ದಿಲ್ಲಿ ಗಡಿಯಲ್ಲಿ ರೈತ-ಪೊಲೀಸ್‌ ಸಂಘರ್ಷ ತೀವ್ರ

KannadaprabhaNewsNetwork |  
Published : Feb 15, 2024, 01:32 AM ISTUpdated : Feb 15, 2024, 08:13 AM IST
Delhi Chalo

ಸಾರಾಂಶ

ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾಯ್ದೆ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪಂಜಾಬ್‌ ಮತ್ತು ಹರ್ಯಾಣದ 200 ರೈತ ಸಂಘಟನೆಗಳು ಕರೆಕೊಟ್ಟಿರುವ ‘ದೆಹಲಿ ಚಲೋ’ ಹೋರಾಟ ಬುಧವಾರವೂ ಮುಂದುವರೆದಿದೆ.

ಚಂಡೀಗಢ/ನವದೆಹಲಿ: ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾಯ್ದೆ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪಂಜಾಬ್‌ ಮತ್ತು ಹರ್ಯಾಣದ 200 ರೈತ ಸಂಘಟನೆಗಳು ಕರೆಕೊಟ್ಟಿರುವ ‘ದೆಹಲಿ ಚಲೋ’ ಹೋರಾಟ ಬುಧವಾರವೂ ಮುಂದುವರೆದಿದೆ. 

ರೈತರಿಗೆ ಪಂಜಾಬ್‌-ಹರ್ಯಾಣದ ಶಂಭು ಗಡಿ ಹಾಗೂ ಇತರ ಗಡಿ ಪ್ರದೇಶಗಳಲ್ಲಿ ಪಂಜಾಬ್‌ನಿಂದ ಹಾಗೂ ಹರ್ಯಾಣದಿಂದ ಹೊರಟ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದ್ದು, ಈ ವೇಳೆ ಸಂಘರ್ಷ ಏರ್ಪಟ್ಟಿದೆ. 

ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.ಆದರೆ ಪೊಲೀಸರು ರೈತರನ್ನು ನಿಯಂತ್ರಿಸುವಲ್ಲಿ ಕೊಂಚ ಯಶಸ್ವಿಯಾಗಿದ್ದು, ದಿಲ್ಲಿಗೆ ಸಮೀಪಿಸಲು ರೈತರಿಗೆ ಸಾಧ್ಯವಾಗಿಲ್ಲ. 

ಇದರ ನಡುವೆ, ಕೇಂದ್ರ ಸರ್ಕಾರವು 3ನೇ ಸುತ್ತಿನ ಮಾತುಕತೆಗೆ ಮುಂದಾಗಿದೆ. ಗುರುವಾರ ಸಂಜೆ ಕೇಂದ್ರ ಸಚಿವರಾದ ಅರ್ಜುನ್‌ ಮುಂಡಾ, ಪೀಯೂಶ್‌ ಗೋಯಲ್‌ ಹಾಗೂ ನಿತ್ಯಾನಂದ ರಾಯ್‌ ಅವರ ನಿಯೋಗವು ರೈತ ನಿಯೋಗದ ಜತೆ ಮಾತುಕತೆ ನಡೆಸಲಿದೆ. 

ಹೀಗಾಗಿ ಮಾತುಕತೆ ಪೂರ್ಣಗೊಳ್ಳುವವರೆಗೆ ಮತ್ತಷ್ಟು ಮುನ್ನುಗ್ಗದೇ ತಾವಿರುವ ಶಂಭು ಗಡಿಯಲ್ಲೇ ಠಿಕಾಣಿ ಹೂಡುವುದಾಗಿ ರೈತ ನಾಯಕರು ಘೋಷಿಸಿದ್ದಾರೆ.

ರೈತರ ಜತೆ ಮಾತುಕತೆಗೆ ವೇದಿಕೆ ಸಿದ್ಧಪಡಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮಧ್ಯಪ್ರವೇಶಿಸಿದ್ದು, ಕೃಷಿ ಸಚಿವ ಅರ್ಜುನ್‌ ಮುಂಡಾ ಜತೆ ಬುಧವಾರ ಸಂಜೆ ಮಾತುಕತೆ ನಡೆಸಿ ಕೆಲವು ಸಲಹೆ ಸೂಚನೆ ನೀಡಿದ್ದಾರೆ.

