ಶ್ರೀರಂಗಂ, ರಾಮೇಶ್ವರಕ್ಕೆ ಮೋದಿ ರಾಮಯಾತ್ರೆ

KannadaprabhaNewsNetwork |  
Published : Jan 21, 2024, 01:33 AM ISTUpdated : Jan 21, 2024, 12:58 PM IST
pm modi tamilnadu

ಸಾರಾಂಶ

ನಿತ್ಯ ದೇಗುಲ ದರ್ಶನ ವ್ರತದ ಅಂಗವಾಗಿ ನರೇಂದ್ರ ಮೋದಿ ವಿವಿಧ ದೇಗುಲಗಳಲ್ಲಿ ಪೂಜೆ ಮಾಡುತ್ತಿದ್ದು, ಶ್ರೀರಂಗಂನಲ್ಲಿ ಕಂಬರಾಮಾಯಣ ಆಲಿಸಿದ ಮೋದಿ, ಭರ್ಜರಿ ರೋಡ್‌ ಶೋ ನಡೆಸಿದರು. ಬಳಿಕ ರುದ್ರಾಕ್ಷಿ ಮಾಲೆ ಧರಿಸಿ ರಾಮೇಶ್ವರದ ರಾಮನಾಥನ ದರ್ಶನ ಕೂಡ ಪಡೆದರು.

ಪಿಟಿಐ ತಿರುಚಿರಾಪಳ್ಳಿ

ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಗಾಗಿ ‘ಯಮ ನಿಯಮ’ ವ್ರತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ನಿತ್ಯ ದೇಗುಲ ದರ್ಶನ ಕೈಂಕರ್ಯದ ಭಾಗವಾಗಿ ಶನಿವಾರ ತಮಿಳುನಾಡಿನ ಪ್ರಸಿದ್ಧ ಶ್ರೀರಂಗಂ ಹಾಗೂ ರಾಮೇಶ್ವರಂ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶ್ರೀರಂಗಂನ ರಂಗನಾಥರ್‌ ದೇಗುಲ ಹಾಗೂ ರಾಮೇಶ್ವರದ ರಾಮನಾಥಸ್ವಾಮಿ ದೇಗುಲಗಳೆರಡೂ ಶ್ರೀರಾಮ ಮತ್ತು ರಾಮಾಯಣದ ಜೊತೆಗೆ ನಂಟು ಹೊಂದಿವೆ. 11 ದಿನಗಳ ವ್ರತದ ಅಂಗವಾಗಿ ರಾಮನ ನಂಟು ಹೊಂದಿರುವ ದೇಗುಲಗಳಿಗೆ ಮೋದಿ ಭೇಟಿ ನೀಡುತ್ತಿದ್ದಾರೆ. 

ಅದರಂತೆ ಶ್ರೀರಂಗಂ ಮತ್ತು ರಾಮೇಶ್ವರ ದೇಗುಲದ ಬಳಿಕ ಅವರು ಧನುಷ್ಕೋಡಿಗೂ ಭೇಟಿ ನೀಡಿದರು. ಧನುಷ್ಕೋಡಿಯಿಂದ ಲಂಕೆಗೆ ರಾಮನ ಸೇನೆಯು ಸೇತುವೆ ನಿರ್ಮಿಸಿದ ಐತಿಹ್ಯ ರಾಮಾಯಣದಲ್ಲಿದೆ.

ಕಂಬ ರಾಮಾಯಣ ಆಲಿಸಿದ ಪ್ರಧಾನಿ: ಶನಿವಾರ ಚೆನ್ನೈನಿಂದ ತಿರುಚಿರಾಪಳ್ಳಿಗೆ ತೆರಳುವ ಮಾರ್ಗ ಮಧ್ಯೆ ಮೋದಿ ಶ್ರೀರಂಗಂ ದೇಗುಲಕ್ಕೆ ಭೇಟಿ ನೀಡಿ, ಅಲ್ಲಿ ತಮಿಳಿನ ಕಂಬ ರಾಮಾಯಣವನ್ನು ಆಲಿಸಿದರು. 

ಕವಿ ಚಕ್ರವರ್ತಿ ಕಂಬರ್‌ ಅವರು ಮೊದಲ ಬಾರಿ ಕಂಬ ರಾಮಾಯಣವನ್ನು ಓದಿದ ಜಾಗದಲ್ಲಿ ಕುಳಿತು ಧ್ಯಾನ ಮಾಡಿದರು. ಪುರಾಣದ ಕತೆಗಳ ಪ್ರಕಾರ ಶ್ರೀರಂಗಂ ದೇಗುಲದಲ್ಲಿರುವ ಶ್ರೀ ರಂಗನಾಥಸ್ವಾಮಿ ಮೂರ್ತಿಯನ್ನು ಸ್ವತಃ ಶ್ರೀರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು. 

ವಿಭೀಷಣನು ರಾಮನಿಂದ ಅಮೂಲ್ಯ ಉಡುಗೊರೆ ಕೇಳಿದಾಗ ರಾಮನು ಈ ಮೂರ್ತಿಯನ್ನು ಕೊಟ್ಟು ಪೂಜಿಸಲು ಹೇಳಿದ್ದ. ನಂತರ ವಿಭೀಷಣನೇ ಶ್ರೀರಂಗಂನಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಎನ್ನಲಾಗುತ್ತದೆ.

