ವಿದ್ಯುತ್‌ ಚಾಲಿತ ವಾಹನಗಳಿಗೆ ಬಳಸಲು ಅಯಸ್ಕಾಂತವೇ ಇಲ್ಲದ ಮೋಟರ್‌ಅನ್ನು ಬೆಂಗಳೂರು ಮೂಲದ ಸ್ಟಾರ್ಟಪ್‌ ‘ವಿಮಾಗ್‌ ಲ್ಯಾಬ್ಸ್‌’ ಅಭಿವೃದ್ಧಿಪಡಿಸಿದೆ. ಮ್ಯಾಗ್ನೆಟ್‌ಗಾಗಿ ಚೀನಾದ ಅಪರೂಪದ ಖನಿಜಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸಿ ಸ್ವಾವಲಂಬನೆ ಸಾಧಿಸುವುದು ಇದರ ಉದ್ದೇಶವಾಗಿದೆ. ಈ ತಂತ್ರಜ್ಞಾನಕ್ಕೆ ವಿಮಾಗ್‌ 5ನೇ ಭಾರತೀಯ ಪೇಟೆಂಟ್‌ ಪಡೆದಿದೆ.

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳಿಗೆ ಬಳಸಲು ಅಯಸ್ಕಾಂತವೇ ಇಲ್ಲದ ಮೋಟರ್‌ಅನ್ನು ಬೆಂಗಳೂರು ಮೂಲದ ಸ್ಟಾರ್ಟಪ್‌ ‘ವಿಮಾಗ್‌ ಲ್ಯಾಬ್ಸ್‌’ ಅಭಿವೃದ್ಧಿಪಡಿಸಿದೆ. ಮ್ಯಾಗ್ನೆಟ್‌ಗಾಗಿ ಚೀನಾದ ಅಪರೂಪದ ಖನಿಜಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸಿ ಸ್ವಾವಲಂಬನೆ ಸಾಧಿಸುವುದು ಇದರ ಉದ್ದೇಶವಾಗಿದೆ. ಈ ತಂತ್ರಜ್ಞಾನಕ್ಕೆ ವಿಮಾಗ್‌ 5ನೇ ಭಾರತೀಯ ಪೇಟೆಂಟ್‌ ಪಡೆದಿದೆ.

ಯೋಚನೆ ಹುಟ್ಟಿದ್ದು ಹೇಗೆ?:

ವಿಶ್ವದ ಶೇ.90ರಷ್ಟು ಅಪರೂಪದ ಖನಿಜಗಳು ಮತ್ತು ಶೇ.94ರಷ್ಟು ಅಯಸ್ಕಾಂತ ರಫ್ತಾಗುವುದು ಚೀನಾದಿಂದ. 2020ರ ಕೊರೋನಾ ಕಾಲದಲ್ಲಿ ಈ ವಸ್ತುಗಳನ್ನು ಹೊತ್ತು ಬರಬೇಕಿದ್ದ ನೌಕೆಗಳು ಚೀನಾದ ಬಂದರುಗಳಲ್ಲೇ ಲಂಗರು ಹಾಕಿ ನಿಂತು, ಭಾರತದ ಇವಿ ಉದ್ಯಮಕ್ಕೆ ಪೆಟ್ಟು ನೀಡಿದ್ದವು. ಇದರಿಂದ ಮನೀಶ್‌ ಸೇಥ್‌ ಆಗಷ್ಟೇ ಶುರು ಮಾಡಿದ್ದ ನವೋದ್ಯಮ ಕೂಡ ನರಳಿತ್ತು. 2025ರಲ್ಲಿ ವಿಮಾಗ್‌ ಲ್ಯಾಬ್ಸ್‌ ಸ್ಥಾಪಿಸಿದ ಅವರು, ಅಯಸ್ಕಾಂತವೇ ಇಲ್ಲದ ಮೋಟರ್‌ ಉತ್ಪಾದನೆಗಿಳಿಯುತ್ತಾರೆ.

ಹೇಗಿದೆ ಈ ಮೋಟರ್‌?:

ಹೆಚ್ಚಿನ ವಿದ್ಯುತ್ ವಾಹನಗಳಲ್ಲಿ ನಿಯೋಡೈಮಿಯಂನಂತಹ ಅಪರೂಪದ ಖನಿಜದಿಂದ ತಯಾರಾದ ಶಾಶ್ವತ ಆಯಸ್ಕಾಂತಗಳನ್ನು ಬಳಸಲಾಗುತ್ತದೆ. ಇವು ಸೃಷ್ಟಿಸುವ ಕಾಂತೀಯ ಕ್ಷೇತ್ರದಿಂದ ಮೋಟಾರ್‌ ತಿರುಗಿ ವಾಹನ ಚಲಿಸುತ್ತವೆ. ಈ ವೇಳೆ ಬ್ರಷ್‌ ಮತ್ತು ಸ್ಲಿಪ್‌ ರಿಂಗ್‌ಗಳ ಮೂಲಕ ವಿದ್ಯುತ್‌ ಪ್ರವಹಿಸುತ್ತದೆ.

ಇದೀಗ ವಿಮಾಗ್‌ ಈ ಅಯಸ್ಕಾಂತದ ಬದಲು ತಾಮ್ರದ ಸುರುಳಿಗಳು, ಎಲೆಕ್ಟ್ರಾನಿಕ್ಸ್, ಸಾಫ್ಟ್‌ವೇರ್‌ ಬಳಸುತ್ತಿದೆ. ತಾಮ್ರದ ಮೂಲಕ ವಿದ್ಯುತ್‌ ಪ್ರವಹಿಸಿದಾಗ ಅದು ಮ್ಯಾಗ್ನೆಟ್‌ನಂತೆ ಕೆಲಸ ಮಾಡುತ್ತದೆ. ಇದನ್ನು ಸಾಫ್ಟ್‌ವೇರ್‌ ಮೂಲಕ ನಿಯಂತ್ರಿಸಲಾಗುತ್ತದೆ.

ಸಾಫ್ಟ್‌ವೇರ್‌ ಬಳಸಿ ವೇಗವನ್ನು ನಿಯಂತ್ರಿಸುವ ಮೂಲಕ ಮೋಟರ್‌ನ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಗತ್ಯವಿದ್ದಾಗ ಅದನ್ನು ಅಪ್‌ಡೇಟ್‌ ಕೂಡ ಮಾಡಬಹುದು. 

ಲಾಭವೇನು?:

ಸ್ವದೇಶಿಯಾಗಿ ಉತ್ಪಾದನೆಯಾಗುವ ಈ ಮೋಟರ್‌ಗಳಿಂದಾಗಿ ಅಪರೂಪದ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆ ತಗ್ಗುತ್ತದೆ. ಜಾಗತಿಕ ಅಸ್ಥಿರತೆ ಉಂಟಾಗಿ ಅಂತಾರಾಷ್ಟ್ರೀಯ ವ್ಯಾಪಾರ ಸ್ಥಗಿತವಾದಾಗ ಇವಿ ಕ್ಷೇತ್ರಕ್ಕೆ ಪೆಟ್ಟು ಬೀಳದು.