ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ : ಕೇಂದ್ರ ಸರ್ಕಾರ

Published : Jul 11, 2026, 05:57 AM IST
ethanol blended petrol e20 petrol

ಸಾರಾಂಶ

ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್‌ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ಕ್ರಮದಿಂದ ಮೈಲೇಜ್‌ ಕುಸಿಯುತ್ತದೆ ಹಾಗೂ ವಾಹನಗಳಿಗೆ ಹಾನಿ ಆಗುತ್ತದೆ ಎಂಬ ಕೂಗು ಜೋರಾಗಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ತೈಲ ಸಚಿವಾಲಯ, ‘ಎಥನಾಲ್‌ ಮಿಶ್ರಣದಿಂದ ಎಂಜಿನ್‌ಗೆ ತೊಂದರೆ ಇಲ್ಲ. ಮಾಲಿನ್ಯವೂ ಕಡಿಮೆ ಆಗಲಿದೆ’ ಎಂದಿದೆ.

 ನವದೆಹಲಿ :  ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್‌ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ಕ್ರಮದಿಂದ ಮೈಲೇಜ್‌ ಕುಸಿಯುತ್ತದೆ ಹಾಗೂ ವಾಹನಗಳಿಗೆ ಹಾನಿ ಆಗುತ್ತದೆ ಎಂಬ ಕೂಗು ಜೋರಾಗಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ತೈಲ ಸಚಿವಾಲಯ, ‘ಎಥನಾಲ್‌ ಮಿಶ್ರಣದಿಂದ ಎಂಜಿನ್‌ಗೆ ತೊಂದರೆ ಇಲ್ಲ. ಮಾಲಿನ್ಯವೂ ಕಡಿಮೆ ಆಗಲಿದೆ’ ಎಂದಿದೆ.

ಆದರೆ, ‘ಪೆಟ್ರೋಲ್ ಅನ್ನು ಶೇ.20ರಷ್ಟು ಎಥನಾಲ್ (ಇ20) ಜತೆ ಬೆರೆಸುವುದರಿಂದ ಕೆಲವು ವಾಹನಗಳ ಮೈಲೇಜ್ ಶೇ.5ರಷ್ಟು ಕುಸಿಯಲಿದೆ’ ಒಪ್ಪಿಕೊಂಡಿದೆ. ಇದೇ ವೇಳೆ ಬಂಕ್‌ಗಳಲ್ಲಿ ಇ20, ಇ10 ಹಾಗೂ ಶುದ್ಧ ಪೆಟ್ರೋಲ್‌- ಈ ರೀತಿ 3 ವಿವಿಧ ವರ್ಗಗಳ ಪೆಟ್ರೋಲ್ ಲಭ್ಯ ಇರಬೇಕು ಎಂಬ ಆಗ್ರಹವನ್ನು ತಿರಸ್ಕರಿಸಿದೆ.

ಇ20 ಪೆಟ್ರೋಲ್‌ಗೆ ದೇಶದ ಅನೇಕ ಕಡೆ ವಿರೋಧ ಉಂಟಾಗುತ್ತಿರುವ ಕಾರಣ 12 ಅಂಶಗಳ ಪ್ರಶ್ನೋತ್ತರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಹಂತ ಹಂತವಾಗಿ ಪ್ರಶ್ನೆಗಳಿಗೆ ಉತ್ತರ ನೀಡಿದೆ. ‘ಎಥನಾಲ್‌ ಮಿಶ್ರಣದಿಂದ ವಾಹನದ ಪಿಕಪ್‌ ಉತ್ತಮವಾಗುತ್ತದೆ. ಎಂಜಿನ್ ಕಾರ್ಯಾಚರಣೆ ಸರಳವಾಗುತ್ತದೆ ಹಾಗೂ ಇಂಗಾಲದ ಹೊರಸೂಸುವಿಕೆ ಕೂಡ ಕಡಿಮೆ ಆಗುತ್ತದೆ. ಈ ರೀತಿಯ ಅನೇಕ ಲಾಭಗಳು ಇದರಿಂದ ಉಂಟಾಗುತ್ತವೆ’ ಎಂದು ಸ್ಪಷ್ಟಪಡಿಸಿದೆ,

