟ್‌ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿತ್ತು.

ಮೈಕ್ರೋಸಾಫ್ಟ್‌ ಸಮಸ್ಯೆಯಿಂದ ತೊಂದರೆ ಆಗಿಲ್ಲ: ಬ್ಯಾಂಕ್‌, ಷೇರುಪೇಟೆ

ಮುಂಬೈ/ನವದೆಹಲಿ: ಪ್ರಪಂಚದಾದ್ಯಂತ ಮೈಕ್ರೋಸಾಫ್ಟ್‌ ತಂತ್ರಾಂಶದ ತೊಂದರೆ ಆಗಿದ್ದರೂ ಎಸ್‌ಬಿಐ, ಎಚ್‌ಡಿಎಫ್‌ಸಿ, ಎಕ್ಸಿಸ್‌, ಐಸಿಐಸಿಐ ಬ್ಯಾಂಕ್‌, ಯುಪಿಐ ಸೇವೆ ಒದಗಿಸುವ ಎನ್‌ಪಿಸಿಐ, ಬಾಂಬೆ ಷೇರುಪೇಟೆ ಹಾಗೂ ನಿಫ್ಟಿಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.ಈ ಬಗ್ಗೆ ಎಸ್‌ಬಿಐ ಅಧ್ಯಕ್ಷ ದಿನೇಶ್‌ ಖಾರ ಮಾತನಾಡಿ, ನಮ್ಮಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಹಾಗೂ ಎನ್‌ಪಿಸಿಐ ಅಧಿಕಾರಿಗಳೂ ಇದೇ ಹೇಳಿಕೆ ನೀಡಿದ್ದಾರೆ.

ಅದೇ ರೀತಿ ನಿಫ್ಟಿ ಹಾಗೂ ಷೇರುಪೇಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಎಲ್ಲವೂ ಎಂದಿನಂತೆ ಕಾರ್ಯ ನಿರ್ವಹಿಸಿದವು ಎಂದು ಷೇರುಪೇಟೆ ವಕ್ತಾರರು ತಿಳಿಸಿದ್ದಾರೆ.ಆದರೆ ಭಾರತದ 10 ಬ್ಯಾಂಕ್‌ಗಳಲ್ಲಿ ಮಾತ್ರ ಸಮಸ್ಯೆ ಆಗಿದೆ. ಉಳಿದ ಯಾವ ಬ್ಯಾಂಕಲ್ಲೂ ಸಮಸ್ಯೆ ಅಗಿಲ್ಲ ಎಂದು ಆರ್‌ಬಿಐ ಹೇಳಿದೆ.

PREV

Recommended Stories

ಟ್ರಂಪ್‌-ಪುಟಿನ್‌ ಭೇಟಿ: ಭಾರತದ ಮೇಲಿನ ಸುಂಕ ಕಡಿತ?
ಸಿಂದೂರದಲ್ಲಿ 13 ತನ್ನ ಯೋಧರು ಸಾವು: ಪಾಕ್‌ ಒಪ್ಪಿಗೆ