ನವದೆಹಲಿ: ಪಹಲ್ಗಾಂ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಜತೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವಾಲಯವು ಮೇ 7ರ ಬುಧವಾರದಂದು ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು (ಮಾಕ್ ಡ್ರಿಲ್) ನಡೆಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇಂಥ ತಾಲೀಮು ನಡೆಯುತ್ತಿರುವುದು ಇದೇ ಮೊದಲು.
ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ 25 ಪ್ರವಾಸಿಗರು ಸೇರಿದಂತೆ 26 ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಇವರು ಪಾಕ್ ಬೆಂಬಲಿತ ಉಗ್ರರಾದ ಕಾರಣ ದೇಶಾದ್ಯಂತ ಪಾಕ್ ವಿರುದ್ಧ ಯುದ್ಧ ಸಾರಬೇಕು ಎಂಬ ಕೂಗು ವ್ಯಕ್ತವಾಗಿದೆ. ಈವರೆಗೂ ಸರ್ಕಾರ ರಾಜತಾಂತ್ರಿಕ ಪ್ರತೀಕಾರ ಕ್ರಮಗಳನ್ನು ಕೈಗೊಂಡಿದೆ. ಈಗ ಕೇಂದ್ರ ಸರ್ಕಾರ ಅಣಕು ರಕ್ಷಣಾ ಕವಾಯತಿಗೆ ಸೂಚಿಸಿದ್ದು ಹಲವು ಬಗೆಯ ಚರ್ಚೆಗಳಿಗೆ ನಾಂದಿ ಹಾಡಿದೆ.
ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಈ ತಾಲೀಮಿನ ವೇಳೆ ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ವಿಧಾನವನ್ನು ಅಭ್ಯಸಿಸಲು ಸೂಚಿಸಲಾಗಿದೆ. ಕವಾಯತು ಸಮಯದಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತರಬೇತಿ ನೀಡಲಾಗುತ್ತದೆ.
‘ಇದು ಬಲು ಅಪರೂಪದ ಕ್ರಮವಾಗಿದೆ. ಗಡಿ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿ ವಿವಿಧ ರಾಜ್ಯಗಳಿಗೆ ಕವಾಯತಿಗೆ ಸೂಚಿಸಲಾಗಿದೆ. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಮತ್ತು ಇದು ಕೇವಲ ಒಂದು ಕವಾಯತು’.
ಅಲ್ಲದೆ, ‘ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಅಧಿಕಾರಿಗಳೊಂದಿಗೆ ಒಂದರ ಮೇಲೊಂದರಂತೆ ಉನ್ನತ ಸಭೆ ನಡೆಸಿದ ಬಳಿಕ ಈ ಸೂಚನೆ ಹೊರಬಿದ್ದಿರುವುದು ಗಮನಾರ್ಹ’ ಎಂದು ಅವು ತಿಳಿಸಿವೆ. ಪಹಲ್ಗಾಂನಲ್ಲಿ ದಾಳಿ ಮಾಡಿದವರು ಹಾಗೂ ಸೂತ್ರಧಾರರು ಊಹಿಸಲು ಆಗದಂತಹ ಪ್ರತೀಕಾರ ತೆಗೆದುಕೊಳ್ಳುವುದಾಗಿ ಮೋದಿ ಕೆಲ ದಿನಗಳ ಹಿಂದೆ ಹೇಳಿದ್ದರು. ಅದರ ಬೆನ್ನಲ್ಲೇ ಅಣಕು ಕಾರ್ಯಾಚರಣೆ ನಡೆಯುತ್ತಿರುವುದು ಮಹತ್ವದ್ದಾಗಿದೆ.
ಪಂಜಾಬಲ್ಲಿ ಮೊನ್ನೆ ನಡೆದಿತ್ತು ‘ಬ್ಲ್ಯಾಕೌಟ್ ಡ್ರಿಲ್’:
ಭಾನುವಾರವಷ್ಟೆ ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ, ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್ ಕಡಿತ ಮಾಡಿ ‘ಬ್ಲ್ಯಾಕೌಟ್ ಡ್ರಿಲ್’ ನಡೆಸಲಾಗಿತ್ತು. ಈ ವೇಳೆ ವಾಹನ ಸಂಚಾರವನ್ನೂ ನಿಲ್ಲಿಸಿ ಅವುಗಳ ಲೈಟ್ ಆಫ್ ಮಾಡಲಾಗಿತ್ತು. ‘ಯುದ್ಧದ ಸಂದರ್ಭದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು.
- ಹಲವು ರಾಜ್ಯಗಳಲ್ಲಿ ವಿದ್ಯುತ್ ದೀಪ ಬಂದ್ । ವೈಮಾನಿಕ ದಾಳಿ ಎಚ್ಚರಿಕೆಯ ಸೈರನ್ ಶಬ್ದ
- ಯುದ್ಧವನ್ನೇ ನೋಡದ ಇಂದಿನ ಪೀಳಿಗೆಗೆ ಸ್ವಯಂ ರಕ್ಷಣೆ ಕುರಿತು ತರಬೇತಿ ಕಾರ್ಯಕ್ರಮ
- ಜನರ ಸ್ಥಳಾಂತರ ಪರೀಕ್ಷೆ । ಉಗ್ರ ಪಾಕಿಸ್ತಾನದ ಮೇಲಿನ ಸಮರಕ್ಕಿದು ಪೂರ್ವ ಸಿದ್ಧತೆ
ನಾಳೆ ಏನು ನಡೆಯುತ್ತೆ?