ಇದಲ್ಲದೆ, ಈ ಯೋಜನೆಯನ್ನು ತುಂಬಾ ಬೇಗನೆ ಜಾರಿಗೆ ತರಲಾಗಿದೆ ಎಂಬ ಆರೋಪವನ್ನು ಅದು ತಿರಸ್ಕರಿಸಿದೆ. ಭಾರತದ ಎಥನಾಲ್ ಮಿಶ್ರಣ ಉಪಕ್ರಮವು 2001ರಲ್ಲಿ ಪ್ರಾರಂಭವಾದ ಪ್ರಾಯೋಗಿಕ ಯೋಜನೆಯಾಗಿದೆ. 2006ರ ಹೊತ್ತಿಗೆ ದೇಶದ ಕೆಲವು ಭಾಗಗಳಲ್ಲಿ ಶೇ.5ರಷ್ಟು ಎಥನಾಲ್‌ ಮಿಶ್ರಣವನ್ನು ಪರಿಚಯಿಸಲಾಗಿತ್ತು ಎಂದಿದೆ.

ಸಮಾಲೋಚಿಸಿ ನಿರ್ಧಾರ:

ಇ20 ಇಂಧನವು ಇ10 ಅಥವಾ ಶುದ್ಧ ಪೆಟ್ರೋಲ್‌ಗಿಂತ ಸ್ವಚ್ಛ, ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಪರಿಣಾಮಕಾರಿ ಇಂಧನ ಎಂದು ತೈಲ ಸಚಿವಾಲಯ ಸಮರ್ಥಿಸಿಕೊಂಡಿದೆ. 10 ವರ್ಷಗಳ ವೈಜ್ಞಾನಿಕ ಪರೀಕ್ಷೆ, ಆಟೋಮೊಬೈಲ್ ತಯಾರಕರೊಂದಿಗೆ ಸಮಾಲೋಚಿಸಿ ಮತ್ತು ದೇಶೀಯ ಎಥನಾಲ್ ಉತ್ಪಾದನೆಯ ವಿಸ್ತರಣೆಯ ನಂತರವೇ ಇದನ್ನು ಹೊರತರಲಾಗಿದೆ ಎಂದು ಸ್ಪಷ್ಟಪಡಿಸಿದೆ.

2014ರವರೆಗೆ ಎಥನಾಲ್ ಮಿಶ್ರಣವು ಶೇಕಡಾ 1.5ರ ಆಸುಪಾಸಿನಲ್ಲಿದ್ದರೂ, ಸರ್ಕಾರವು 2018ರಲ್ಲಿ ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ ಪರಿಚಯಿಸಿದ ನಂತರ ವೇಗಗೊಳಿಸಿತು. ಭಾರತವು 2022ರಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಶೇ.10ರಷ್ಟು ಎಥನಾಲ್ ಮಿಶ್ರಣವನ್ನು ಸಾಧಿಸಿತು. ನಂತರ 2025-26ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಶೇ.20ರಷ್ಟು ಮಿಶ್ರಣವನ್ನು ತಲುಪಿದೆ ಎಂದು ಸಚಿವಾಲಯ ತಿಳಿಸಿದೆ

‘ಮಾರುತಿ ಸುಜುಕಿ ಮತ್ತು ಹೀರೋ ಮೋಟೋಕಾರ್ಪ್ ಸೇರಿದಂತೆ ಆಟೋಮೊಬೈಲ್ ತಯಾರಕರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ, ಅವರು ಇ20ಯಿಂದ ವಾಹನಗಳಿಗೆ ಹಾನಿ ಆಗುತ್ತದೆ ಎಂಬ ಯಾವುದೇ ಮಾಹಿತಿಯನ್ನು ನೀಡಿಲ್ಲ. ವಾಹನಗಳನ್ನು ವ್ಯಾಪಕವಾಗಿ ಪರೀಕ್ಷೆ ಮಾಡಿಯೇ ಇದನ್ನು ಅಳವಡಿಸಲಾಗಿದೆ. ವಾಹನ ತಯಾರಕರು, ಪರೀಕ್ಷಾ ಸಂಸ್ಥೆಗಳು, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ನಿಯಂತ್ರಕರು ಮೌಲ್ಯೀಕರಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದೆ.

