ಸಂಸತ್‌, ತಾಜ್‌ ದಾಳಿ ಹಿಂದೆ ಅಜರ್‌: ಜೈಷ್‌ ಕಮಾಂಡರ್‌

KannadaprabhaNewsNetwork |  
Published : Sep 18, 2025, 01:12 AM IST
ಉಗ್ರ  | Kannada Prabha

ಸಾರಾಂಶ

ಭಾರತದಲ್ಲಿ ವಿಧ್ವಂಸ ಸೃಷ್ಟಿಸಿದ್ದ ಸಂಸತ್‌ ಮೇಲಿನ ದಾಳಿ ಹಾಗೂ ಮುಂಬೈನಲ್ಲಿ ನಡೆದ 26/11 ಸರಣಿ ಸ್ಫೋಟ ಪ್ರಕರಣದ ರೂವಾರಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಎಂದು ಅದೇ ಸಂಘಟನೆಯ ಕಮಾಂಡರ್‌ ಮಸೂದ್‌ ಇಲ್ಯಾಸಿ ಕಾಶ್ಮೀರಿ ಬಹಿರಂಗವಾಗಿ ಹೇಳಿದ್ದಾನೆ.

ಸಂಗಡಿಗನಿಂದ ಉಗ್ರ ಮಸೂದ್‌ ಬಣ್ಣ ಬಯಲು

ಸತ್ತ ಉಗ್ರರಿಗೆ ಮುನೀರ್‌ ಆದೇಶದಂತೆ ಗೌರವ==

ನವದೆಹಲಿ: ಭಾರತದಲ್ಲಿ ವಿಧ್ವಂಸ ಸೃಷ್ಟಿಸಿದ್ದ ಸಂಸತ್‌ ಮೇಲಿನ ದಾಳಿ ಹಾಗೂ ಮುಂಬೈನಲ್ಲಿ ನಡೆದ 26/11 ಸರಣಿ ಸ್ಫೋಟ ಪ್ರಕರಣದ ರೂವಾರಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಎಂದು ಅದೇ ಸಂಘಟನೆಯ ಕಮಾಂಡರ್‌ ಮಸೂದ್‌ ಇಲ್ಯಾಸಿ ಕಾಶ್ಮೀರಿ ಬಹಿರಂಗವಾಗಿ ಹೇಳಿದ್ದಾನೆ.

ವೇದಿಕೆಯೊಂದರಲ್ಲಿ ಮಾತನಾಡಿದ ಇಲ್ಯಾಸಿ, ‘ದೆಹಲಿಯ ತಿಹಾರ್‌ ಜೈಲಿಂದ ತಪ್ಪಿಸಿಕೊಂಡ ಬಳಿಕ ಅಜರ್‌ ಪಾಕಿಸ್ತಾನಕ್ಕೆ ಬಂದು, ಬಾಲಾಕೋಟ್‌ನಲ್ಲಿ ತಮ್ಮ ಉಗ್ರ ಚಟುವಟಿಕೆ ಆರಂಭಿಸಿದರು. ಇಲ್ಲಿಂದಲೇ ದೆಹಲಿ ಮತ್ತು ಮುಂಬೈನಲ್ಲಿ ದಾಳಿ ನಡೆಸಿದ ಶೂರ ಅವರು’ ಎಂದು ಬಣ್ಣಿಸಿದ್ದಾನೆ. ಈ ಮೂಲಕ ಮಸೂದ್‌ ಅಜರ್‌ನ ಪಾಪಕೃತ್ಯಗಳನ್ನು ಒಪ್ಪಿಕೊಳ್ಳುವುದರ ಜತೆಗೆ, ಪಾಕಿಸ್ತಾನ ಉಗ್ರರ ಸ್ವರ್ಗ ಎಂಬುದನ್ನು ಆ ದೇಶ ಅಲ್ಲಗಳೆಯಲು ಸಾಧ್ಯವಾಗದಂತೆ ಮಾಡಿದ್ದಾನೆ.

ಇತ್ತೀಚೆಗಷ್ಟೇ ಇಲ್ಯಾಸ್‌, ಆಪರೇಷನ್‌ ಸಿಂದೂರದಿಂದಾಗಿ ಬಹಾವಲ್ಪುರದಲ್ಲಿದ್ದ ಅಜರ್‌ನ ಪರಿವಾರದ 10 ಮಂದಿ ಹತರಾಗಿದ್ದರು ಎಂದು ಒಪ್ಪಿಕೊಂಡಿದ್ದ.

ಭಾರತದಲ್ಲಿ ಉಗ್ರಚಟುವಟಿಕೆಗಳಲ್ಲಿ ತೊಡಗಿದ್ದ ಅಜರ್‌ನಲ್ಲಿ 1994ರ ಫೆಬ್ರವರಿಯಲ್ಲಿ ಜಮ್ಮುಕಾಶ್ಮೀರದ ಅನಂತನಾಗ್‌ನಲ್ಲಿ ಬಂಧಿಸಲಾಗಿತ್ತು. ಆದರೆ 1999ರಲ್ಲಿ ಉಗ್ರರಿಂದ ಅಪಹರಣವಾದ ಕಂದಹಾರ್‌ ವಿಮಾನದ ಬಿಡುಗಡೆಗೆ ಪ್ರತಿಯಾಗಿ ಅಜರ್‌ನನ್ನು ಜೈಲಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಆತ ಪಾಕಿಸ್ತಾನಕ್ಕೆ ಪರಾರಿಯಾಗಿ ಜೈಷ್‌ ಸಂಘಟನೆ ಹುಟ್ಟುಹಾಕಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ.

ಮುನೀರ್‌ ಮಾತಿನಂತೆ ಹತ ಉಗ್ರರಿಗೆ ಗೌರವ:

ಅಜರ್‌ ಪರಿವಾರದವರು ಸೇರಿದಂತೆ ಭಾರತ ನಡೆಸಿದ ದಾಳಿಯಲ್ಲಿ ಮೃತಪಟ್ಟ ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನ ಯೋಧರು ಭಾಗಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ಈಗ ಈ ಬಗ್ಗೆಯೂ ಮಾತನಾಡಿರುವ ಕಾಶ್ಮೀರಿ, ‘ಅವರಿಗೆಲ್ಲ ಗೌರವ ನೀಡಲು ಸೂಚಿಸಿದ್ದೇ ಪಾಕ್‌ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌’ ಎಂದೂ ಹೇಳಿದ್ದಾನೆ.

PREV

Recommended Stories

ಕೃಷಿ ತ್ಯಾಜ್ಯ ಸುಡುವ ರೈತರನ್ನುಬಂಧಿಸಿ ಪಾಠ ಕಲಿಸಿ: ಸುಪ್ರೀಂ
ಕದನವಿರಾಮಕ್ಕೆ ನಕ್ಸಲರ ಮನವಿ