ತಡೆಗೋಡೆ ತೆರವಿಗೆ ರೈತರ ಯತ್ನ: ಈ ನಡುವೆ ಹರ್ಯಾಣ-ಪಂಜಾಬ್‌ ಗಡಿ ಭಾಗವಾದ ಶಂಭು ಗಡಿಯಲ್ಲಿ ಬುಧವಾರ ತಡೆಗೋಡೆ ತೆರವು ಮಾಡಲು ರೈತರು ಯತ್ನಿಸಿದ್ದಾರೆ. 

ಈ ವೇಳೆ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದೇ ರೀತಿಯ ಬೆಳವಣಿಗೆ ಜಿಂದ್ ಜಿಲ್ಲೆಯ ದಾತಾ ಸಿಂಗ್‌ವಾಲಾ-ಕನೌರಿ ಗಡಿಯಲ್ಲಿ ಕಂಡುಬಂದಿದೆ.

ಹೀಗಾಗಿ ದಿಲ್ಲಿ ಚಲೋ ಪಂಜಾಬ್‌ ಮತ್ತು ಹರ್ಯಾಣ ನಡುವಿನ ಶಂಭು ಗಡಿಯಲ್ಲೇ ಸ್ಥಗಿತವಾಗಿದೆ. ಪಂಜಾಬ್‌ ರೈತರ ಸಾವಿರಾರು ಟ್ರ್ಯಾಕ್ಟರ್‌ ಸೇರಿದಂತೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. 

ಮಂಗಳವಾರ ಬೆಳಗ್ಗೆ ಆರಂಭವಾಗಿದ್ದ ರೈತರ ಆಗಮನ ಬುಧವಾರವೂ ಮುಂದುವರೆದಿದೆ. ಹೀಗಾಗಿ ದಟ್ಟಣೆ ಹೆಚ್ಚುತ್ತಲೇ ಇದೆ. 

ಆದರೂ ರೈತರು ತಾವಿರುವ ಸ್ಥಳದಲ್ಲಿ ವಾಸಕ್ಕೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಅಲ್ಲೇ ಆಹಾರ ಸಿದ್ಧಪಡಿಸಿಕೊಂಡು ಭೋಜನ ಸೇವಿಸುತ್ತಿದ್ದಾರೆ.

ರೈತರಿಂದಲೂ ಸಕಲ ಸಿದ್ಧತೆ: ಪ್ರತಿಭಟನೆ ತಡೆಯಲು ಪೊಲೀಸರು ಏನೇನು ಮಾಡಬಹುದೆಂದು ಊಹಿಸಿರುವ ರೈತರು ಅದಕ್ಕೆ ನಾನಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಬಂದಿರುವುದು ಕಂಡುಬಂದಿದೆ. 

ಅಶ್ರುವಾಯುವಿನ ಪರಿಣಾಮ ಕಡಿಮೆ ಮಾಡಲು ಒದ್ದೆ ಮಾಡಿದ ಗೋಣಿ ಚೀಲ ಬಳಕೆ, ಕೈಯಲ್ಲಿ ನೀರಿನ ಬಾಟಲ್‌, ಅಶ್ರುವಾಯು ಮೇಲೆ ನೀರು ಸಿಂಪಡಿಸಲು ನೀರಿನ ಟ್ಯಾಂಕರ್‌, ಅಶ್ರುವಾಯುವಿನ ಹೊಗೆ ದಾಟಿ ಮುಂದೆ ಹೋಗಲು ಮುಖಕ್ಕೆ ವಿಶೇಷ ಮಾಸ್ಕ್‌ ಮೊದಲಾದ ತಂತ್ರಗಳನ್ನು ರೈತರು ಮಾಡಿರುವುದು ಕಂಡುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