ಬಾಲ್ಯದಲ್ಲಿ ನಾನು ತಟ್ಟೆ, ಲೋಟ ತೊಳೆದು ಬೆಳೆದಿದ್ದೇನೆ: ಮೋದಿ

KannadaprabhaNewsNetwork |  
Published : May 27, 2024, 01:13 AM ISTUpdated : May 27, 2024, 04:37 AM IST
ಮೋದಿ | Kannada Prabha

ಸಾರಾಂಶ

ಬಾಲ್ಯದಲ್ಲಿ ತಟ್ಟೆ, ಲೋಟ ತೊಳೆದು, ಜನರಿಗೆ ಚಹಾ ನೀಡುತ್ತಾ ನಾನು ಬೆಳೆದು ಬಂದಿದ್ದೇನೆ. ಮೋದಿ ಹಾಗೂ ಚಹಾ ನಡುವಿನ ಬಾಂಧವ್ಯ ತುಂಬಾ ಆಳವಾದುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ತಮ್ಮ ಬಾಲ್ಯವನ್ನು ಸ್ಮರಿಸಿದ್ದಾರೆ.

 ಮಿರ್ಜಾಪುರ :  ಜೂ.1ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಯಲ್ಲಿ ಮತದಾನವಾಗಲಿರುವ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಚಹಾ ಮಾರುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.

‘ ಬಾಲ್ಯದಲ್ಲಿ ನಾನು ಕಪ್‌, ಪ್ಲೇಟ್‌ ತೊಳೆದು ತೊಳೆದು ದೊಡ್ಡವನಾಗಿದ್ದೇನೆ. ಟೀ ಕುಡಿಸಿ ಕುಡಿಸಿ ದೊಡ್ಡವನಾಗಿದ್ದೇನೆ. ವಿಜಯದ ಸೂರ್ಯ ಉದಯಿಸುತ್ತಲೇ ಕಮಲವೂ ಅರುಳುತ್ತೆ. ಅದೇ ಸಮಯದಲ್ಲಿ ಕಪ್ ಪ್ಲೇಟ್‌ನ ನೆನಪಾಗುತ್ತದೆ. ಒಂದು ಸಿಪ್‌ ಟೀ ಕುಡಿಯುವ ಮನಸ್ಸಾಗುತ್ತದೆ. ಮೋದಿ ಮತ್ತು ಚಹಾದ ಸಂಬಂಧ ಅಷ್ಟು ಗಾಢವಾದುದು. ಈ ಸಂಬಂಧದಲ್ಲಿ ಮೋದಿ, ಕಪ್‌. ಪ್ಲೇಟ್‌ ಇದೆ. ಕಮಲ ಅರಳುತ್ತಿದೆ ಎಂದು ಬಿಜೆಪಿ ಮತ್ತು ಅಪ್ನಾದಳ್‌ ಪಕ್ಷದ ನಡುವಿನ ಸಂಬಂಧವನ್ನು ಬಣ್ಣಿಸಿದರು. 

ಉತ್ತರಪ್ರದೇಶದಲ್ಲಿ ಬಿಜೆಪಿ ಅನುಪ್ರಿಯಾ ಪಟೇಲ್‌ ನೇತೃತ್ವದ ಅಪ್ನಾದಳ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಅಪ್ನಾದಳ್‌ ಪಕ್ಷದ ಚಿಹ್ನೆ ಕಪ್‌ ಮತ್ತು ಸಾಸರ್‌ ಆಗಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಬಿಜೆಪಿ ಮತ್ತು ಅಪ್ನಾದಳ್‌ ಹಾಗೂ ತಮ್ಮ ಮತ್ತು ಅಪ್ನಾದಳ್‌ ಚಿಹ್ನೆ ನಡುವಿನ ನಂಟಿನ ಕುರಿತು ಮಾತನಾಡಿದ್ದಾರೆ.ಇದೇ ವೇಳೆ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ವಿರುದ್ಧವೂ ಅವರು ಹರಿಹಾಯ್ದರು. 

ಸಮಾಜವಾದಿ ಪಕ್ಷಕ್ಕೆ ಹಕ್ಕು ಚಲಾವಣೆ ಮಾಡುವ ಮೂಲಕ ಯಾರೊಬ್ಬರೂ ತಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಮುಳುಗುತ್ತಿರುವವರಿಗೆ ಯಾರೂ ಮತ ಹಾಕುವುದಿಲ್ಲ. ನಿಶ್ಚಿತವಾಗಿ ಯಾವ ಪಕ್ಷದ ಸರ್ಕಾರ ರಚನೆಯಾಗುತ್ತದೋ ಆ ಪಕ್ಷಕ್ಕೆ ಮಾತ್ರ ಶ್ರೀಸಾಮಾನ್ಯ ಮತ ಹಾಕುತ್ತಾನೆ.

 ‘ಇಂಡಿ’ ಕೂಟದಲ್ಲಿರುವ ಜನರ ಬಗ್ಗೆ ದೇಶದ ಜನ ತಿಳಿದುಕೊಂಡಿದ್ದಾರೆ. ಅವರೆಲ್ಲಾ ತುಂಬಾ ಕೋಮುವಾದಿಗಳು. ಪಕ್ಕಾ ಜಾತಿವಾದಿಗಳು. ಕುಟುಂಬ ರಾಜಕಾರಣಿಗಳು. ಅವರ ಸರ್ಕಾರ ರಚನೆಯಾದಾಗಲೆಲ್ಲಾ ಇದರ ಆಧಾರದ ಮೇಲೆಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಛೇಡಿಸಿದರು.ಮಿರ್ಜಾಪುರ ಹೆಸರಿಗೆ ಸಮಾಜವಾದಿ ಪಕ್ಷ ಮಸಿ ಬಳಿದಿದೆ. ಇಡೀ ಉತ್ತರಪ್ರದೇಶ ಹಾಗೂ ಪೂರ್ವಾಂಚಲವನ್ನು ಮಾಫಿಯಾಗಳಿಗೆ ಸುರಕ್ಷಿತ ತಾಣವನ್ನಾಗಿ ಆ ಪಕ್ಷ ಮಾಡಿತ್ತು. ಎಸ್‌ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜನರು ಭಯದಿಂದ ನಡುಗುತ್ತಿದ್ದರು. ಈಗ ಬಿಜೆಪಿ ಸರ್ಕಾರ ಮಾಫಿಯಾವನ್ನೇ ನಡುಗಿಸುತ್ತಿದೆ ಎಂದು ಹೇಳಿದರು.

ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಸ್ಸಿ/ಎಸ್ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಕದಿಯಲು ನಿರ್ಧರಿಸಿದೆ. ಅದನ್ನು ಮುಸ್ಲಿಮರಿಗೆ ನೀಡುತ್ತದೆ. ಅದಕ್ಕಾಗಿಯೇ ಅವರು ಸಂವಿಧಾನ ಬದಲಿಸಲು ಬಯಸಿದ್ದಾರೆ ಎಂದು ದೂರಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!