;Resize=(412,232))
ವಿಜಯ್ ಮಲಗಿಹಾಳ
ಶಿಲ್ಲಾಂಗ್ : ಮೇಘಾಲಯವು ನೆರೆಯ ಬಾಂಗ್ಲಾ ದೇಶದೊಂದಿಗೆ ಸುಮಾರು 443 ಕಿ.ಮೀ. ಗಡಿ ಹಂಚಿಕೊಂಡಿದ್ದರೂ, ಆ ದೇಶದಲ್ಲಿ ನಡೆಯುತ್ತಿರುವ ಅಂತರಿಕ ಸಂಘರ್ಷ ನಮ್ಮ ರಾಜ್ಯದ ಮೇಲೆ ಯಾವುದೇ ಪರಿಣಾಮ ಉಂಟು ಮಾಡಿಲ್ಲ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ತಿಳಿಸಿದ್ದಾರೆ.
ಮೇಘಾಲಯ ರಾಜ್ಯ ಮತ್ತು ನೆರೆಯ ಬಾಂಗ್ಲಾದೇಶದ ನಡುವೆ ಇರುವ ಸುಮಾರು 443 ಕೀ.ಮೀ. ಗಡಿಯುದ್ದಕ್ಕೂ ಬೇಲಿ ನಿರ್ಮಿಸುವ ಕೆಲಸ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ವಾರ್ತಾ ಶಾಖೆಯು ಆಯೋಜಿಸಿರುವ ಅಧ್ಯಯನ ಪ್ರವಾಸದ ಭಾಗವಾಗಿ ಮಂಗಳವಾರ ಶಿಲ್ಲಾಂಗ್‌ನಲ್ಲಿರುವ ಲೋಕಭವನಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಪತ್ರಕರ್ತರ ತಂಡದೊಂದಿಗೆ ಮಾತನಾಡಿದ ಕರ್ನಾಟಕ ಮೂಲದ ರಾಜ್ಯಪಾಲರೂ ಆಗಿರುವ ಅವರು, ಮೇಘಾಲಯದ ಸ್ಥಿತಿಗತಿ ಹಂಚಿಕೊಂಡರು.
ಬಾಂಗ್ಲಾ ದೇಶದ ಗಡಿ ಭಾಗದ ಬೇಲಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಕಠಿಣ ಭೂಪ್ರದೇಶ ಮತ್ತು ಭೂಸ್ವಾಧೀನದ ಸಮಸ್ಯೆಗಳಿಂದಾಗಿ ತುಸು ವಿಳಂಬವಾಗಿದೆ ಎಂದರು.
ಮೇಘಾಲಯ ಹೆಚ್ಚು ಅರಣ್ಯದಿಂದ ಕೂಡಿರುವುದರಿಂದ ಇಲ್ಲಿನ ಜನ ಪ್ರಕೃತಿಯೊಂದಿಗೆ ಅನ್ಯೋನ್ಯತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಮರಗಳನ್ನು ದೇವರ ರೀತಿ ಕಾಣುತ್ತಾರೆ. ಹೀಗಾಗಿ ಈ ರಾಜ್ಯದ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಇದು ಪೂರ್ಣ ನೈಸರ್ಗಿಕ ಕೃಷಿ ಅವಲಂಬಿತ ರಾಜ್ಯ ಎಂದು ಹೇಳಿದರು.
