;Resize=(412,232))
ನವದೆಹಲಿ : ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲ್ಕತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಕೂಡಲೇ ತಮ್ಮ ನಿವಾಸಕ್ಕೆ ಹೋಗದೇ 45 ನಿಮಿಷ ಏರ್‌ಪೋರ್ಟಲ್ಲೇ ಕಾದ ಪ್ರಸಂಗ ನಡೆದಿದೆ. ಇದಕ್ಕೆ ಕಾರಣ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ನೀಟ್ ಪರೀಕ್ಷೆ.
ಕೋಲ್ಕತಾದಿಂದ ಮಧ್ಯಾಹ್ನ 1.15ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ಮೋದಿ ತಕ್ಷಣ ಅಲ್ಲಿಂದ ತಮ್ಮ ನಿವಾಸದತ್ತ ಹೊರಡಲಿಲ್ಲ. ಏಕೆಂದರೆ ನೀಟ್ ಪರೀಕ್ಷೆ 2 ಗಂಟೆಗೆ ಆರಂಭವಾಗಬೇಕಿತ್ತು. ನೀಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಅಷ್ಟರೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪುವ ಧಾವಂತದಲ್ಲಿದ್ದರು.
‘ಹೀಗಿರುವಾಗ ತಾವು ಬೆಂಗಾವಲು ವಾಹನಗಳೊಂದಿಗೆ ಝೀರೋ ಟ್ರಾಫಿಕ್‌ನಲ್ಲಿ ರಸ್ತೆಗಿಳಿದರೆ ಟ್ರಾಫಿಕ್ ಸಮಸ್ಯೆಯಾಗಿ, ವಿದ್ಯಾರ್ಥಿಗಳಿಗೆ ತಡವಾಗುವ ಸಂಭವವಿರುತ್ತದೆ ಎಂದು ಮೋದಿ ಮನಗಂಡರು ಹಾಗೂ ಕಾಯುವ ನಿರ್ಧಾರ ಮಾಡಿದರು. ಪರೀಕ್ಷೆ ಶುರುವಾದ ಬಳಿಕ ವಿಮಾನ ನಿಲ್ದಾಣದಿಂದ ಹೊರಟರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.