ಚುನಾವಣಾ ನಿಯಮ ತಿದ್ದುಪಡಿ : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾನೂನು ಹೋರಾಟ

KannadaprabhaNewsNetwork |  
Published : Dec 23, 2024, 01:02 AM ISTUpdated : Dec 23, 2024, 04:42 AM IST
ಚುನಾವಣಾ ನಿಯಮ ತಿದ್ದುಪಡಿ | Kannada Prabha

ಸಾರಾಂಶ

ಚುನಾವಣಾ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಎಲೆಕ್ಟ್ರಾನಿಕ್‌ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನಿರ್ಬಂಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್‌ ಎಚ್ಚರಿಸಿದೆ.  

ನವದೆಹಲಿ: ಚುನಾವಣಾ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಎಲೆಕ್ಟ್ರಾನಿಕ್‌ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನಿರ್ಬಂಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್‌ ಎಚ್ಚರಿಸಿದೆ. ಇನ್ನೊಂದೆಡೆ ಇಂಥ ತಿದ್ದುಪಡಿ ಆಯೋಗದ ಸಮಗ್ರತೆ ನಾಶಕ್ಕೆ ಸರ್ಕಾರದ ರೂಪಿಸಿದ ಯೋಜಿತ ಸಂಚು ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಖರ್ಗೆ, ‘ಈ ಮೊದಲು ಮೋದಿ ಸರ್ಕಾರ, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಮುಖ್ಯ ಚುನಾವಣಾ ಆಯುಕ್ತರನ್ನೇ ತೆಗೆದುಹಾಕಿತ್ತು. ಈಗ ಹೈಕೋರ್ಟ್‌ನ ಆದೇಶದ ಹೊರತಾಗಿಯೂ ಚುನಾವಣೆ ಕುರಿತ ಮಾಹಿತಿ ದೊರಕದಂತೆ ತಡೆ ಒಡ್ಡಿದೆ. ಚುನಾವಣಾ ಅಕ್ರಮ ಪರಿಶೀಲಿಸುವಂತೆ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ಮನವಿ ಮಾಡಿದಾಗಲೆಲ್ಲಾ ಅದನ್ನು ನಿರಾಕರಿಸಲಾಗುತ್ತಿತ್ತು. ಕೆಲ ಗಂಭೀರ ದೂರುಗಳನ್ನು ಅದು ಸ್ವಿಕರಿಸುತ್ತಲೇ ಇರಲಿಲ್ಲ. ಇದು ಆಯೋಗ ಸ್ವತಂತ್ರವಾಗಿಲ್ಲ ಎಂಬುದಕ್ಕೆ ಸಾಕ್ಷಿ’ ಎಂದು ಕಿಡಿಕಾರಿದ್ದಾರೆ.

ಜೊತೆಗೆ, ‘ಚುನಾವಣೆ ಸಂಬಂಧಿತ ಎಲೆಕ್ಟ್ರಾನಿಕ್‌ ದಾಖಲೆ ಸಾರ್ವಜನಿಕರಿಗೆ ಲಭ್ಯವಾಗದಂತೆ ನಿರ್ಬಂಧಿಸುವುದು ಚುನಾವಣಾ ಆಯೋಗದ ಸಮಗ್ರತೆಯನ್ನು ಸಂಘಟಿತವಾಗಿ ನಾಶಪಡಿಸುವ ಸಂಚಿನ ಭಾಗ. ಜೊತೆಗೆ ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ.

ಚುನಾವಣೆ ವೇಳೆ ದಾಖಲಾಗುವ ಕಾಗದದ ದಾಖಲೆ ಹೊರತಾಗಿ, ಸಿಸಿಟೀವಿ ವಿಡಿಯೋ, ವೆಬ್‌ಕಾಸ್ಟಿಂಗ್‌ ಮೊದಲಾದ ದಾಖಲೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗದಂತೆ ಮಾಡಲು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿತ್ತು. ಚುನಾವಣಾ ಆಯೋಗದ ಸಲಹೆ ಅನ್ವಯ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು.

ಲೋಕ ಚುನಾವಣೆ ವೇಳೆ ಆರ್ಥಿಕ ಸಮೀಕ್ಷೆ ಪ್ರಸ್ತಾಪ:

ಬರೇಲಿ: ಲೋಕಸಭಾ ಚುನಾವಣೆಯ ವೇಳೆ ಆರ್ಥಿಕ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದ ವಿಪಕ್ಷ ನಾಯಕ ರಾಹುಲ್‌ ಗಾಂಧಿಯರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದ್ದು, ಜ.7ರಂದು ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಅಖಿಲ ಭಾರತ ಹಿಂದೂ ಮಹಾಸಂಘದ ಅಧ್ಯಕ್ಷ ಪಂಕಜ್‌ ಪಾಠಕ್‌ ರಾಹುಲ್‌ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ‘ಲೋಕಸಭೆ ಚುನಾವಣೆ ವೇಳೆ, ‘ದುರ್ಬಲ ವರ್ಗದವರ ಪ್ರಮಾಣ ಹೆಚ್ಚಿದ್ದರೂ, ಅವರು ಅಲ್ಪ ಆಸ್ತಿ ಹೊಂದಿದ್ದಾರೆ’ ಎಂದು ಹೇಳಿ, ಆ ವರ್ಗದವರನ್ನು ಪ್ರಚೋದಿಸಿ, ರಾಹುಲ್‌ ರಾಜಕೀಯ ಲಾಭಕ್ಕೋಸ್ಕರ ದ್ವೇಷ ಹರಡಲು ಬಯಸಿದ್ದರು ಎಂದು ಆರೋಪಿಸಿ ಪಾಠಕ್‌ ಪರ ವಕೀಲ ವೀರೇಂದ್ರ ಪಾಲ್‌ ಗುಪ್ತಾ ಅರ್ಜಿ ಸಲ್ಲಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!