ನವದೆಹಲಿ: ರಾಜಕೀಯ ಪ್ರಬುದ್ಧತೆ ಕೊರತೆಯ ಕಾರಣ ನೀಡಿ ಬಹುಜನ ಸಮಾಜ ಪಕ್ಷದಿಂದ ತಾವೇ ಉಚ್ಚಾಟಿಸಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ.
ಮುಖ್ಯ ರಾಷ್ಟ್ರೀಯ ಯೋಜಕ ಹುದ್ದೆ ಪಕ್ಷದ 2ನೇ ಮುಖ್ಯ ಸ್ಥಾನವಾಗಿದ್ದು, ಇದನ್ನು ಆಕಾಶ್‌ರಿಗಾಗಿಯೇ ಸೃಷ್ಟಿಸಲಾಗಿದೆ. ಅವರು 3 ರಾಷ್ಟ್ರೀಯ ಸಂಯೋಜಕರ ಮುಖ್ಯಸ್ಥರಾಗಿರಲಿದ್ದಾರೆ.
ರಾಜಕೀಯ ಪ್ರಬುದ್ಧತೆ ಕೊರತೆ ಕಾರಣ ನೀಡಿ ಮಾರ್ಚ್‌ನಲ್ಲಿ ಆಕಾಶ್‌ರನ್ನು ಬಿಎಸ್‌ಪಿಯಿಂದ ಹೊರಗಟ್ಟಲಾಗಿತ್ತು. ಕಳೆದ ತಿಂಗಳು ಅವರು ಕ್ಷಮೆ ಕೇಳಿ, ಮಾಯಾವತಿಯವರನ್ನು ತಮ್ಮ ಏಕೈಕ ರಾಜಕೀಯ ಗುರುವಾಗಿ ಪರಿಗಣಿಸುವುದಾಗಿ ಹೇಳಿದ ಕಾರಣ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.
ಗಡಿಯಲ್ಲಿ ಸಿಡಿಯದೇ ಉಳಿದಿದ್ದ 42 ಶೆಲ್ ಯಶಸ್ವಿ ನಿಷ್ಕ್ರಿಯ
ಪೂಂಛ್: ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಹಾರಿಬಂದು ಸಿಡಿಯದೇ ಉಳಿದಿದ್ದ 42 ಶೆಲ್‌ಗಳನ್ನು (ಬಾಂಬ್) ಭಾರತದ ಸೇನಾ ಪಡೆಗಳು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿವೆ.ಗಡಿ ನಿಯಂತ್ರಣ ರೇಖೆಗೆ ಗಡಿ ಹೊಂದಿರುವ ಪೂಂಛ್ ಜಿಲ್ಲೆಯ ಝುಲ್ಲಾಸ್, ಸಾಲೋತ್ರಿ, ಧರಾತಿ ಮತ್ತು ಸಲಾನಿ ಎಂಬಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಅಧಿಕಾರಿಗಳು ಯಶಸ್ವಿಯಾಗಿ ಶೆಲ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇವುಗಳ ಇರುವಿಕೆ ಪತ್ತೆಯಾದ ಬೆನ್ನಲ್ಲೇ ಭಾರತೀಯ ಸೇನೆ ಸ್ಥಳೀಯ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಯಾವುದೇ ಪ್ರಾಣಹಾನಿ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಯಶಸ್ವಿಯಾಗಿ ಶೆಲ್‌ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಸೇನೆ ತಿಳಿಸಿದೆ.
