ರಿಲಯನ್ಸ್‌ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್ಸ್‌ ಲಿ.(ಜೆಪಿಎಲ್‌)ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 100 ನಿಮಿಷಗಳಲ್ಲೇ ಜಿಯೋಪ್ಲಾಟ್‌ಫಾರ್ಮ್ಸ್‌ ಲಿ. ಐಪಿಒ ಸಂಪೂರ್ಣ‍ಾಗಿ ಸಬ್‌ಸ್ಕೈಬ್‌ (ಚಂದಾದಾರಿಕೆ) ಆಗುವ ಮೂಲಕ ಹೊಸ ದಾಖಲೆ ಬರೆದಿದೆ.

ನವದೆಹಲಿ: ರಿಲಯನ್ಸ್‌ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್ಸ್‌ ಲಿ.(ಜೆಪಿಎಲ್‌)ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 100 ನಿಮಿಷಗಳಲ್ಲೇ ಜಿಯೋಪ್ಲಾಟ್‌ಫಾರ್ಮ್ಸ್‌ ಲಿ. ಐಪಿಒ ಸಂಪೂರ್ಣ‍ಾಗಿ ಸಬ್‌ಸ್ಕೈಬ್‌ (ಚಂದಾದಾರಿಕೆ) ಆಗುವ ಮೂಲಕ ಹೊಸ ದಾಖಲೆ ಬರೆದಿದೆ.

ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಐಪಿಒವೊಂದು ಈ ರೀತಿ ಆರಂಭದಲ್ಲಿ 100 ನಿಮಿಷದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದ್ದು, ಇದೇ ಮೊದಲಾಗಿದೆ. ಅಲ್ಲದೆ, ಮೊದಲ ದಿನವೇ ₹1 ಲಕ್ಷ ಕೋಟಿ ಬಿಡ್‌ ಮೌಲ್ಯ ದಾಟಿದೆ.

30,213 ಕೋಟಿ ರು.:

30,213 ಕೋಟಿ ರು. ಮೌಲ್ಯದ ಈ ಐಪಿಒ ಪ್ರೈಸ್‌ ಬ್ರ್ಯಾಂಡ್‌ (ಬಿಡ್‌ ಮಾಡಬಹುದಾದ ಬೆಲೆ) 1,065 ರು.-1,119 ರು. ಎಂದು ನಿಗದಿಪಡಿಸಲಾಗಿದೆ. ಅಂದರೆ ಹೂಡಿಕೆದಾರರಿಗೆ ಬಿಡ್‌ ಮಾಡಲು ಕನಿಷ್ಠ ಮತ್ತು ಗರಿಷ್ಠ ಬಿಡ್‌ ದರ ಇದಾಗಿದೆ. ವಿಶೇಷವೆಂದರೆ ಕಂಪನಿಯ ಐಪಿಒ ಮೇಲೆ ಅರ್ಹ ಸಾಂಸ್ಥಿಕ ಖರೀದಿದಾರ (ಕ್ವಾಲಿಫೈಡ್‌ ಇನ್‌ಸ್ಟಿಟ್ಯೂಷನಲ್‌ ಬೈಯರ್ಸ್‌-ಕ್ಯುಐಬಿ)ರಿಂದಲೂ ಭಾರೀ ಬೇಡಿಕೆ ಬಂದಿದ್ದು, ಕ್ಯುಐಬಿ ಕೋಟಾ ಕೇವಲ 10 ನಿಮಿಷಗಳಲ್ಲೇ ಸಂಪೂರ್ಣ ಭರ್ತಿಯಾಗಿದೆ.

ಕಂಪನಿಯ 30,213 ಕೋಟಿ ರು. ಮೌಲ್ಯದ ಐಪಿಒಗೆ ಮೊದಲ ದಿನ ಸಂಜೆವರೆಗೆ 1 ಲಕ್ಷ ಕೋಟಿ ರು.ಗೂ ಮೀರಿ ಬಿಡ್‌ ಸಲ್ಲಿಕೆಯಾಗಿದ್ದು, ಬಿಡುಗಡೆಯಾಗುತ್ತಿರುವ ಷೇರುಗಳಿಗೆ 2.35 ಪಟ್ಟು ಬೇಡಿಕೆ ಬಂದಿದೆ.

