ವ್ಯಾಪಾರಿಗಳೇ ಯುಪಿಐ ಸೇವೆಗೆ ಶುಲ್ಕ ಪಾವತಿಸಬೇಕು

Published : Sep 19, 2026, 11:45 AM IST
upi fees upi mdr charges

ಸಾರಾಂಶ

ದೇಶದಲ್ಲಿ ನಡೆಯುವ ಶೇ.96ರಷ್ಟು ವಹಿವಾಟುಗಳಿಗೆ ಎಂಡಿಆರ್‌ ಅನ್ವಯ ಆಗುವುದಿಲ್ಲ. ಏಕೆಂದರೆ, ಒಟ್ಟು ಟ್ರಾನ್ಸಾಕ್ಷನ್‌ಗಳ ಪೈಕಿ ಸುಮಾರು ಶೇ.70ರಷ್ಟು ಪಿ-ಟು-ಪಿ (ವ್ಯಕ್ತಿಯಿಂದ ವ್ಯಕ್ತಿಗೆ) ಪಾವತಿ ಆಗಿರುತ್ತವೆ. ಅವುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.

 ಮೋಹನ್‌ದಾಸ್‌ ಪೈ

ಲೆಕ್ಕ ಪರಿಶೋಧಕ

ಯುಪಿಐ ಸೇವೆಗಳ ಮೇಲೆ ಇತ್ತೀಚೆಗೆ ವಿಧಿಸಲಾಗಿರುವ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ ಅನ್ನು (ಎಂಡಿಆರ್‌) ಸ್ವಾಗತಿಸುತ್ತೇನೆ. ಯಾಕೆಂದರೆ, ಇಷ್ಟು ವರ್ಷಗಳ ಕಾಲ ಯುಪಿಐ ಸೇವೆಗಳು ನಮಗೆಲ್ಲ ಉಚಿತವಾಗಿ ಸಿಕ್ಕಿದ್ದವು. ಆ ವ್ಯವಸ್ಥೆಗಳ ಮೇಲೆ ಮಾಡಬೇಕಾಗಿ ಬಂದ ಹೂಡಿಕೆಯ ಹೊರೆಯೆಲ್ಲಾ ನೇರವಾಗಿ ಬ್ಯಾಂಕು ಹಾಗೂ ಯುಪಿಐ ಅನ್ನು ನಿರ್ವಹಿಸುವ ಕಂಪನಿಗಳ ಮೇಲೆ ಬೀಳುತ್ತಿತ್ತು. ಇಂಥ ಸೇವೆ ಒದಗಿಸಲು ಆರಂಭಿಸಿದ ಸಮಯದಲ್ಲಿ ಡಿಜಿಟಲ್‌ ಸ್ಟಾರ್ಟ್‌ಅಪ್‌ಗಳು ಮಾಡಿದ ವೆಚ್ಚ, ಹೂಡಿಕೆ ಹಾಗೂ ಅನುಭವಿಸಿದ ನಷ್ಟದ ಮೊತ್ತ ದೊಡ್ಡದಿತ್ತು. ಈಗ ಅದರ ಒಂದು ಭಾಗವನ್ನು ವ್ಯಾಪಾರಿಗಳು ತಮ್ಮ ಹೆಗಲ ಮೇಲೆ ಎಳೆದುಕೊಳ್ಳಬೇಕಿದೆ.

ಹೆಚ್ಚುತ್ತಿವೆ ವೆಚ್ಚಗಳು:

