ಜನನಿಬಿಡ ಪ್ರದೇಶಗಳಲ್ಲೇ ಪಾಕ್ ತೀವ್ರ ಶೆಲ್ ದಾಳಿ ಹಿನ್ನೆಲೆ
ಕಳೆದೊಂದು ದಶಕದಲ್ಲಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಿ, ನಾಗರಿಕರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಯಾವುದೇ ಸಂಘರ್ಷದ ಸಂದರ್ಭದಲ್ಲೂ ಪಾಕ್ ಸೇನೆ ರಜೌರಿ ಮತ್ತು ಪೂಂಛ್ ನಗರಗಳ ಮೇಲೆ ಶೆಲ್ಲಿಂಗ್ ನಡೆಸಿರಲಿಲ್ಲ. ಹಾಗಾಗಿ ಅಲ್ಲಿ ಬಂಕರ್‌ಗಳನ್ನು ನಿರ್ಮಿಸಿರಲಿಲ್ಲ. ಆದರೆ ಈ ಬಾರಿ ಇವುಗಳ ಮೇಲೆ ತೀವ್ರತರವಾದ ಶೆಲ್ ದಾಳಿ ನಡೆಸುತ್ತಿರುವುದರಿಂದ, ಸಮುದಾಯ ಬಂಕರ್ಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
‘ಹಿಂದೆಂದಿಗಿಂತಲೂ ಈ ಬಾರಿ ದಾಳಿಯ ಸ್ವರೂಪ ಮತ್ತು ತೀವ್ರತೆ ಭಿನ್ನವಾಗಿದೆ. ಇದೇ ಮೊದಲ ಬಾರಿಗೆ, ರಜೌರಿ ಮತ್ತು ಪೂಂಛ್‌ನಂತಹ ಜನನಿಬಿಡ ಪಟ್ಟಣಗಳು ನೇರ ಗುಂಡಿನ ದಾಳಿಗೆ ಒಳಗಾಗಿವೆ. ಹಾಗಾಗಿ ಪ್ರತ್ಯೇಕ ಬಂಕರ್‌ಗಳಿಗಿಂತ ಸಮುದಾಯ ಬಂಕರ್‌ಗಳ ನಿರ್ಮಾಣ ಅಗತ್ಯ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.