ನವದೆಹಲಿ: ಆಪರೇಷನ್ ಸಿಂದೂರದ ಬಗ್ಗೆ ಕಳೆದ 4 ದಿನಗಳಿಂದ ನಿತ್ಯವೂ ದೇಶಕ್ಕೆ ಮಾಹಿತಿ ನೀಡುತ್ತಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯ ಟೀಕೆ ಮಾಡಲಾಗುತ್ತಿದ್ದು, ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಭಾರತ - ಪಾಕ್ ನಡುವಿನ ಕದನವಿರಾಮದ ಬಗ್ಗೆ ಮಿಸ್ರಿ ಶನಿವಾರ ಘೋಷಿಸಿದ್ದರು. ಅದರ ಬೆನ್ನಲ್ಲೇ, ‘ಕನದ ವಿರಾಮದ ನಿರ್ಧಾರವನ್ನು ತೆಗೆದುಕೊಂಡವರೇ ಮಿಸ್ರಿ’ ಎಂದುಕೊಂಡು, ಆ ಬಗ್ಗೆ ಅಸಮಾಧಾನಗೊಂಡ ಜನ ಅವರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ.
ಮಿಸ್ರಿಯವರನ್ನು ‘ದೇಶದ್ರೋಹಿ’ ಎಂದು ಕರೆಯಲಾಗುತ್ತಿದ್ದು, ಅವರು ವಿದೇಶಾಂಗ ಕಾರ್ಯದರ್ಶಿಯಾಗುವ ಮೊದಲು ಮಾಡಿದ್ದ ಕೆಲ ಟ್ವೀಟ್‌ಗಳನ್ನು ಉಲ್ಲೇಖಿಸಿ ಟೀಕಿಸಲಾಗುತ್ತಿದೆ. ಇದರಲ್ಲಿ, ‘ನನ್ನ ಜೀವನದ ಈವರೆಗೆ ದೊಡ್ಡ ಸಾಧನೆ ನನ್ನ ಮಗಳು’ ಎಂಬುದೂ ಒಂದು. ಕಾರಣ, ಲಂಡನ್‌ನಲ್ಲಿ ನೆಲೆಸಿರುವ ಅವರ ಪುತ್ರಿ ಡಿಡೋನ್ ಮಿಸ್ರಿ, ರೋಹಿಂಗ್ಯಾ ನಿರಾಶ್ರಿತರರಿಗೆ ಕಾನೂನು ನೆರವು ನೀಡುತ್ತಿದ್ದಾರೆ. ಹೀಗಾಗಿ ಅವರನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಅವರ ವೈಯಕ್ತಿಕ ಮಾಹಿತಿಗಳನ್ನೂ ಸಾರ್ವಜನಿಕಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮಿಸ್ರಿ ತಮ್ಮ ಎಕ್ಸ್ ಖಾತೆಯನ್ನೇ ಲಾಕ್ ಮಾಡಿದ್ದಾರೆ,
ಮಿಸ್ರಿಗೆ ಹಲವರ ಬೆಂಬಲ:
ಮಿಸ್ರಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೆಲ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಅವರ ಬೆನ್ನಿಗೆ ನಿಂತಿದ್ದಾರೆ.
ಮಿಸ್ರಿಯವರನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಬ್ಬ ಅಧಿಕಾರಿಯಲ್ಲ, ಸರ್ಕಾರ. ಈಗ ಮಾಡಲಾಗುತ್ತಿರುವ ಟೀಕೆಗಳಿಂದ, ಹಗಲು-ರಾತ್ರಿ ದೇಶಕ್ಕಾಗಿ ದುಡಿಯುತ್ತಿರುವ ಒಬ್ಬ ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಮುರಿದಂತಾಗುತ್ತದೆ’ ಎಂದಿದ್ದಾರೆ. ಜತೆಗೆ, ‘ಬಿಜೆಪಿ ಮಿಸ್ರಿಯವರ ಬೆಂಬಲಕ್ಕೆ ಬರುತ್ತಿಲ್ಲ’ ಎಂದು ಟೀಕಿಸಿದ್ದಾರೆ.
ಮಿಸ್ರಿಯವರನ್ನು ‘ರಾಷ್ಟ್ರಕ್ಕಾಗಿ ಅವಿಶ್ರಾಂತವಾಗಿ ದುಡಿಯುವ ಸಭ್ಯ, ಪ್ರಾಮಾಣಿಕ ರಾಜತಾಂತ್ರಿಕ ಅಧಿಕಾರಿ’ ಎಂದು ಕರೆದಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಅವರ ವಿರುದ್ಧದ ಟೀಕೆಗಳನ್ನು ಖಂಡಿಸಿದ್ದಾರೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ಪ್ರತಿಕ್ರಿಯಿಸಿ, ‘ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಭ್ಯತೆಯ ಎಲ್ಲಾ ಗೆರೆಗಳನ್ನು ಮೀರಿದ ನಡವಳಿಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಂಘ ಮಿಸ್ರಿಯವರ ಪರವಾಗಿ ನಿಂತಿದ್ದು, ‘ಅವರ ವಿರುದ್ಧದ ಟೀಕೆಗಳು ಅಸಹನೀಯ’ ಎಂದಿದೆ.