ವರ್ಷಗಳು ಕಳೆದಂತೆ ಯುಪಿಐ ಬಳಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಐಟಿ ವ್ಯವಸ್ಥೆಯ ಉನ್ನತೀಕರಣ ಮಾಡಬೇಕಾಗಿದೆ. ಇದು ನೈಜ ಸಮಯದ ಪಾವತಿ ವ್ಯವಸ್ಥೆ ಆಗಿರುವ ಕಾರಣ ಇದು ಅನಿವಾರ್ಯ. ಅಂತೆಯೇ, ಯುಪಿಐ ಸೇವೆ ಆರಂಭವಾದ ಸಮಯದಲ್ಲಿ (ಅಂದರೆ 2016-2020ರ ಕಾಲದಲ್ಲಿ) ಪಾವತಿಗಳು ವಿಫಲವಾಗುವ ದರ ಶೇ.15ರಿಂದ 30ರಷ್ಟು ಇರುತ್ತಿತ್ತು. ಇದು, ಇದ್ದಕ್ಕಿದ್ದಂತೆ ಯುಪಿಐ ಬಳಕೆಯ ಪ್ರಮಾಣದಲ್ಲಿ ಆದ ಏರಿಕೆ ಹಾಗೂ ಸುಧಾರಣೆಯನ್ನು ಸೂಚಿಸುತ್ತದೆ. ಯುಪಿಐ ಸದ್ಯ ವಿಶ್ವದ ಬೃಹತ್‌ ಆನ್‌ಲೈನ್‌ ಪಾವತಿ ವ್ಯವಸ್ಥೆಯಾಗಿದೆ. ವೀಸಾಗಿಂತಲೂ ಹೆಚ್ಚು ಯುಪಿಐ ಬಳಕೆಯಾಗುತ್ತಿದೆ. ಹೀಗಿರುವಾಗ, ಯುಪಿಐನಲ್ಲಿ ಸದ್ಯ ಆಗುತ್ತಿರುವ 2,400 ಕೋಟಿ ರು. ವಹಿವಾಟು ಇನ್ನೆರಡು ವರ್ಷಗಳಲ್ಲಿ 5 ಸಾವಿರ ಕೋಟಿ ರು.ಗೆ ಏರಿಕೆ ಆಗಿರುತ್ತದೆ.

ಸದ್ಯ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡಲೇಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ನೂರಾರು ಸಾವಿರಾರು ಕೋಟಿ ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆಲ್ಲಾ ದುಡ್ಡು ಬಿಚ್ಚುವವರು ಯಾರು? ಯಾರಾದರೂ ಒಬ್ಬರು ಖರ್ಚು ಮಾಡಲೇಬೇಕಲ್ಲವೇ. ಇಷ್ಟು ದಿನ ಈ ಭಾರ ಬ್ಯಾಂಕುಗಳ ಮೇಲಿತ್ತು. ಅಂದರೆ ಪರೋಕ್ಷವಾಗಿ ಬ್ಯಾಂಕುಗಳಲ್ಲಿ ಹಣ ಇಟ್ಟಿರುವವರೂ ಪಾವತಿ ಮಾಡಿದಂತೆ ಆಗುತ್ತಿತ್ತು. ಆದರೆ ಇನ್ನುಮುಂದೆ, ಆನ್‌ಲೈನ್‌ ಪಾವತಿ ವ್ಯವಸ್ಥೆಯ ಲಾಭ ಪಡೆಯುತ್ತಿರುವ ವ್ಯಾಪಾರಿಗಳು ಇದಕ್ಕೆ ಶುಲ್ಕ ಪಾವತಿಸಲಿದ್ದಾರೆ.

ಶೇ.96ರಷ್ಟು ಪಾವತಿಗೆ ಅನ್ವಯವಿಲ್ಲ:

ದೇಶದಲ್ಲಿ ನಡೆಯುವ ಬರೋಬ್ಬರಿ ಶೇ.96ರಷ್ಟು ವಹಿವಾಟುಗಳಿಗೆ ಎಂಡಿಆರ್‌ ಅನ್ವಯ ಆಗುವುದಿಲ್ಲ. ಏಕೆಂದರೆ, ನಡೆಯುವ ಒಟ್ಟು ಟ್ರಾನ್ಸಾಕ್ಷನ್‌ಗಳ ಪೈಕಿ ಸುಮಾರು ಶೇ.70ರಷ್ಟು ಪಿ-ಟು-ಪಿ ಆಗಿವೆ. ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಆಗುವ ಪಾವತಿ ಆಗಿರುತ್ತವೆ. ಅವುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಜತೆಗೆ, ದಿನನಿತ್ಯ ಹಣ್ಣು, ತರಕಾರಿ ಕೊಳ್ಳಲು ಹೋದಾಗ 2 ಸಾವಿರ ರು.ಗಿಂತ ಅಧಿಕ ಖರ್ಚಾಗುವುದು ವಿರಳಾತಿ ವಿರಳ. ಆದ್ದರಿಂದ ಅವುಗಳು ಎಂಡಿಆರ್‌ ವ್ಯಾಪ್ತಿಗೆ ಒಳಪಡುವುದಿಲ್ಲ.

ಅಂತೆಯೇ, ರಸ್ತೆ ಬದಿ ವ್ಯಾಪಾರಿಗಳಿಗೋ, ಪೆಟ್ರೋಲ್‌ ಬಂಕ್‌ಗಳಲ್ಲೋ 2 ಸಾವಿರ ರು.ಗಿಂತ ಹೆಚ್ಚು ಪೇ ಮಾಡುವ ಪರಿಸ್ಥಿತಿ ಬಂದರೆ ಅದನ್ನು 2 ಭಾಗವಾಗಿ ವಿಂಗಡಿಸಿ ಪಾವತಿಸಬಹುದು. ಅಂದರೆ, 2,500 ರು ಪಾವತಿಸಬೇಕಿದ್ದರೆ ಒಮ್ಮೆ 1 ಸಾವಿರ ರು., ಬಳಿಕ 1,500 ರು. ಮಾಡಬಹುದು.

ಇದು ತೆರಿಗೆ ಅಲ್ಲ, ಶುಲ್ಕ:

ಎಂಡಿಆರ್‌ ಅನ್ನು ತೆರಿಗೆ ಎಂದು ಕರೆಯುವುದು ಸರಿಯಲ್ಲ. ಅದು ಬ್ಯಾಂಕುಗಳಿಗೆ ಹಾಗೂ ಪಾವತಿ ಕಂಪನಿಗಳು ಒದಗಿಸುತ್ತಿರುವ ಸೇವೆಯನ್ನು ಬಳಸಿದ್ದಕ್ಕೆ ನಾವು ಪಾವತಿಸುವ ಶುಲ್ಕವಾಗಿದೆ. ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವಾಗ ವ್ಯಾಪಾರಿಗಳು ಆ ಕಾರ್ಡ್‌ನ ಕಂಪನಿ ಮತ್ತು ಬ್ಯಾಂಕುಗಳಿಗೆ ಶೇ.2ರಷ್ಟು ಹಣವನ್ನು ಪಾವತಿಸುತ್ತಾರೆ. ಆದರೆ ಯುಪಿಐ ಬಳಕೆ ಮಾಡುವ ವ್ಯಾಪಾರಿಗಳಿಗೆ ವಿಧಿಸಲಾಗುತ್ತಿರುವುದು ಬರೀ 40 ಬೇಸಿಸ್‌ ಪಾಯಿಂಟ್‌ಗಳು. ಅಂದರೆ ಶೇ.0.40ರಷ್ಟು ಮಾತ್ರ. ಅದೂ ದೊಡ್ಡ ವಹಿವಾಟುಗಳಿಗೆ ಮಾತ್ರ ಅನ್ವಯವಾಗುವುದು. ಆದ್ದರಿಂದ ಹೆಚ್ಚು ಮೊತ್ತದ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕ್ರಮವನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ನ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆತ್ಮಾಹತಿ ದಾಳಿ : 21 ಬಲಿ
ಕೆರೆಗಳಿಗೆ ನೀರು ಹರಿಸದಿದ್ದರೆ ಡಿ.ಸಿ ಕಚೇರಿ ಮುಂದೆ ಪ್ರತಿಭಟನೆ