ಮಿಸ್‌ ವರ್ಲ್ಡ್‌ ಸ್ಪರ್ಧೆಯಿಂದ ಬ್ರಿಟನ್‌ ಚೆಲುವೆ ಅರ್ಧಕ್ಕೇ ಹೊರಗೆ

KannadaprabhaNewsNetwork | Updated : May 25 2025, 05:02 AM IST
‘ವ್ಯವಸ್ಥಾಪಕರು ನನ್ನನ್ನು ಶೋಷಿಸುತ್ತಾ, ವೇಶ್ಯೆಯಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ, ಇಲ್ಲಿ ನಡೆಯುತ್ತಿರುವ ಮಿಸ್‌ ವರ್ಲ್ಡ್‌ ಸ್ಪರ್ಧೆಯಿಂದ ಬ್ರಿಟನ್‌ ಸ್ಪರ್ಧಿ ಮಿಲ್ಲಾ ಮಾಗೀ (24) ಅರ್ಧದಲ್ಲೇ ಹೊರನಡೆದಿದ್ದಾರೆ.
Follow Us

 ಹೈದರಾಬಾದ್‌: ‘ವ್ಯವಸ್ಥಾಪಕರು ನನ್ನನ್ನು ಶೋಷಿಸುತ್ತಾ, ವೇಶ್ಯೆಯಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ, ಇಲ್ಲಿ ನಡೆಯುತ್ತಿರುವ ಮಿಸ್‌ ವರ್ಲ್ಡ್‌ ಸ್ಪರ್ಧೆಯಿಂದ ಬ್ರಿಟನ್‌ ಸ್ಪರ್ಧಿ ಮಿಲ್ಲಾ ಮಾಗೀ (24) ಅರ್ಧದಲ್ಲೇ ಹೊರನಡೆದಿದ್ದಾರೆ.

1950ರಲ್ಲಿ ಮಿಸ್‌ ವರ್ಲ್ಡ್‌ ಸ್ಪರ್ಧೆ ಶುರುವಾದಾಗಿನಿಂದ ಇದನ್ನು ಮಧ್ಯದಲ್ಲೇ ಬಿಟ್ಟು ಹೋದವರಲ್ಲಿ ಮಾಗೀ ಮೊದಲಿಗರು. ಮೊದಮೊದಲು ವೈಯಕ್ತಿಕ ಕಾರಣಗಳಿಂದಾಗಿ ಆಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುದ್ದಿಯಾಗಿತ್ತಾದರೂ, ಬಳಿಕ ಬ್ರಿಟನ್‌ ಪತ್ರಿಕೆ ಮುಂದೆ ಬೇರೆಯದೇ ಕಾಣ ನೀಡಿದ್ದಾರೆ.

‘ನಾನು ಕೈಲಾದ ಬದಲಾವಣೆ ತರಲು ಅಲ್ಲಿಗೆ ಹೋಗಿದ್ದೆ. ಆದರೆ ಆ ಸ್ಪರ್ಧೆ ಹಿಂದಿನ ಕಾಲಕ್ಕೇ ಅಂಟಿಕೊಂಡಿದೆ. ದಿನವಿಡೀ ಗೌನ್‌ ಧರಿಸಿ ಮೇಕಪ್‌ ಮಾಡಿಕೊಂಡೇ ಇರಲು ಹೇಳಲಾಯಿತು. ಸ್ಪರ್ಧೆಯಲ್ಲಿ ಹೂಡಿಕೆ ಮಾಡಿದವರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ 6 ಅತಿಥಿಗಳು ಕುಳಿತಿರುತ್ತಿದ್ದ ಪ್ರತಿ ಮೇಜಿಗೆ 2 ಹುಡುಗಿಯರನ್ನು ನಿಯೋಜಿಸಲಾಗಿತ್ತು. ಮಧ್ಯವಯಸ್ಕರಾಗಿದ್ದ ಅವರ ‘ಮನರಂಜಿಸಿ’ ಎಂದು ಸೂಚಿಸಲಾಗುತ್ತಿತ್ತು. ಆಗ ನನಗೆ ಮನರಂಜನೆಗಾಗಿ ಬಳಕೆಯಾಗುತ್ತಿರುವ ವೇಶ್ಯೆಯಂತೆ ಅನುಭವವಾಯಿತು. ಇದು ಸರಿಯೆನಿಸದಿದ್ದರೂ ಯಾರೂ ನಮ್ಮನೋವು ಕೇಳಿಸಿಕೊಳ್ಳಲಿಲ್ಲ. ನಮ್ಮನ್ನು ಅನುಚಿತವಾಗಿ ನಡೆಸಿಕೊಳ್ಳಲಾಯಿತು’ ಎಂದು ಮಾಗೀ ತವರಿಗೆ ಮರಳಿದ ‘ದ ಸನ್‌’ ಪತ್ರಿಕೆ ಮುಮದೆ ಆರೋಪಿಸಿದ್ದಾರೆ.

ರನ್ನರ್‌ ಅಪ್‌ ಕಳಿಸಿದ ಬ್ರಿಟನ್‌:ಮಾಗೀ ಜಾಗಕ್ಕೆ ಮಿಸ್ ಇಂಗ್ಲೆಂಡ್‌ನ ರನ್ನರ್ ಅಪ್ ಷಾರ್ಲೆಟ್ ಗ್ರಾಂಟ್‌ ಬರಲಿದ್ದಾರೆ. ಮೇ 31ರಂದು ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ.

ಆರೋಪ ಸುಳ್ಳು- ಸಂಘಟಕರು:

ಮಾಗೀ ಮಾಡಿರುವ ಆರೋಪಗಳು ಸುಳ್ಳು ಎಂದಿರುವ ಆಯೋಜಕರು, ಇದಕ್ಕೆ ಪೂರಕವಾಗಿ ಆಕೆ ಸ್ಪರ್ಧೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ‘ತಿಂಗಳ ಆರಂಭದಲ್ಲಿ, ತನ್ನ ತಾಯಿಯ ಆರೋಗ್ಯ ಸರಿ ಇಲ್ಲವೆಂದು ಆಕೆ ಸ್ಪರ್ಧೆಯಿಂದ ನಿರ್ಗಮನಕ್ಕೆ ಅನುಮತಿ ಕೇಳಿದ್ದಳು. ಅದಕ್ಕೆ ಒಪ್ಪಿದ ಮಿಸ್‌ ವರ್ಲ್ಡ್‌ನ ಅಧ್ಯಕ್ಷೆ ಜೂಲಿಯಾ ಮೊರ್ಲಿ, ಮಾಗೀಗೆ ಇಂಗ್ಲೆಂಡ್‌ಗೆ ಮರಳಲು ಅಗತ್ಯ ವ್ಯವಸ್ಥೆ ಮಾಡಿಕೊಟ್ಟರು’ ಎಂದು ಹೇಳಿದ್ದಾರೆ.

Read more Articles on