ಮೇಘಾಲಯದಲ್ಲಿ ಪೂರ್ಣ ಸಾವಯವ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಇಲ್ಲಿನ ಅರಿಶಿನ ಅತ್ಯಂತ ಶುದ್ಧ. ಬಿಳಿ ಕಾಳುಮೆಣಸು ದೇಶದ ಬೇರೆಲ್ಲೂ ಬೆಳೆಯುವುದಿಲ್ಲ. ಇಲ್ಲಿ ರಾಸಾಯನಿಕ ಬಳಸಿ ಕೃಷಿ ಮಾಡುವ ಪದ್ಧತಿಯಿಲ್ಲ. ಇಲ್ಲಿನ ಜನ ನೂರಕ್ಕೆ ನೂರರಷ್ಟು ನೈಸರ್ಗಿಕ ಕೃಷಿ ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಇಲ್ಲಿನ ಅರಿಶಿಣ, ಬಿಳಿ ಮೆಣಸುಗಳು ಜಾಗತಿಕ ಮನ್ನಣೆ ಪಡೆದಿದ್ದು, ವಿದೇಶಗಳಿಗೂ ರಫ್ತಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಜನ ಜೀವನ ಮತ್ತು ಸಂಸ್ಕೃತಿ ಕರ್ನಾಟಕದ ಕೊಡಗು ಜಿಲ್ಲೆಗೆ ಹೆಚ್ಚು ಹೋಲಿಕೆಯಿದೆ. ಉಡುಗೆ, ತೊಡುಗೆ ಹೆಚ್ಚು ಕಡಿಮೆ ಅದೇ ರೀತಿ ಇದೆ. ಸಂಗೀತ ಇಲ್ಲಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇಲ್ಲಿನ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ನಾನು ರಾಜ್ಯಪಾಲನಾದ 15 ತಿಂಗಳಲ್ಲಿ ಎರಡು ವೈದ್ಯಕೀಯ ಕಾಲೇಜು ಹಾಗೂ ಎರಡು ವಿಶ್ವವಿದ್ಯಾಲಯಗಳನ್ನು ಹೊಸದಾಗಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮೇಘಾಲಯ ಮಾತೃ ಪ್ರಧಾನ ರಾಜ್ಯವಾಗಿದ್ದು, ಇಲ್ಲಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚಿನ ಗೌರವ ನೀಡಲಾಗುತ್ತದೆ. ರಾಜ್ಯದ ಶೇ.40ರಷ್ಟು ಮಹಿಳೆಯರು ಗುಡಿ ಕೈಗಾರಿಕೆ, ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಕುಟುಂಬ ವ್ಯವಸ್ಥೆಯಲ್ಲಿ ಪಿತ್ರಾರ್ಜಿತ ಆಸ್ತಿಯು ಕಾನೂನಾತ್ಮಕವಾಗಿ ಕುಟುಂಬದ ಕಿರಿಯ ಮಗಳಿಗೆ ವರ್ಗಾವಣೆಯಾಗುವುದು ಇಲ್ಲಿನ ವಿಶೇಷ ಎಂದು ವಿಜಯಶಂಕರ್ ವಿವರಿಸಿದರು.
ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ಅತ್ಯಂತ ಸುಲಲಿತವಾಗಿ ಆಡಳಿತ ವ್ಯವಸ್ಥೆ ನಡೆಯುತ್ತದೆ. ಮೂಲ ನಿವಾಸಿಗಳಾದ ಬುಡಕಟ್ಟು ಸಮುದಾಯಗಳ ಮೂಲಕ ಗ್ರಾಮಸಭೆಗಳ ಆಡಳಿತ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಅಭಿವೃದ್ಧಿ ಕೆಲಸಗಳು ಸತತವಾಗಿ ನಡೆಯುತ್ತಿವೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜ್ಯಪಾಲರು, ರಾಜ್ಯ ಸರ್ಕಾರದೊಂದಿಗೆ ಉತ್ತಮ ಸಂಬಂಧವಿದೆ. ಕಾರ್ನಾಡ್ ಸಂಗ್ಮಾ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಸಕಾರಣವಿದ್ದಲ್ಲಿ ಯಾವುದೇ ವ್ಯಕ್ತಿ ದಿನದ ಯಾವುದೇ ಸಮಯದಲ್ಲಿ ಬಂದು ಭೇಟಿಯಾಗಲು ಅವಕಾಶ ಕಲ್ಪಿಸಿದ್ದು, ಲೋಕಭವನವನ್ನು ಜನಸ್ನೇಹಿಯಾಗಿ ಮಾಡಿದ್ದೇನೆ. ಸಾಂವಿಧಾನಿಕ ಮುಖ್ಯಸ್ಥನಾಗಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುವುದಷ್ಟೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.