ಐಪಿಒ ಅ.23ರ ವರೆಗೆ ತೆರೆದಿರಲಿದ್ದು, ಇನ್ನಷ್ಟು ಮಂದಿ ಷೇರು ಖರೀದಿಗೆ ಮುಗಿಬೀಳುವ ಸಾಧ್ಯತೆ ಇದೆ.

ಹಿಂದಿನ ದಾಖಲೆ ಬದಿಗೆ:

ಈ ಹಿಂದಿನ ಮೆಗಾ ಐಪಿಒ ಆದ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ನ ಷೇರುಗಳಿಗೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನವೇ ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಕಂಪನಿ ಐಪಿಒ 2 ಗಂಟೆ ವೇಳೆಗೆ ಸಂಪೂರ್ಣವಾಗಿ ಸಬ್‌ಸ್ಕ್ರೈಬ್‌ ಆಗಿತ್ತು. ಇನ್ನೊಂದು ಮತ್ತೊಂದು ಮಹತ್ವದ ಐಪಿಒ ಆಗಿದ್ದ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಮೊದಲೇ ದಿನದ ಅಂತ್ಯದಲ್ಲಿ ಸಂಪೂರ್ಣ ಸಬ್‌ಸ್ಕ್ರೈಬ್‌ ಆಗಿತ್ತು. ಇನ್ನು 27,870 ಕೋಟಿ ಮೌಲ್ಯದ ಹುಂಡೈ ಮೋಟಾರ್ಸ್‌ ಇಂಡಿಯಾ ಐಪಿಒ ಮಾತ್ರ ಮೊದಲ ದಿನ ಶೇ. 18ರಷ್ಟು ಮಾತ್ರ ಸಬ್‌ಸ್ಕ್ರೈಬ್‌ ಆಗಿತ್ತು.

ಭಿನ್ನ:

ಹುಂಡೈ ಮತ್ತು ಎಲ್‌ಜಿಗೆ ಹೋಲಿಸಿದರೆ ಜಿಯೋ ಐಪಿಒ ಸಂಪೂರ್ಣವಾಗಿ ಭಿನ್ನವಾಗಿದೆ. ಆ ಎರಡೂ ಕಂಪನಿಗಳು ಕಂಪನಿಯಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಷೇರುದಾರರಿಗೆ ಷೇರು ಮಾರಾಟಕ್ಕೆ ಅ‍ವಕಾಶ ಮಾಡಿಕೊಟ್ಟರೆ (ಒಎಫ್‌ಎಸ್‌), ಜಿಯೋ ಯಾವುದೇ ಷೇರುದಾರರು ಷೇರು ಮಾರುತ್ತಿಲ್ಲ. ಬದಲಾಗಿ 27 ಕೋಟಿ ಹೊಸ ಷೇರುಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಷೇರುದಾರರನ್ನು ಆಕರ್ಷಿಸುತ್ತಿದೆ. ಇದರರ್ಥ ಈ ಷೇರು ಮಾರಾಟದಿಂದ ಬಂದ ಹಣವು ಸಂಪೂರ್ಣವಾಗಿ ಕಂಪನಿಗೇ ಹೋಗಲಿದೆಯೇ ಹೊರತು ಆಫರ್‌ ಫಾರ್‌ ಸೇಲ್‌ (ಒಎಫ್‌ಎಸ್‌) ರೀತಿಯಲ್ಲಿ ಕಂಪನಿಯ ಹಿಂದಿನ ಷೇರುದಾರರ ಕೈಗೆ ಹೋಗುವುದಿಲ್ಲ.