ಸಂಭಲ್ ಮಸೀದಿ ಸರ್ವೇ ಮುಂದುವರಿಕೆಗೆ ಕೋರ್ಟ್ ಸಮ್ಮತಿ
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿ ಮತ್ತು ಹರಿಹರ ದೇಗುಲದ ಸರ್ವೇ ನಡೆಸುವಂತೆ ಸಂಭಲ್ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಮೊಘಲ್ ಚಕ್ರವರ್ತಿ ಬಾಬರ್ ಸಂಭಲ್‌ನಲ್ಲಿದ್ದ ಹರಿಹರ ಮಂದಿರವನ್ನು 1526ರಲ್ಲಿ ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ವಕೀಲ ಹರಿಶಂಕರ್ ಜೈನ್ ಮತ್ತು ಇತರ 7 ಮಂದಿ ಸಂಭಲ್‌ನ ಸಿವಿಲ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಸಂಭಲ್ ಸಿವಿಲ್ ಕೋರ್ಟ್, ಆಯುಕ್ತರನ್ನು ನೇಮಿಸಿ ಮಸೀದಿಯಲ್ಲಿ ಆರಂಭಿಕ ಸಮೀಕ್ಷೆಯನ್ನು ನಡೆಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ, 2024ರ ನ.19ರಂದು ಮಸೀದಿ ಸಮಿತಿಯವರು ಅಲಹಾಬಾದ್ ಹೈಕೋರ್ಟ್‌ಗೆ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ನ್ಯಾ. ರೋಹಿತ್ ರಂಜನ್ ಅಗರ್ವಾಲ್ ಅವರ ಅಲಹಾಬಾದ್ ಹೈಕೋರ್ಟ್ ಪೀಠವು ಅರ್ಜಿಯನ್ನು ವಜಾಗೊಳಿಸಿದ್ದು, ಮಂದಿರದ ಸರ್ವೆಗೆ ಅವಕಾಶ ನೀಡಿದೆ.
ಗಾಜಾದ 2ನೇ ದೊಡ್ಡ ನಗರ ಸ್ಥಳಾಂತರಕ್ಕೆ ಇಸ್ರೇಲ್ ಸೂಚನೆ: ದಾಳಿ ಸಂಭವ
ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆ ಇಸ್ರೇಲ್ ಸೇನೆಯು ಗಾಜಾದ ಎರಡನೇ ಅತಿದೊಡ್ಡ ನಗರವಾಗಿರುವ ಖಾನ್ ಯೂನಿಸ್ ಮತ್ತು ಹತ್ತಿರದ ಪಟ್ಟಣಗಳಲ್ಲಿರುವ ನಿವಾಸಿಗಳಿಗೆ ಆ ಸ್ಥಳದಿಂದ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ.ಇಸ್ರೇಲ್ ಹೊಸ ಕಾರ್ಯಾಚರಣೆಯೊಂದಿಗೆ ಗಾಜಾದಲ್ಲಿ ತನ್ನ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದಂತೆ ಗಾಜಾ ನಿವಾಸಿಗಳನ್ನು ಸ್ಥಳಾಂತರಗೊಳಿಸುವ ಆದೇಶ ಬಂದಿದೆ. ಈ ಬಗ್ಗೆ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚಾಯ್ ಅಡ್ರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ಇಡೀ ಪ್ರದೇಶವನ್ನು ಅಪಾಯಕಾರಿ ಯುದ್ಧ ವಲಯ ಎಂದು ಪರಿಗಣಿಸಲಾಗುತ್ತದೆ’ ಎಂದಿದ್ದಾರೆ.
ಬಲೂಚ್ ಮಾರುಕಟ್ಟೆಯಲ್ಲಿ ಸ್ಫೋಟ: 4 ಸಾವು, 20 ಮಂದಿಗೆ ಗಾಯ
ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾನುವಾರ ಬಾಂಬ್ ಸ್ಪೋಟಗೊಂಡಿದ್ದು, ಇಲ್ಲಿನ ಕಿಲ್ಲಾ ಅಬ್ದುಲ್ಲಾ ಜಿಲ್ಲೆಯ ಜಬ್ಬಾರ್ ಮಾರುಕಟ್ಟೆಯಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು. 20 ಮಂದಿ ಗಾಯಗೊಂಡಿದ್ದಾರೆ.ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಿಲ್ಲಾ ಅಬ್ದುಲ್ಲಾ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು,ಕಟ್ಟಡಗಳು, ಅಂಗಡಿಗಳು ಧ್ವಂಸಗೊಂಡಿದೆ.
ಹಲವೆಡೆ ಬೆಂಕಿ ಕಾಣಿಸಿಕೊಂಡು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನು ಘಟನೆಯಲ್ಲಿ 4 ಮಂದಿ ನಾಗರಿಕರು ಸಾವನ್ನಪ್ಪಿದ್ದರೆ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆ ದಾಳಿಕೋರರು ಮತ್ತು ಫ್ರಾಂಟಿಯರ್ ಕಾರ್ಪ್ಸ್( ಎಫ್‌ಸಿ) ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಆದರೆ ಇದುವರೆಗೆ ಯಾವುದೇ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸದ್ಯ ಆ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.