ಸಾರಾಂಶ
ಹೆಬ್ಬಾಳ - ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ 3ಎ ಹಂತಕ್ಕೆ (ಕೆಂಪು ಮಾರ್ಗ) ಜಿಯೋ ಟೆಕ್ನಿಕಲ್ ಇನ್‌ವೆಸ್ಟಿಗೇಷನ್ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.
ಬೆಂಗಳೂರು : ಹೆಬ್ಬಾಳ - ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ 3ಎ ಹಂತಕ್ಕೆ (ಕೆಂಪು ಮಾರ್ಗ) ಜಿಯೋ ಟೆಕ್ನಿಕಲ್ ಇನ್‌ವೆಸ್ಟಿಗೇಷನ್ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.
ಒಟ್ಟು 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, ಈ ಪೈಕಿ ಸರ್ಜಾಪುರದಿಂದ ಕೋರಮಂಗಲದವರೆಗೆ 22.14 ಕಿಮೀ ಎತ್ತರಿಸಿದ ಮಾರ್ಗವಾಗಿದೆ. ಯೋಜನೆಯು ಕೋರಮಂಗಲ 2ನೇ ಬ್ಲಾಕ್‌ನಿಂದ ಹೆಬ್ಬಾಳದವರೆಗೆ 14.45 ಕಿ.ಮೀ ಸುರಂಗ ಮಾರ್ಗವಾಗಿರಲಿದೆ. ₹28,405 ಕೋಟಿ ಮೊತ್ತದ (ಪ್ರತಿ ಕಿಮೀಗೆ ₹776.3 ಕೋಟಿ ಮೊತ್ತ ) ಈ ಯೋಜನೆ ಮೆಟ್ರೋ ಯೋಜನೆಗಳ ಪೈಕಿ ಅತ್ಯಂತ ದುಬಾರಿ ಎಂದೆ ಈ ಯೋಜನೆ ಪರಿಗಣಿಸಲ್ಪಟ್ಟಿದೆ.
ಕಳೆದ ವರ್ಷ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಕೇಂದ್ರಕ್ಕೆ ಅನುಮೋದನೆ ನೀಡುವಂತೆ ಕೋರಿದೆ. ಅದರೆ ಕೇಂದ್ರ ಸರ್ಕಾರ ಅತ್ಯಂತ ದುಬಾರಿ ಕಾರಣಕ್ಕೆ ಈ ಯೋಜನಾ ಮೊತ್ತವನ್ನು ಮರುಪರಿಶೀಲಿಸುವಂತೆ ಬಿಎಂಆರ್‌ಸಿಎಲ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಸಂಬಂಧ ಬಿಎಂಆರ್‌ಸಿಎಲ್ ಖಾಸಗಿ ಸಂಸ್ಥೆ ಮೂಲಕ ಯೋಜನಾ ಮೊತ್ತ ಕಡಿತಕ್ಕೆ ಸಲಹೆ ಪಡೆಯಲು ಯೋಜಿಸಿದೆ.
ಈ ನಡುವೆ ಇದೀಗ ನಾಲ್ಕು ಹಂತದಲ್ಲಿ ಜಿಯೋ ಟೆಕ್ನಿಕಲ್ ಇನ್‌ವೆಸ್ಟಿಗೇಷನ್ ನಡೆಸಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಎಲಿವೆಟೆಡ್ ಕಾರಿಡಾರ್‌ಗಳಾದ ಸರ್ಜಾಪುರ ನಿಲ್ದಾಣದಿಂದ ಕಾರ್ಮೆಲ್‌ರಾಂ ನಿಲ್ದಾಣ (10 ಕಿಮೀ) ಹಾಗೂ ಕಾರ್ಮೆಲ್‌ರಾಂ ನಿಲ್ದಾಣದಿಂದ ಕೋರಮಂಗಲ 3ನೇ ಬ್ಲಾಕ್ (9 ಕಿಮೀ), ಭೂಗತ ಮಾರ್ಗ ಕೋರಮಂಗಲ 2ನೇ ಬ್ಲಾಕ್‌ನಿಂದ ಕೆ.ಆರ್.ಸರ್ಕಲ್ ನಿಲ್ದಾಣ ( 9 ಕಿಮೀ) ಹಾಗೂ ಭೂಗತ ಮತ್ತು ಎತ್ತರಿಸಿದ ಮಾರ್ಗ ಕೆ.ಆರ್.ಸರ್ಕಲ್‌ನಿಂದ ಹೆಬ್ಬಾಳ ನಿಲ್ದಾಣದವರೆಗೆ ( 9ಕಿಮೀ) ಈ ಅಧ್ಯಯನ ನಡೆಯಲಿದೆ. ಈ ಟೆಂಡರ್ ಮುಂದಿನ ನವೆಂಬರ್ 5ಕ್ಕೆ ತೆರೆಯಲಿದೆ.
