ಕುಖ್ಯಾತ ಡ್ರಗ್ಸ್‌ ದೊರೆ ಹತ್ಯೆಗೆ ಮೆಕ್ಸಿಕೋ ಧಗಧಗ : ಯಾರು ಮಂಚೋ? ಡ್ರಗ್‌ ಲಾರ್ಡ್‌ ಆಗಿದ್ದು ಹೇಗೆ?

KannadaprabhaNewsNetwork |  
Published : Feb 24, 2026, 03:00 AM ISTUpdated : Feb 24, 2026, 05:18 AM IST
Mexico Violence

ಸಾರಾಂಶ

ಕುಖ್ಯಾತ ಡ್ರಗ್ಸ್‌ ದೊರೆ ಹತ್ಯೆಗೆ ಮೆಕ್ಸಿಕೋ ಧಗಧಗಇದರ ಬೆನ್ನಲ್ಲೇ ಆತನ ಗ್ಯಾಂಗ್‌, ‘ಜಲಿಸ್ಕೋ ನ್ಯೂ ಜೆನರೇಷನ್‌ ಕಾರ್ಟೆಲ್ (ಸಿಜೆಎನ್‌ಜಿ)’ ಆಕ್ರೋಶಗೊಂಡಿದ್ದು, ದೇಶಾದ್ಯಂತ ವಿಧ್ವಂಸ ಸೃಷ್ಟಿಸಿದೆ.

  ಮೆಕ್ಸಿಕೋ ಸಿಟಿ:  ಕುಖ್ಯಾತ ಡ್ರಗ್ಸ್‌ ದೊರೆ ಹತ್ಯೆಗೆ ಮೆಕ್ಸಿಕೋ ಧಗಧಗಇದರ ಬೆನ್ನಲ್ಲೇ ಆತನ ಗ್ಯಾಂಗ್‌, ‘ಜಲಿಸ್ಕೋ ನ್ಯೂ ಜೆನರೇಷನ್‌ ಕಾರ್ಟೆಲ್ (ಸಿಜೆಎನ್‌ಜಿ)’ ಆಕ್ರೋಶಗೊಂಡಿದ್ದು, ದೇಶಾದ್ಯಂತ ವಿಧ್ವಂಸ ಸೃಷ್ಟಿಸಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಇದು ಆ ದೇಶದಲ್ಲಿನ ಡ್ರಗ್ಸ್ ಮಾಫಿಯಾ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಸಂಘಟಿತ ಅಪರಾಧಗಳ ಸಂಹಾರಕ್ಕಿಳಿದಿದ್ದ ಮೆಕ್ಸಿಕೋ ಸೇನೆ ಜಲಿಸ್ಕೊ ​​ರಾಜ್ಯದ ತಪಾಲ್ಪಾ ಎಂಬಲ್ಲಿ ಕಾರ್ಯಾಚರಣೆ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಮೆಂಚೋ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಮೆಕ್ಸಿಕೋ ಸಿಟಿ ಆಸ್ಪತ್ರೆಗೆ ಕರೆದೊಯ್ಯುಯತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಇದು, 2016ರಲ್ಲಿ ಡ್ರಗ್ಸ್‌ ಮಾಫಿಯಾ ನಡೆಸುತ್ತಿದ್ದ ಎಲ್‌ ಚಾಪೋ ಬಂಧನದ ಬಳಿಕ ಬಹುದೊಡ್ಡ ಕಾರ್ಯಾಚರಣೆಯಾಗಿದೆ. ಇದರಲ್ಲಿ ಅಮೆರಿಕ ಕೂಡ ಗುಪ್ತಚರ ಮಾಹಿತಿಗಳನ್ನು ಒದಗಿಸುವ ಮೂಲಕ ಪರೋಕ್ಷವಾಗಿ ಪಾಲ್ಗೊಂಡಿತ್ತು.

ಸೇಡು, ಭಾರಿ ಹಿಂಸೆ:

ತಮ್ಮ ಮುಖ್ಯಸ್ಥನ ಮೇಲೆ ನಡೆದ ದಾಳಿಯ ಮಾಹಿತಿ ಸಿಗುತ್ತಿದ್ದಂತೆ, ಅದಕ್ಕೆ ಪ್ರತೀಕಾರವಾಗಿ ಸಿಜೆಎನ್‌ಜಿ ಡ್ರಗ್ಸ್‌ ಗ್ಯಾಂಗ್‌ನವರು ಹಿಂಸಾಚಾರ ಶುರು ಮಾಡಿದ್ದಾರೆ. ಪಶ್ಚಿಮ ಜಲಿಸ್ಕೊದ 20ಕ್ಕೂ ಅಧಿಕ ರಸ್ತೆಗಳನ್ನು ತಡೆದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ನೋಡನೋಡುತ್ತಿದ್ದಂತೆ ಇದು ಇನ್ನೂ ಹಲವು ನಗರಗಳಿಗೆ ವ್ಯಾಪಿಸಿದ್ದು, ಅಂಗಡಿ-ಮುಂಗಟ್ಟುಗಳನ್ನು ದಹಿಸಲಾಗಿದೆ. 20 ರಾಜ್ಯಗಳ ಸುಮಾರು 250 ರಸ್ತೆಗಳಲ್ಲಿ ಬೆಂಕಿ ಹಚ್ಚಿ ಕ್ರೌರ್ಯ ಮೆರೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆ, ರಾಷ್ಟ್ರೀಯ ಗಾರ್ಡ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅತ್ತ ಜಲಿಸ್ಕೊ ಗವರ್ನರ್‌, ಜನರಿಗೆ ಮನೆಯಿಂದ ಹೊರಬರದಂತೆ ಸೂಚಿಸಿದ್ದು, ಪರಿಸ್ಥಿತಿ ಶಾಂತವಾಗುವ ತನಕ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಔಷಧ, ಕಿರಾಣಿ ಸೇರಿದಂತೆ ಎಲ್ಲಾ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಬಾಗಿಲು ಹಾಕಿವೆ. ಅತ್ತ ಅಮೆರಿಕ ಮತ್ತು ಕೆನಡಾ, ಮೆಕ್ಸಿಕೋ ಮಾರ್ಗದ ಹಲವು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿವೆ.

