ಪಾಕ್‌ನಿಂದ ಜನವಸತಿ ಪ್ರದೇಶ, ಆಸ್ಪತ್ರೆಗಳ ಮೇಲೆ ದಾಳಿ
ಆಸ್ಪತ್ರೆ ಸಂಪೂರ್ಣ ನಾಶ, 250ಕ್ಕೂ ಹೆಚ್ಚು ಮಂದಿಗೆ ಗಾಯಪಾಕ್ ಸರ್ಕಾರ ವಿರುದ್ಧ ತಾಲಿಬಾನ್ ಆಡಳಿತದಿಂದ ಆರೋಪ
ಇಸ್ಲಾಮಾಬಾದ್/ಕಾಬೂಲ್ಅಫ್ಘಾನಿಸ್ತಾನ ಜತೆಗಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಪಾಕಿಸ್ತಾನ ಸೋಮವಾರ ರಾತ್ರಿ ಆಫ್ಘನ್ ರಾಜಧಾನಿ ಕಾಬೂಲ್, ನಂಗಹಾರ್ ಮತ್ತಿತರ ಪ್ರದೇಶಗಳ ಮೇಲೆ ಭಾರೀ ವಾಯು ದಾಳಿ ನಡೆಸಿದೆ. ಜನವಸತಿ ಪ್ರದೇಶ ಹಾಗೂ ಮಾದಕವಸ್ತು ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯೊಂದರ ಮೇಲೆ ನಡೆದ ಈ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಆರೋಪಿಸಿದೆ.
ಕಾಬೂಲ್‌ನಲ್ಲಿರುವ ಮಾದಕವಸ್ತು ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಭಾರೀ ದಾಳಿ ನಡೆಸಿದ್ದು, ಈ ವೇಳೆ ಆಸ್ಪತ್ರೆ ಸಂಪೂರ್ಣ ನಾಶವಾಗಿದೆ. ಒಟ್ಟಾರೆ ಪಾಕಿಸ್ತಾನ ದಾಳಿಯಲ್ಲಿ 400 ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ಹೇಳಿಕೊಂಡಿದ್ದಾರೆ.
ಆದರೆ ಅಪ್ಘಾನಿಸ್ತಾನದ ಈ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿದೆ. ಭಯೋತ್ಪಾದಕರ ನೆಲೆಗಳು ಹಾಗೂ ಶಸ್ತ್ರಾಸ್ತ್ರ ಕೋಠಿಯನ್ನು ಗುರಿಯಾಗಿರಿಸಿಕೊಂಡು ಕರಾರುವಕ್ಕಾಗಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಸೋಮವಾರವಷ್ಟೇ ಆಫ್ಘನ್ ಮತ್ತು ಪಾಕಿಸ್ತಾನ ಸೇನೆಯ ನಡುವೆ ಗಡಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆಸಿತ್ತು. ಈ ವೇಳೆ ನಾಲ್ವರು ನಾಗರಿಕರು ಮೃತಪಟ್ಟಿದ್ದರು ಎಂದು ತಾಲಿಬಾನ್ ಆಡಳಿತ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ರಾತ್ರೋರಾತ್ರಿ ಪಾಕಿಸ್ತಾನ ಸೇನೆ ಈ ದಾಳಿ ನಡೆಸಿದೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಆರೋಪ ಮೇಲೆ ಪಾಕಿಸ್ತಾನ ದಾಳಿ ನಡೆಸುತ್ತಿದೆ.ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ:
ಅಫ್ಘಾನಿಸ್ತಾನದ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಮೇಲೆ ಭಾರತವು ಮಂಗಳವಾರ ವಿಶ್ವಸಂಸ್ಥೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಇಸ್ಲಾಮಾಪೋಬಿಯಾದ ಕಟ್ಟು ಕಥೆ ಕಟ್ಟಿ ನೆರೆಯ ದೇಶಗಳ ಮೇಲೆ ಆರೋಪಟ್ಟುವ ಪಾಕಿಸ್ತಾನ, ತಾನು ಮಾತ್ರ ರಂಜಾನ್ ಹಬ್ಬದ ಸಂದರ್ಭದಲ್ಲೇ ದೇಶದ ಒಳಗೆ ಮತ್ತು ನೆರೆಯ ಅಫ್ಘಾನಿಸ್ತಾನದಲ್ಲಿ ಅಹಮದೀಯರ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ.