ಮಣಿಪುರ ಹಿಂಸೆಗೆ ವರ್ಷ: ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡ

KannadaprabhaNewsNetwork | Updated : May 04 2024, 05:03 AM IST

ಸಾರಾಂಶ

ಮಣಿಪುರದಲ್ಲಿ ಆದಿವಾಸಿಗಳ ಒಗ್ಗಟ್ಟಿನ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರಕ್ಕೆ ಶುಕ್ರವಾರ (ಮೇ.3) ಭರ್ತಿ ಒಂದು ವರ್ಷ ತುಂಬಿದೆ. ಸದ್ಯಕ್ಕೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಮಣಿಪುರ ಶಾಂತವಾಗಿದ್ದರೂ ಅಲ್ಲಿನ ಎರಡು ಪ್ರಬಲ ಸಮುದಾಯಗಳ ನಡುವೆ ಹರಡಿದ ದ್ವೇಷ ಇನ್ನೂ ಕೊನೆಯಾಗಿಲ್ಲ

ಇಂಫಾಲ್‌: ಮಣಿಪುರದಲ್ಲಿ ಆದಿವಾಸಿಗಳ ಒಗ್ಗಟ್ಟಿನ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರಕ್ಕೆ ಶುಕ್ರವಾರ (ಮೇ.3) ಭರ್ತಿ ಒಂದು ವರ್ಷ ತುಂಬಿದೆ. ಸದ್ಯಕ್ಕೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಮಣಿಪುರ ಶಾಂತವಾಗಿದ್ದರೂ ಅಲ್ಲಿನ ಎರಡು ಪ್ರಬಲ ಸಮುದಾಯಗಳ ನಡುವೆ ಹರಡಿದ ದ್ವೇಷ ಇನ್ನೂ ಕೊನೆಯಾಗದೆ ರಾಜ್ಯವನ್ನು ಅಘೋಷಿತವಾಗಿ ವಿಭಜಿಸಿದೆ.

ಮಣಿಪುರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಚುನಾವಣಾ ಆಯೋಗ ಇತ್ತೀಚೆಗೆ ಲೋಕಸಭಾ ಚುನಾವಣೆಯನ್ನು ಒಂದೇ ಕ್ಷೇತ್ರದಲ್ಲಿ ಎರಡು ಹಂತಗಳಲ್ಲಿ ನಡೆಸಿದುದೇ ಸಾಕ್ಷಿಯಾಗಿದೆ.

ಗಲಭೆಯ ಬಳಿಕ ಮೈತೇಯಿಗಳು ಇಂಫಾಲ್‌ ಕಣಿವೆಯಲ್ಲಿ ಬಂದು ನೆಲೆಸಿದ್ದರೆ, ಕುಕಿಗಳು ಬೆಟ್ಟ ಪ್ರದೇಶಕ್ಕೆ ತಮ್ಮ ವಾಸಸ್ಥಳ ಬದಲಿಸಿಕೊಂಡಿದ್ದಾರೆ. ಎರಡು ಪ್ರದೇಶಗಳ ನಡುವೆ ಇವರೇ ಸ್ವಯಂಸೇವಕರ ತಂಡ ಕಟ್ಟಿಕೊಂಡು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ತಮ್ಮ ಎದುರಾಳಿ ಸಮುದಾಯಕ್ಕೆ ಸೇರಿಲ್ಲ ಮತ್ತು ಅಶಾಂತಿ ಸೃಷ್ಟಿಸುವ ವ್ಯಕ್ತಿಯಲ್ಲ ಎಂದು ಖಚಿತವಾದ ಬಳಿಕವಷ್ಟೇ ಹಣ ಪಾವತಿಸಿ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಅಲ್ಲಿ ಬಹುತೇಕ ಎಲ್ಲರೂ ಗನ್‌ ಖರೀದಿಸಿ ಲೈಸೆನ್ಸ್ ಪಡೆದುಕೊಂಡು ತಮ್ಮ ತೋಳಿಗೆ ನೇತು ಹಾಕಿಕೊಂಡು ತಿರುಗುವುದು ಸಾಮಾನ್ಯವಾಗಿದೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸುರಕ್ಷತೆಗಾಗಿ ತಮ್ಮ ವ್ಯಾಸಂಗವನ್ನೇ ನಿಲ್ಲಿಸಿದ್ದಾರೆ. ಜೊತೆಗೆ ಗಲಭೆಯಲ್ಲಿ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು 50 ಸಾವಿರಕ್ಕೂ ಹೆಚ್ಚು ಜನ ಇನ್ನೂ ನಿರಾಶ್ರಿತ ಶಿಬಿರಗಳಲ್ಲೇ ವಾಸಿಸುತ್ತಿದ್ದಾರೆ.

ಹಿಂಸೆಗೆ ಕಾರಣ?:  ಹಿಂದೂ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಕುರಿತು ಪರಿಶೀಲಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು. ಇದರ ವಿರುದ್ಧ ಕ್ರೈಸ್ತ ಕುಕಿಗಳು ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಈ ಹೋರಾಟ ಬಳಿಕ ಹಿಂಸಾರೂಪ ಪಡೆದಿತ್ತು.

Share this article