ಏರ್‌ಪೋರ್ಟಿಗೇ ತೆರಳಿ ಪುಟಿನ್‌ಗೆ ಪ್ರಧಾನಿ ಮೋದಿ ಅಚ್ಚರಿ ಸ್ವಾಗತ

KannadaprabhaNewsNetwork |  
Published : Dec 05, 2025, 12:45 AM ISTUpdated : Dec 05, 2025, 04:30 AM IST
Modi - Putin

ಸಾರಾಂಶ

ಭಾರತ- ರಷ್ಯಾ ಸಂಬಂಧಕ್ಕೆ ಹುಳಿ ಹಿಂಡಲು ಅಮೆರಿಕ ಯತ್ನಿಸುತ್ತಿರುವ ಹೊತ್ತಿನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ 2 ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಬಂದಿಳಿದರು. ಈ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ಆತ್ಮೀಯ ಮಿತ್ರನನ್ನು ಆಲಿಂಗಿಸಿ ಸ್ವಾಗತಿಸಿದರು.

 ನವದೆಹಲಿ: ಭಾರತ- ರಷ್ಯಾ ಸಂಬಂಧಕ್ಕೆ ಹುಳಿ ಹಿಂಡಲು ಅಮೆರಿಕ ಯತ್ನಿಸುತ್ತಿರುವ ಹೊತ್ತಿನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಬಂದಿಳಿದರು. ಈ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ಆತ್ಮೀಯ ಮಿತ್ರನನ್ನು ಆಲಿಂಗಿಸಿ ಸ್ವಾಗತಿಸಿದರು. ಯಾವುದೇ ಮುನ್ಸೂಚನೆ ನೀಡದೆ, ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್‌ರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಅವರ ಸ್ನೇಹಪರತೆ ಬಗ್ಗೆ ರಷ್ಯಾ ಅತೀವ ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದೆ.

ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಷ್ಟೇ ಅಲ್ಲದೆ ಬಳಿಕ ಪುಟಿನ್‌ರನ್ನು ತಮ್ಮ ಕಾರಿನಲ್ಲೇ ಕೂರಿಸಿ ಕರೆದೊಯ್ದ ಮೋದಿ ತಮ್ಮ ನಿವಾಸದಲ್ಲಿ ರಷ್ಯಾ ಅಧ್ಯಕ್ಷರಿಗೆ ಖಾಸಗಿ ಭೋಜನಕೂಟ ಆಯೋಜಿಸಿದ್ದರು. 4 ವರ್ಷದ ಬಳಿಕ ಭಾರತಕ್ಕೆ ಬಂದಿಳಿದ ತಮ್ಮ ಮಿತ್ರನನ್ನು ಮೋದಿ ಸ್ವಾಗತಿಸಿದ ರೀತಿ, ಉಭಯ ದೇಶಗಳ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಏರಿದರ ಸಂಕೇತ ಎಂದೇ ಬಣ್ಣಿಸಲಾಗಿದೆ.

ಎರಡೂ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಸವಾಲುಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಪುಟಿನ್‌ರ 2 ದಿನಗಳ ಈ ಭೇಟಿ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಉಕ್ರೇನ್‌ ಜತೆಗಿನ ಸಂಘರ್ಷ ಶುರುವಾದ ಬಳಿಕದ ಮೊದಲ ಭಾರತ ಭೇಟಿ ಇದಾಗಿದೆ. ಅಮೆರಿಕದ ಒತ್ತಡದಿಂದಾಗಿ ರಷ್ಯಾದಿಂದ ತೈಲ ಆಮದನ್ನು ಭಾರತ ತಗ್ಗಿಸಿದ್ದರೂ, ಉಭಯ ದೇಶಗಳ ದಶಕಗಳ ಸ್ನೇಹದಲ್ಲೇನೂ ಬಿರುಕು ಬಿದ್ದಿಲ್ಲ ಎಂಬುದಕ್ಕೆ ಈ ಭೇಟಿ ಸಾಕ್ಷಿಯಾಗಲಿದೆ.