2031ರ ಗಡುವು:
ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಲೈನ್‌ನ ಕಾಮಗಾರಿಗೆ 2031ರ ಗಡುವು ನಿಗದಿಪಡಿಸಲಾಗಿದೆ. 14.4 ಕಿ.ಮೀ ಸುರಂಗದಲ್ಲಿ 11 ನಿಲ್ದಾಣ, 22.14 ಕಿಮೀ ಎತ್ತರದ ಕಾರಿಡಾರ್‌ನಲ್ಲಿ 17 ನಿಲ್ದಾಣ ಹೊಂದಿರಲಿದೆ. ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್‌ಚೇಂಜ್ ಸ್ಟೇಷನ್‌ಗಳ ನಿರ್ಮಾಣವಾಗಲಿದೆ.
ಏನೀದು ಜಿಯೋ ಟೆಕ್ನಿಕಲ್ ಅಧ್ಯಯನ
ಜಿಯೋ ಟೆಕ್ನಿಕಲ್ ಇನ್ವೆಸ್ಟಿಗೇಷನ್ ಅಂದರೆ ಮೆಟ್ರೋ ಮಾರ್ಗ ಹಾದು ಹೋಗಲಿರುವ ಸುರಂಗದ ಭೂಮಿಯ ಸ್ವರೂಪ ಹೇಗಿದೆ? ಎಷ್ಟು ಆಳದಲ್ಲಿ ಸುರಂಗ ಹೋಗಬೇಕು? ಭೂಗತ ನಿಲ್ದಾಣ ನಿರ್ಮಾಣ ಆಗುವೆಡೆ ಸುರಕ್ಷತಾ ಕ್ರಮ ಹೇಗಿರಬೇಕು. ಡೈನಮೈಟ್ ಸ್ಫೋಟಕ್ಕೆ ಭೂಮಿ ಸ್ಪಂದಿಸಲಿದೆಯೆ? ಮೇಲ್ಭಾಗದಲ್ಲಿ ಎಷ್ಟು ಕಟ್ಟಡಳಿವೆ? ಅವುಗಳಿಗೆ ತೊಂದರೆ ಆಗುತ್ತದೆಯೆ ಇಲ್ಲವೆ ಎಂಬುದರ ಅಧ್ಯಯನ ಆಗಲಿದೆ. ಜತೆಗೆ ಎಲಿವೆಟೆಡ್ ಕಾರಿಡಾರ್‌ನಲ್ಲಿ ಪಿಲ್ಲರ್‌ಗಳನ್ನು ಎಷ್ಟು ಆಳದಿಂದ ನಿರ್ಮಿಸಿಕೊಳ್ಳಬೇಕು? ಪಿಲ್ಲರ್‌ಗಳ ಸ್ವರೂಪ ಹೇಗಿರಬೇಕು ಎಂಬುದರ ವರದಿಯನ್ನು ಬಿಎಂಆರ್‌ಸಿಎಲ್ ಈ ಅಧ್ಯಯನದ ಮೂಲಕ ತಿಳಿದುಕೊಳ್ಳಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.