ಕ್ರೀಡೆಗಳಿಗೂ ಕತ್ತರಿ:

ಜನ ಹೊರಗೆ ಕಾಲಿಡುವುದೂ ಕಷ್ಟವಾಗಿರುವ ಕಾರಣ, ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮ ಮತ್ತು ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ನಡೆಯಬೇಕಿದ್ದ ಹಲವು ಫುಟ್ಬಾಲ್‌ ಪಂದ್ಯಗಳನ್ನು ಮುಂದೂಡಲಾಗಿದೆ.

ಭಾರತೀಯರಿಗೆ ಭಾರತ ಸರ್ಕಾರ ಸಲಹಾವಳಿ:

ಮೆಕ್ಸಿಕೋ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಸಲಹಾವಳಿಯನ್ನು ಬಿಡುಗಡೆ ಮಾಡಿದ್ದು, ಮನೆಯಿಂದ ಹೊರಬರದಂತೆ ಎಚ್ಚರಿಸಿದೆ. ಜತೆಗೆ ಸುತ್ತಮುತ್ತ ನಡೆಯುತ್ತಿರುವ ಘಟನೆಗಳ ಮೇಲೆ ಕಣ್ಣಿಟ್ಟು, ಮಾಧ್ಯಮ ವರದಿಗಳ ಮೂಲಕ ಮಾಹಿತಿ ಪಡೆಯುವಂತೆ ಸೂಚಿಸಿದೆ. ತಾವಿರುವ ಸ್ಥಳದ ಬಗ್ಗೆ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ನೀಡುವಂತೆಯೂ ನಿರ್ದೇಶಿಸಿದೆ.

 ಯಾರು ಮಂಚೋ? ಡ್ರಗ್‌ ಲಾರ್ಡ್‌ ಆಗಿದ್ದು ಹೇಗೆ?

1966ರಲ್ಲಿ ಜನಿಸಿದ ಮೆಂಚೋ, ಚಿಕ್ಕಂದಿನಲ್ಲೇ ಅಫೀಮು ಗಸಗಸೆ ಮತ್ತು ಗಾಂಜಾವನ್ನು ಬೆಳೆದು ಮಾರಾಟ ಮಾಡುತ್ತಿದ್ದ. ಬಳಿಕ ಈತ ಅಮೆರಿಕಕ್ಕೆ ವಲಸೆ ಹೋಗಿದ್ದ. ಅಲ್ಲಿ 1994ರಲ್ಲಿ, ಹೆರಾಯಿನ್ ಕಳ್ಳಸಾಗಣೆ ಆರೋಪದ ಮೇಲೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, ಬಳಿಕ ಗಡೀಪಾರು ಮಾಡಲಾಗಿತ್ತು. ಮತ್ತೆ ಮೆಕ್ಸಿಕೋಗೆ ಮರಳಿದ ಮೆಂಚೋ, ಮಿಲೆನಿಯೊ ಕಾರ್ಟೆಲ್ (ಡ್ರಗ್ಸ್‌ ಜಾಲ) ಜತೆ ಸೇರಿಕೊಂಡ.

ಕಾರ್ಟೆಲ್‌ನಲ್ಲಿನ ಆಂತರಿಕ ಸಂಘರ್ಷದ ಕಾರಣ ಅದರಿಂದ ಹೊರಬಂದವ, 2009ರಲ್ಲಿ ಸಿಜೆಎನ್‌ಜಿ ಸ್ಥಾಪಿಸಿದ. ಈತನ ನಾಯಕತ್ವದಲ್ಲಿ, ಕೊಕೇನ್, ಮೆಥಾಂಫೆಟಮೈನ್ ಮತ್ತು ಫೆಂಟನಿಲ್‌ನಂತಹ ಮಾದಕ ವಸ್ತುಗಳನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡತೊಡಗಿದ ಕಾರ್ಟೆಲ್, ವೇಗವಾಗಿ ವಿಸ್ತರಿಸಿತು. ಬಳಿಕ ಕಳ್ಳತನ, ಸುಲಿಗೆ, ಅಪಹರಣ, ವಲಸಿಗರ ಕಳ್ಳಸಾಗಣೆಯಂತಹ ಕೃತ್ಯಗಳಿಗೂ ಕೈಹಾಕಿತು. ಹೀಗೆ, ಮೆಕ್ಸಿಕೋದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಸ್ತಿತ್ವವನ್ನು ಸ್ಥಾಪಿಸಿತು.