ಪ್ರತ್ಯೇಕ ಪೂರೈಕೆ ಅಸಾಧ್ಯ:

ಪೆಟ್ರೋಲ್ ಪಂಪ್‌ಗಳು ಶುದ್ಧ ಪೆಟ್ರೋಲ್, ಇ10 ಮತ್ತು ಇ20 ಪೆಟ್ರೋಲ್‌ ಗಳನ್ನು ಪ್ರತ್ಯೇಕವಾಗಿ ವಿತರಿಸಲು ಆಗದು. ಇದರಿಂದ ಪೂರೈಕೆ ವೆಚ್ಚ ಹೆಚ್ಚಾಗುತ್ತದೆ ಮತ್ತು ಭಾರತದ 1 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳ ಜಾಲದಲ್ಲಿ ಇಂಧನ ವಿತರಣೆಯನ್ನು ಜಟಿಲಗೊಳಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಬೆಲೆ ಇಳಿಸಲು ಆಗದು:

ಇ20 ಮಿಶ್ರಣದ ಪೆಟ್ರೋಲ್‌ ಬೆಲೆ ಇಳಿಸಬೇಕು ಎಂಬ ಬೇಡಿಕೆ ತಿರಸ್ಕರಿಸಿರುವ ಅದು, ‘ಇ20 ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಅಗ್ಗವಾಗಿಲ್ಲ ಏಕೆಂದರೆ ರೈತರನ್ನು ಬೆಂಬಲಿಸಲು ಎಥನಾಲ್ ಖರೀದಿ ಬೆಲೆಗಳನ್ನು ಲಾಭದಾಯಕ ಮಟ್ಟದಲ್ಲಿ ನಿಗದಿಪಡಿಸಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ತುಲನಾತ್ಮಕವಾಗಿ ಕಡಿಮೆಯಾದಾಗ ಪೆಟ್ರೋಲ್ ಬೆಲೆಗಿಂತ ಅಧಿಕವಾಗಬಹುದು’ ಎಂದೂ ಹೇಳಿದೆ.

ಪಂಪ್‌ಗಳಲ್ಲಿ ಇ20 ಮಿಶ್ರಿತ ಪೆಟ್ರೋಲ್‌ ಬೆಲೆಗಳನ್ನು ಕಡಿಮೆ ಮಾಡುವುದಕ್ಕಿಂತ, ‘ಪೆಟ್ರೋಲ್‌ ಆಮದಿನ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವುದು, ಬೆಲೆ ಸ್ಥಿರತೆ ಸುಧಾರಿಸುವುದು ಮತ್ತು ಇಂಧನ ಭದ್ರತೆಯನ್ನು ಬಲಪಡಿಸುವುದು ಯೋಜನೆಯ ಉದ್ದೇಶ’ ಎಂದಿದೆ.

ಲಾಭವಾಗಿದೆ:

2014-15ನೇ ಎಥನಾಲ್ ಪೂರೈಕೆ ವರ್ಷದಿಂದ ಎಥೆನಾಲ್ ಮಿಶ್ರಣ ಯೋಜನೆಯು 1.97 ಲಕ್ಷ ಕೋಟಿ ರು.ಗಳಿಗೂ ಹೆಚ್ಚು ವಿದೇಶಿ ವಿನಿಮಯ ಉಳಿಸಿದೆ, ಸುಮಾರು 316 ಲಕ್ಷ ಟನ್ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿದೆ. ಸುಮಾರು 952 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಮತ್ತು ರೈತರಿಗೆ 1.66 ಲಕ್ಷ ಕೋಟಿ ರು.ಗಳಿಗೂ ಹೆಚ್ಚು ವರ್ಗಾವಣೆ ಮಾಡಿದೆ ಎಂದು ಹೇಳಿಕೊಂಡಿದೆ.

ತಪ್ಪು ಮಾಹಿತಿ ಬೇಡ:

ಇ20 ಬಗ್ಗೆ ತಪ್ಪು ಮಾಹಿತಿಯಿಂದ ಗ್ರಾಹಕರು ಪ್ರಭಾವಿತರಾಗಬಾರದು ಎಂದು ಸಚಿವಾಲಯ ಒತ್ತಾಯಿಸಿದೆ,

ಏನಿದು ಇ20?

