ಸಾರಾಂಶ
ಕಾಬೂಲ್: ತಾಲಿಬಾನ್ ಉಗ್ರರ ಆಡಳಿತದಲ್ಲಿ ಶಿಕ್ಷಣ, ಸಂಗೀತ, ಬಹಿರಂಗ ತಿರುಗಾಟ, ಉದ್ಯೋಗದ ಮೂಲಭೂತ ಹಕ್ಕುಗಳನ್ನೇ ಕಳೆದುಕೊಂಡಿದ್ದ ಅಫ್ಘಾನಿಸ್ತಾನದ ಮಹಿಳೆಯರು, ಇತ್ತೀಚೆಗೆ ಸಂಭವಿಸಿದ ವೇಳೆ ತಮ್ಮ ಜೀವ ಉಳಿಸಿಕೊಳ್ಳುವ ಹಕ್ಕುಗಳನ್ನೂ ಕಳೆದುಕೊಂಡರು ಎಂಬ ಮನಮಿಡಿಯುವ ವಿಷಯ ಬೆಳಕಿಗೆ ಬಂದಿದೆ.
ಪಕ್ಕಾ ಷರಿಯಾ ಕಾನೂನು ಪಾಲಿಸುವ ತಾಲಿಬಾನ್ ಉಗ್ರರು, ಭೂಕಂಪದಿಂದ ಉರುಳಿಬಿದ್ದ ಕಟ್ಟಡಗಳ ಅಡಿಯಲ್ಲಿ ಮಹಿಳೆಯರು ಸಿಕ್ಕಿಬಿದ್ದಿದ್ದರೆ ಅವರನ್ನು ಪುರುಷ ರಕ್ಷಣಾ ಸಿಬ್ಬಂದಿ ಮೈಮುಟ್ಟಿ ರಕ್ಷಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಪುರುಷ ರಕ್ಷಣಾ ಸಿಬ್ಬಂದಿಗಳು ಮಹಿಳೆಯರ ರಕ್ಷಣೆಗೆ ಹೋಗುತ್ತಿಲ್ಲ. ಹೀಗಾಗಿ ಕಟ್ಟಡದೊಳಗೆ ಸಿಕ್ಕಿಬಿದ್ದವರು ಹಾಗೆಯೇ ನರಳಾಡುತ್ತಿದ್ದಾರೆ, ಇಲ್ಲವೇ ಹಲವು ಕಡೆ ನೂರಾರು ಮಹಿಳೆಯರು ಸಾವನ್ನಪ್ಪಿರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಯಾವುದೇ ವಿದೇಶಿ ನೆರವೂ ಇಲ್ಲದೇ ಸ್ಥಳೀಯ ಪುರುಷ ರಕ್ಷಣಾ ಸಿಬ್ಬಂದಿ ಕೂಡಾ ರಕ್ಷಣೆ ಮಾಡದ ಹಿನ್ನೆಲೆಯಲ್ಲಿ ಕೆಲವು ಕಡೆ ಮಹಿಳೆಯರು ಸಾಧ್ಯವಾದಷ್ಟು ಮಹಿಳೆಯರನ್ನು ರಕ್ಷಿಸುವ ಯತ್ನ ಮಾಡಿದ್ದಾರೆ. ಉಳಿದ ಕಡೆ ಅವರ ಗೋಳು ಯಾರೂ ಕೇಳುವವರಿಲ್ಲ. ಇದು ಈಗಾಗಲೇ 2400 ದಾಟಿರುವ ಸಾವಿನ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು, ನೆರವಿನ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ತಾಲಿಬಾನ್ ಆಡಳಿತದಲ್ಲಿ ತಂದೆ, ಸಹೋದರ, ಪತಿ, ಪುತ್ರನನ್ನು ಹೊರತುಪಡಿಸಿ ಬೇರಾವ ಗಂಡಸೂ ಹೆಣ್ಣನ್ನು ಮುಟ್ಟುವಂತಿಲ್ಲ. ಪುರುಷ ವೈದ್ಯರು ಸಹ ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ವಿಪರ್ಯಾಸವೆಂದರೆ, ಸ್ತ್ರೀಯರ ಶುಶ್ರೂಷೆಗೆ ಆ ದೇಶದಲ್ಲಿ ವೈದ್ಯೆಯರೂ ಇಲ್ಲ. ಈ ಮೂಲಕ ತುರ್ತುಸ್ಥಿತಿಗಳನ್ನು ಅವರನ್ನು ರಕ್ಷಿಸಲು, ಬದುಕಿಸಲು ಯಾರೂ ಬರದಂತಾಗಿದೆ.