012ರಲ್ಲಿ ಪುಣೆಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್‌ದಾರ್ ಅಲಿಯಾಸ್ ಅಸ್ಲಾಂ ಶಬ್ಬೀರ್ ಶೇಖ್‌ನನ್ನು ಅನಾಮಿಕ ವ್ಯಕ್ತಿಗಳು ಗುರುವಾರ ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್‌ದಾರ್ ಅಲಿಯಾಸ್ ಅಸ್ಲಾಂ ಶಬ್ಬೀರ್ ಶೇಖ್‌ನನ್ನು ಅನಾಮಿಕ ವ್ಯಕ್ತಿಗಳು ಗುರುವಾರ ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರಾಜಕೀಯ ದ್ವೇಷ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ.
ಕೊಲೆ, ಕ್ರಿಮಿನಲ್ ಸಂಚು, ಭಯೋತ್ಪಾದನೆ ಸೇರಿ ಹಲವು ಆರೋಪಗಳನ್ನು ಹೊತ್ತಿದ್ದ ಶಬ್ಬೀರ್, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಏನಾಯ್ತು?:
ವಿವಿಧ ಗಂಭೀರ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೂ ಗುರಿಯಾಗಿದ್ದ ಶಬ್ಬೀರ್, ಪುಣೆ ಸ್ಫೋಟ ಪ್ರಕರಣದಲ್ಲೂ 2023ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ.
ಡಿ.31ರ ಬುಧವಾರ ಪುಣೆಯ ಅಹಿಲ್ಯಾನಗರದದ ಬಳಿ ಸ್ಮಶಾನದಿಂದ ಬೈಕ್‌ನಲ್ಲಿ ಆಗಮಿಸುತ್ತಿದ್ದ ವೇಳೆ, ಮತ್ತೊಂದು ಬೈಕ್‌ನಲ್ಲಿ ಬಂದು ಇಬ್ಬರು ಅನಾಮಿಕರು ಶಬ್ಬೀರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ಬಂಟಿ ದೇಹಕ್ಕೆ 2 ಗುಂಡುಗಳು ಹೊಕ್ಕಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
ದಾಳಿಕೋರರು ವಶಕ್ಕೆ:
ಘಟನೆ ಸಂಬಂಧ ಮಹಾರಾಷ್ಟ್ರ ಪೊಲೀಸರು ರವೀಂದ್ರ ನಿಕಾಲ್ಜೆ ಮತ್ತು ಕೃಷ್ಣ ಶಿಂಗಾರೆ ಎಂಬಿಬ್ಬರು ದಾಳಿಕೋರರನ್ನು ವಶಕ್ಕೆ ಪಡೆದಿದ್ದಾರೆ.
ಪುಣೆ ಸರಣಿ ಸ್ಫೋಟ:
ಇಂಡಿಯನ್ ಮುಜಾಹಿದ್ದೀನ್ ಉಗ್ರ ಕಾತೀಲ್ ಸಿದ್ದಿಕಿ ಎಂಬಾತ ಪುಣೆಯ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಶರದ್ ಮೊಹಾಲ್ ಗ್ಯಾಂಗಿನ ದಾಳಿಗೆ ಬಲಿಯಾಗಿದ್ದ. ಇದಕ್ಕೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದಿನ್ ಉಗ್ರರಾದ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಲ್ ಸೂಚನೆ ಅನ್ವಯ ಪುಣೆಯ 4 ಕಡೆ ಸ್ಫೋಟ ನಡೆಸಲಾಗಿತ್ತು. ಘಟನೆಯಿಂದ ಓರ್ವ ಗಾಯಗೊಂಡಿದ್ದ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿರಲಿಲ್ಲ. ಈ ಪ್ರಕರಣದಲ್ಲಿ ಬಂಟಿ, ದಾಳಿಕೋರರಿಗೆ ಸ್ಫೋಟಕಗಳನ್ನು ಸರಬುರಾಜು ಮಾಡಿದ್ದ ಎಂದು ಎಸ್‌ಐಟಿ ಆರೋಪಿಸಿತ್ತು.