ರಂಗನಾಥಸ್ವಾಮಿ ದೇಗುಲಕ್ಕೆ ತಮಿಳುನಾಡಿನ ಶೈಲಿಯಲ್ಲಿ ಬಿಳಿ ಪಂಚೆ (ವೇಷ್ಠಿ) ಧರಿಸಿ, ಶಾಲು (ಅಂಗವಸ್ತ್ರ) ಹೊದ್ದು ಮೋದಿ ಆಗಮಿಸಿದ್ದರು. ಬಳಿಕ ಶ್ರೀರಂಗಂನಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ರಾಮೇಶ್ವರದ 22 ಬಾವಿ, ‘ಅಗ್ನಿತೀರ್ಥ’ದಲ್ಲಿ ಮೋದಿ ಪವಿತ್ರ ಸ್ನಾನ
ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವ ಸಲುವಾಗಿ ವಿಶೇಷ ಅನುಷ್ಠಾನದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಸಂಜೆ, 22 ಬಾವಿಗಳು ಹಾಗೂ ಅಗ್ನಿತೀರ್ಥ ಸಮುದ್ರ ತೀರದಲ್ಲಿ ಸ್ನಾನ ಮಾಡಿ ರಾಮನಾಥಸ್ವಾಮಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಶ್ರೀರಂಗಂನಿಂದ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ಮೋದಿ, ನೇರವಾಗಿ ಅಗ್ನಿತೀರ್ಥ(ರಾಮೇಶ್ವರದ ಸಮುದ್ರತೀರ)ಕ್ಕೆ ತೆರಳಿ ಹಲವು ಬಾರಿ ಮುಳುಗುವ ಮೂಲಕ ಪವಿತ್ರ ಸ್ನಾನ ಮಾಡಿದರು. ರಾಮೇಶ್ವರ ದೇಗುಲದ ಸುತ್ತಲಿನ 22 ಬಾವಿಗಳಲ್ಲಿ ಕೂಡ ಸ್ನಾನ ಮಾಡಿದರು.

ಬಳಿಕ ರುದ್ರಾಕ್ಷಿ ಮಾಲೆ ಧರಿಸಿ ರಾಮಾಯಣದ ಐತಿಹ್ಯವಿರುವ ಶಿವ ದೇಗುಲಕ್ಕೆ ತೆರಳಿ ರಾಮನಾಥಸ್ವಾಮಿಯ ದರ್ಶನ ಪಡೆದು ಭಜನೆಯಲ್ಲಿ ಪಾಲ್ಗೊಂಡರು. ನಂತರ ದೇಗುಲದ ವತಿಯಿಂದ ಪ್ರಧಾನಿ ಮೋದಿಗೆ ಸಾಂಪ್ರದಾಯಿಕವಾಗಿ ಸತ್ಕರಿಸಿ ಬೀಳ್ಕೊಡಲಾಯಿತು.

ರಾಮಾಯಣದ ನಂಟು: ರಾಮೇಶ್ವರದಲ್ಲಿರುವ ಶಿವ ದೇಗುಲಕ್ಕೆ ರಾಮಾಯಣದ ನಂಟಿದ್ದು, ವಾಲ್ಮೀಕಿ ರಾಮಾಯಣದ ಪ್ರಕಾರ ರಾಮಸೇತು ಕಟ್ಟುವ ಮೊದಲು ಸಾಕ್ಷಾತ್‌ ಶ್ರೀರಾಮನೇ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿರುವ ನಂಬಿಕೆಯಿದೆ.

ಇನ್ನು ಕಂಬ ರಾಮಾಯಾಣ ಹೇಳುವಂತೆ ಇಲ್ಲಿ ಶ್ರೀರಾಮ ಶಿವಲಿಂಗವನ್ನು ಸ್ಥಾಪಿಸಲು ಸ್ವತಃ ರಾವಣನೇ ಪೌರೋಹಿತ್ಯ ವಹಿಸಿದ್ದಾಗಿ ಉಲ್ಲೇಖಿಸುತ್ತದೆ.

ರಾಮಚರಿತಮಾನಸ ಉಲ್ಲೇಖಿಸುವಂತೆ ಬ್ರಾಹ್ಮಣನಾಗಿದ್ದ ರಾವಣನನ್ನು ಸಂಹರಿಸಿದ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಇಲ್ಲಿ ಶ್ರೀರಾಮ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾನೆ ಎನ್ನಲಾಗಿದೆ.

ಮೋದಿ ಮೂಲಕ ಅಯೋಧ್ಯೆಗೆ ಶ್ರೀರಂಗಂನಿಂದ ಸೀರೆ ಕಾಣಿಕೆ
ತಮಿಳುನಾಡಿನ ರಾಮಾಯಣ ಐತಿಹ್ಯದ ಶ್ರೀರಂಗಂ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಗುಲದ ಪರವಾಗಿ ತರಹೇವಾರಿ ಸೀರೆಗಳು ಹಾಗೂ ಕುಪ್ಪುಸಗಳನ್ನು ಕಾಣಿಕೆಯಾಗಿ ನೀಡಿ, ಈ ಕಾಣಿಕೆಗಳನ್ನು ಅಯೋಧ್ಯೆಯ ರಾಮಮಂದಿರಕ್ಕೆ ತಲುಪಿಸುವಂತೆ ಕೋರಲಾಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗೊಗೋಯ್‌ ಪಾಕ್‌ ನಂಟಿನ ಬಗ್ಗೆ ಕೇಂದ್ರೀಯ ತನಿಖೆಗೆ ಶಿಫಾರಸು
ಅಮೆರಿಕ ಡೀಲ್‌ ವಿರುದ್ಧ ಫೆ.12ಕ್ಕೆ ದೇಶವ್ಯಾಪಿ ರೈತ ಪ್ರತಿಭಟನೆ