ಶೇ.20ರಷ್ಟು ಎಥನಾಲ್‌ ಮಿಶ್ರಣ ಮಾಡಲಾದ ಪೆಟ್ರೋಲ್‌ ಅನ್ನು ಇ20 ಎಂದು ಕರೆಯಲಾಗುತ್ತದೆ. ಇಲ್ಲಿ ‘ಇ’ ಅಂದರೆ ಎಥನಾಲ್‌--

ಇದು ಏಕೆ?

ಶೇ.88ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ವಿದೇಶದ ಮೇಲಿನ ಅವಲಂಬನೆ ತಗ್ಗಿಸಲು, ಇಂಧನ ಭದ್ರತೆ ಹೆಚ್ಚಿಸಲು, ರೈತರಿಗೆ ಅನುಕೂಲ ಕಲ್ಪಿಸಲು ಇ20 ಜಾರಿಗೊಳಿಸಲಾಗಿದೆ. ಎಥನಾಲ್‌ ಮಿಶ್ರಣದಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ.

ಶುರು ಎಂದಿನಿಂದ?

2003ರಿಂದಲೇ ಪೆಟ್ರೋಲ್‌ ಜತೆ ಶೇ.5ರಷ್ಟು ಎಥನಾಲ್‌ ಮಿಶ್ರಣ ಮಾಡಲಾಗುತ್ತಿತ್ತು. ಅದನ್ನು ಇ5 ಎನ್ನಲಾಗುತ್ತಿತ್ತು. ಬಳಿಕ ಇ10 ಜಾರಿಗೆ ಬಂತು. ಪ್ರಮಾಣ ಈಗ ಶೇ.20ಕ್ಕೇರಿದೆ. ಕಳೆದ ವರ್ಷದಿಂದಲೇ ಇ20 ಪೂರೈಕೆ ಆರಂಭವಾಗಿದ್ದು, ದೇಶಾದ್ಯಂತ ಲಭ್ಯ.

ವಿರೋಧ ಏಕೆ?

2023ರ ನಂತರ ತಯಾರಾದ ವಾಹನಗಳು ಇ-20 ಇಂಧನಕ್ಕೆ ಸರಿ ಹೊಂದುತ್ತವೆ. ಹಳೆಯ ವಾಹನಗಳಿಗೆ ಇದು ಸೂಕ್ತವಲ್ಲ ಎಂದು ಮಾಲೀಕರ ವಾದ. ಜತೆ ಇ20 ಬಳಕೆಯಿಂದ ಮೈಲೇಜ್‌, ಎಂಜಿನ್‌ ಕಾರ್ಯಕ್ಷಮತೆ ಕುಸಿಯುತ್ತಿದೆ. ಇ10ಕ್ಕೆ ವಿನ್ಯಾಸವಾದ ವಾಹನಗಳಿಗೆ ಹಾನಿಯಾಗುತ್ತಿದೆ. ಇ20 ಬಿಟ್ಟು ಬೇರೆ ಪೆಟ್ರೋಲ್‌ ಸಿಗುತ್ತಿಲ್ಲ. ಶೇ.20ರಷ್ಟು ಎಥನಾಲ್‌ ಮಿಶ್ರಣ ಮಾಡುತ್ತಿದ್ದರೂ ದರ ಮಾತ್ರ ಇಳಿಸಿಲ್ಲ ಎಂದು ವಿರೋಧ.

ಕಂಪನಿಗಳ ವಾದ ಏನು?

ಇ20 ಅನ್ನು ಲಕ್ಷಾಂತರ ವಾಹನಗಳಿಗೆ ಬಳಸಲಾಗಿದೆ. ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಮೈಲೇಜ್‌ ಸ್ವಲ್ಪ ಕುಸಿಯುತ್ತದೆ ಎಂದು ತೈಲ ಕಂಪನಿಗಳು, ಸರ್ಕಾರ ಹೇಳುತ್ತಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತೀವ್ರ ಬಿಸಿಲ ಅಪಾಯ: ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗ್ಳೂರು
ಮಂಗಳೂರಲ್ಲಿ ಒಎನ್‌ಜಿಸಿ ತೈಲ ಸಂಗ್ರಹಾಗಾರ