23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲು ಪುಟಿನ್‌ ಆಗಮಿಸಿದ್ದು, ಶುಕ್ರವಾರ ಉಭಯ ನಾಯಕರ ನಡುವೆ ಹಲವು ವಿಷಯಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಇದೇ ವೇಳೆ, ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯೂ ದಟ್ಟವಾಗಿದೆ.

ಹಲವು ಒಪ್ಪಂದಕ್ಕೆ ಸಹಿ:

ಶುಕ್ರವಾರ ಪ್ರಧಾನಿ ಮೋದಿ ಮತ್ತು ಪುಟಿನ್‌ ಹಲವು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ, ಭದ್ರತೆ, ವ್ಯಾಪಾರ ಸೇರಿದಂತೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಔಷಧ, ಕೃಷಿ, ಆಹಾರ ಮತ್ತು ಗ್ರಾಹಕ ವಸ್ತುಗಳಿಗೆ ಸಂಬಂಧಿಸಿದ ಒಡಂಬಡಿಕೆಗಳೂ ಆಗಲಿವೆ.

ಒಂದೇ ಕಾರಲ್ಲಿ ಪ್ರಯಾಣ:

ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಮತ್ತು ಪುಟಿನ್‌ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ಇದು ಶಿಷ್ಟಾಚಾರದ ಉಲ್ಲಂಘನೆಯಾದರೂ, ತಮ್ಮ ಸ್ನೇಹಕ್ಕೆ ಅದು ಅಡ್ಡಿಯಾಗದು ಎಂಬುದನ್ನು ಉಭಯ ನಾಯಕರು ತೋರಿಸಿದ್ದಾರೆ. ಈ ಮೊದಲು, ಆಗಸ್ಟ್‌ನಲ್ಲಿ ಚೀನಾದಲ್ಲಿ ನಡೆದ ಶಾಂಘೈ ಶೃಂಗಸಭೆ ವೇಳೆಯೂ ಮೋದಿಯವರು ಪುಟಿನ್‌ರ ಔರಸ್ ಕಾರಿನಲ್ಲಿ ಪ್ರಯಾಣಿಸಿದ್ದಲ್ಲದೆ, 45 ನಿಮಿಷ ಅದರೊಳಗೇ ಕುಳಿತು ಮಾತುಕತೆ ನಡೆಸಿದ್ದರು.

ನಮ್ಮ ಸ್ನೇಹ ಕಾಲಾತೀತ

ನನ್ನ ಸ್ನೇಹಿತ, ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ಅವರೊಂದಿಗೆ ನಡೆಯಲಿರುವ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ ಮತ್ತು ರಷ್ಯಾದ ನಡುವಿನ ಸ್ನೇಹವು ಕಾಲಾತೀತವಾಗಿದ್ದು, ಇದು ಉಭಯ ದೇಶದ ಜನರಿಗೆ ಲಾಭದಾಯಕವಾಗಿದೆ.

ನರೇಂದ್ರ ಮೋದಿ, ಪ್ರಧಾನಿ

06 ಬಾರಿ: ಪ್ರಧಾನಿಯಾದ 11 ವರ್ಷಗಳಲ್ಲಿ ಮೋದಿ ಏರ್‌ಪೋರ್ಟ್‌ಗೆ ಹೋಗಿ ಬರಮಾಡಿಕೊಂಡ ನಾಯಕರ ಸಂಖ್ಯೆ

04 ವರ್ಷ: ರಷ್ಯಾ ಅಧ್ಯಕ್ಷ ಪುಟಿನ್‌ ಭಾರತಕ್ಕೆ ಭೇಟಿ ನೀಡುತ್ತಿರುವುದು 2021ರ ಬಳಿಕ ಇದೇ ಮೊದಲು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