ನವದೆಹಲಿ: ಕೆವೈಸಿ ನಿಯಮ ಪಾಲನೆ ಮಾಡದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಆರ್‌ಬಿಐನಿಂದ ನಿರ್ಬಂಧದ ಆದೇಶಕ್ಕೆ ಒಳಪಟ್ಟಿರುವ ‘ಪೇಟಿಎಂ ಪೇಮೆಂಟ್ ಬ್ಯಾಂಕ್’ ವಿರುದ್ಧ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.) ಕೇಸು ದಾಖಲಿಸಿ ತನಿಖೆ ಆರಂಭಿಸಿದೆ ಎಂದು ಗೊತ್ತಾಗಿದೆ.
ಪೇಟಿಎಂ ಪೇಮೆಂಟ್ ಬ್ಯಾಂಕ್’ ಗ್ರಾಹಕರ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸದೇ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟಿರುವುದು, ಸಾವಿರಾರು ಖಾತೆಗಳಿಗೆ ಒಂದೇ ಪಾನ್ ಸಂಖ್ಯೆ ಬಳಕೆ ಮಾಡಿರುವುದು ಮತ್ತು ಕೆಲವು ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿದ್ದನ್ನು ಆರ್‌ಬಿಐ ಪತ್ತೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಫೆ.29ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಹಲವು ಸೇವೆಗಳ ಮೇಲೆ ಆರ್‌ಬಿಐ ಇತ್ತೀಚೆಗೆ ನಿರ್ಬಂಧ ಹೇರಿತ್ತು.
ಕೆಲವು ಖಾತೆಗಳಲ್ಲಿ ಹೀಗೆ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಅಕ್ರಮ ಹಣ ವರ್ಗಾವಣೆ ದಂಧೆಯ ಭಾಗವಾಗಿರಬಹುದು ಎಂಬ ಶಂಕೆ ಮೇಲೆ ಇದೀಗ ಇಂಥ ಪ್ರಕರಣಗಳ ತನಿಖೆ ನಡೆಸುವ ಇ.ಡಿ. ಕೇಸು ದಾಖಲಿಸಿ ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.