ಈ ಕಾರ್ಟೆಲ್‌ನ ಸದಸ್ಯರು ಸೈನಿಕರು ಮತ್ತು ಪೊಲೀಸ್‌ ಅಧಿಕಾರಿಗಳ ಹತ್ಯೆಗೂ ಯತ್ನ ನಡೆಸಿದ ಇತಿಹಾಸ ಹೊಂದಿದ್ದಾರೆ. ಈತನ ಸುಳಿವು ನೀಡಿದವರಿಗೆ ಅಮೆರಿಕ 136 ಕೋಟಿ ರು. ಬಹುಮಾನವನ್ನೂ ಘೋಷಿಸಿತ್ತು. ಆದರೂ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಮೆಂಚೋ ಯಶಸ್ವಿಯಾಗಿದ್ದ. 

ಮೆಕ್ಸಿಕೋದಲ್ಲಿ ಹುಟ್ಟಿದ್ದ ಎಲ್‌ ಮೆಂಚೋ, ಚಿಕ್ಕಂದಿನಲ್ಲೇ ಅಮೆರಿಕಕ್ಕೆ ವಲಸೆ ಹೋಗಿದ್ದ. ಆದರೆ ಅಪರಾಧ ಕೃತ್ಯಗಳ ಕಾರಣಕ್ಕೆ ಅಲ್ಲಿಂದಲೂ ಗಡೀಪಾರಿಗೆ ಬಂದು ಮೆಕ್ಸಿಕೋದಲ್ಲಿ ದೊಡ್ಡ ಡ್ರಗ್ಸ್‌ ಜಾಲ ಕಟ್ಟಿ ಬೆಳೆಸಿದ್ದ. ಅಮೆರಿಕಕ್ಕೆ ಭಾರೀ ಪ್ರಮಾಣದಲ್ಲಿ ಕೊಕೇನ್, ಮೆಥಾಂಫೆಟಮೈನ್ ಮತ್ತು ಫೆಂಟನಿಲ್‌ನಂತಹ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿ ಅಮೆರಿಕಕ್ಕೆ ಭಾರೀ ತಲೆನೋವಾಗಿದ್ದ.

₹135 ಕೋಟಿ ಬಹುಮಾನ

ಅಮೆರಿಕದಲ್ಲಿ ಯುವಸಮೂಹ ಮಾದಕ ವಸ್ತು ವ್ಯಸನಿಗಳಾಲು ಎಲ್‌ ಮೆಂಚೋ ಪಾತ್ರ ದೊಡ್ಡದು ಎಂದು ಆಕ್ರೋಶಗೊಂಡಿದ್ದ ಅಮೆರಿಕ ಸರ್ಕಾರ ಈತನ ಕುರಿತು ಮಾಹಿತಿ ನೀಡಿದವರಿಗೆ 135 ಕೋಟಿ ರು.ಬಹುಮಾನ ಘೋಷಿಸಿತ್ತು. ಇದೀಗ ಎಲ್‌ ಮೆಂಚೋ ಇದ್ದ ಸ್ಥಳದ ಬಗ್ಗೆ ಖಚಿತ ಗುಪ್ತಚರ ಮಾಹಿತಿಯನ್ನು ಅಮೆರಿಕ ಸರ್ಕಾರ ಮೆಕ್ಸಿಕೋ ಜೊತೆ ಹಂಚಿಕೊಂಡಿತ್ತು. ಅದನ್ನು ಆಧರಿಸಿಯೇ ಆತನ ಮೇಲೆ ಮೆಕ್ಸಿಕೋ ಪೊಲೀಸರು ದಾಳಿ ನಡೆಸಿದ್ದರು ಎನ್ನಲಾಗಿದೆ.

₹5 ಲಕ್ಷ ಕೋಟಿ ವಹಿವಾಟು

ದಶಕಗಳಿಂದಲೂ ಮೆಕ್ಸಿಕೋದಲ್ಲಿ ಹಲವು ಡ್ರಗ್ಸ್‌ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ವಾರ್ಷಿಕ ವಹಿವಾಟು ಅಂದಾಜು 5 ಲಕ್ಷ ಕೋಟಿ ರು.ನಷ್ಟಿದೆ ಎಂಬ ಅಂದಾಜಿದೆ. ಈ ಜಾಲಗಳ ನಡುವೆ ಕಳೆದ 2 ದಶಕಗಳಲ್ಲಿ ನಡೆದ ಹಿಂಸಾಚಾರಕ್ಕೆ ಕನಿಷ್ಠ 1.2 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈ ತಂಡಗಳು ದೇಶದ ರಾಜಕೀಯದ ಮೇಲೂ ಭಾರೀ ಪ್ರಮಾವ ಹೊಂದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