1. ವಾಯುದಾಳಿ ಎಚ್ಚರಿಕೆ ಸೈರನ್
ಶತ್ರುಗಳ ವಾಯುದಾಳಿಯ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ಸೈರನ್‌ಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
2. ನಾಗರಿಕರಿಗೆ ರಕ್ಷಣಾ ತರಬೇತಿ
ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಪೀಳಿಗೆಯು ಎಂದಿಗೂ ಯುದ್ಧವನ್ನು ನೋಡಿಲ್ಲ. ಹೀಗಾಗಿ ಇದು ಮುಖ್ಯವಾಗಿದೆ.
3. ಬ್ಲ್ಯಾಕ್ ಔಟ್ ಡ್ರಿಲ್
ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಇದರ ಪರೀಕ್ಷೆ ಈಗ ನಡೆಯಲಿದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.
4. ಪ್ರಮುಖ ಸ್ಥಾವರಗಳ ಮರೆಮಾಚುವಿಕೆ
ನಮ್ಮ ಪ್ರಮುಖ ಸ್ಥಾವರಗಳು ಸುರಕ್ಷಿತವಾಗಿರುವುದನ್ನು ಮತ್ತು ಶತ್ರುಗಳ ಬಾಂಬ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
5. ಸ್ಥಳಾಂತರ ಯೋಜನೆಯ ಪೂರ್ವಾಭ್ಯಾಸ
ದುರ್ಗಮ ಪ್ರದೇಶಗಳಿಂದ ನಾಗರಿಕರನ್ನು ಹೇಗೆ ಸ್ಥಳಾಂತರಿಸಬಹುದು ಮತ್ತು ರಕ್ಷಿಸಬಹುದು ಎಂಬುದನ್ನು ಪರೀಕ್ಷಿಸಲು ಇದನ್ನು ನಡೆಸಲಾಗುತ್ತದೆ.
--ಮೊನ್ನೆ ಪಂಜಾಬ್‌ನಲ್ಲಿ ಆಗಿತ್ತು ಬ್ಲ್ಯಾಕ್‌ಔಟ್
ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್ ಕಡಿತ ಮಾಡಿ ‘ಬ್ಲ್ಯಾಕೌಟ್ ಡ್ರಿಲ್’ ನಡೆಸಲಾಗಿತ್ತು. ಈ ವೇಳೆ ವಾಹನ ಸಂಚಾರವನ್ನೂ ನಿಲ್ಲಿಸಿ ಅವುಗಳ ಲೈಟ್ ಆಫ್ ಮಾಡಲಾಗಿತ್ತು.
ಭಾರತಕ್ಕೆ ರಷ್ಯಾ,ಜಪಾನ್ ಬೆಂಬಲ
ನವದೆಹಲಿ: ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗುತ್ತಿರುವ ಭಾರತಕ್ಕೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದಲೂ ಬೆಂಬಲ ಲಭಿಸಿದೆ. ಇದೇ ವೇಳೆ ಭಾರತ ಪ್ರವಾಸದಲ್ಲಿರುವ ಜಪಾನ್‌ನ ರಕ್ಷಣಾ ಸಚಿವ ಜ। ನಕತಾನಿ ಅವರು ಕೂಡ ಭಾರತಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.--
ನಾವು ಪಾಕ್ ಪರ ನಿಲ್ಲುತ್ತೇವೆ: ಚೀನಾ
ಇಸ್ಲಾಮಾಬಾದ್: ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿರುವ ನಡುವೆಯೇ ನೆರೆಯ ರಾಷ್ಟ್ರ ಚೀನಾ ಮತ್ತೆ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದೆ. ‘ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ’ ಎಂದು ಅದು ಹೇಳಿದೆ.
ಸಂಘರ್ಷದಿಂದ ಪಾಕ್‌ಗೆ ಹೊಡೆತ
ನವದೆಹಲಿ: ಪಾಕಿಸ್ತಾನದ ಜತೆಗಿನ ಸಂಘರ್ಷದ ವಾತಾವರಣ ಭಾರತದ ಆರ್ಥಿಕತೆ ಮೇಲೇ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೆ, ಈಗಾಗಲೇ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮಾತ್ರ ಭಾರೀ ಹೊಡೆತ ನೀಡಲಿದೆ. ಎಂದು ರೇಟಿಂಗ್ ಸಂಸ್ಥೆ ಮೂಡೀಸ್ ಹೇಳಿದೆ.
ಭಾರತ ಮೇಲೆ ಪಾಕ್‌ಮತ್ತೆ ಸೈಬರ್ ಯುದ್ಧ
ನವದೆಹಲಿ: ಪಾಕ್ ಮೂಲದ ಸೈಬರ್ ಗುಂಪುಗಳು ಭಾರತದ ಸೇನಾ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿ ನಡೆಸುವುದನ್ನು ಮುಂದುವರೆಸಿವೆ. ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ವೆಬ್‌ಪೇಜ್‌ಗಳನ್ನು ಸೋಮವಾರ ಹ್ಯಾಕ್ ಮಾಡಿವೆ. ಆದರೆ ಭಾರತದ ಅಧಿಕಾರಿಗಳು ಇದನ್ನು ಹಿಮ್ಮೆಟ್ಟಿಸಿದ್ದಾರೆ.