ಗೊಂದಲಗಳ ನಡುವೆ ನೀಟ್‌ ಮರುಪರೀಕ್ಷೆ

KannadaprabhaNewsNetwork |  
Published : Jun 22, 2026, 02:00 AM IST
ನೀಟ್ | Kannada Prabha

ಸಾರಾಂಶ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ ಮರುಪರೀಕ್ಷೆ ಕೆಲವೆಡೆ ಗೊಂದಲದ ಹೊರತಾಗಿಯೂ ಭಾನುವಾರ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಯಶಸ್ವಿಯಾಗಿ ನಡೆಯಿತು. ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾರತದ 551 ನಗರಗಳ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

-ಭಾರತದ 5440 ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿ ಪರೀಕ್ಷೆ

-95,000ಕ್ಕೂ ಹೆಚ್ಚು ಕೊಠಡಿಗಳಿಗೆ 1,38,560 ಸಿಸಿಟೀವಿ ಕಣ್ಗಾವಲು

-ಎಲೆಕ್ಟ್ರಾನಿಕ್ ವಂಚನೆ ತಡೆಗಟ್ಟಲು 51,311 ಜಾಮರ್‌ ಅಳವಡಿಕೆ

-ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರಿಂದ ವ್ಯವಸ್ಥೆ ಪರಿಶೀಲನೆಪಿಟಿಐ ನವದೆಹಲಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ ಮರುಪರೀಕ್ಷೆ ಕೆಲವೆಡೆ ಗೊಂದಲದ ಹೊರತಾಗಿಯೂ ಭಾನುವಾರ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಯಶಸ್ವಿಯಾಗಿ ನಡೆಯಿತು. ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾರತದ 551 ನಗರಗಳ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.ಮೇ 3ರಂದು ನಡೆದಿದ್ದ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರದ್ದಾಗಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಕೇಂದ್ರ ಸರ್ಕಾರಕ್ಕೆ ಭಾರಿ ತಲೆನೋವು ಸೃಷ್ಟಿಸಿತ್ತು. ಇದು ರಾಜಕೀಯ ಹಾಗೂ ಕಾನೂನು ಸಮರಕ್ಕೂ ಕಾರಣವಾಗಿತ್ತು. ಇದಾಗಿ ಸುಮಾರು 7 ವಾರಗಳ ಬಳಿಕ ಭಾನುವಾರ ಮರುಪರೀಕ್ಷೆ ನಡೆಸಲಾಯಿತು. 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.ಪರೀಕ್ಷೆಯು ನಿಗದಿತ ಸಮಯದಂತೆ ಮಧ್ಯಾಹ್ನ 2.00ರಿಂದ ಸಂಜೆ 5.15ರ ವರೆಗೆ ನಡೆಯಿತು. ಅಂಗವಿಕಲ ಅಭ್ಯರ್ಥಿಗಳಿಗೆ (ಪಿಡಬ್ಲ್ಯೂಡಿ/ಪಿಡಬ್ಲ್ಯೂಬಿಡಿ) ಸಂಜೆ 6.20ರವರೆಗೆ ಪರೀಕ್ಷೆ ಬರೆಯಲು ಅವಕಾಶವಿತ್ತು. ಇಂಗ್ಲಿಷ್ ಮತ್ತು 12 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಭದ್ರತಾ ದೃಷ್ಟಿಯಿಂದ 95,000ಕ್ಕೂ ಹೆಚ್ಚು ಪರೀಕ್ಷಾ ಕೊಠಡಿಗಳಲ್ಲಿ, 1,38,560 ಸಿಸಿಟೀವಿ ಕಣ್ಗಾವಲು ಅಳವಡಿಸಲಾಗಿತ್ತು. ಎಲೆಕ್ಟ್ರಾನಿಕ್ ವಂಚನೆ ತಡೆಗಟ್ಟಲು 51,311 ಜಾಮರ್‌ಗಳನ್ನು ಸಹ ಅಳವಡಿಸಲಾಗಿತ್ತು.

ಸಚಿವ ಪ್ರಧಾನ್ ಮುತುವರ್ಜಿ:ಮರುಪರೀಕ್ಷೆಗೂ ಮುನ್ನ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ದೆಹಲಿಯ ಓಖ್ಲಾದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಧಾನ ಕಛೇರಿಯಲ್ಲಿ ಮರುಪರೀಕ್ಷೆಯನ್ನು ಸುಗಮವಾಗಿ ನಡೆಸುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ದೆಹಲಿ ವಿವಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ನಿರ್ಭಯವಾಗಿ ಮತ್ತು ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಧೈರ್ಯ ತುಂಬಿದರು. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು. ಇದೇ ವೇಳೆ, ತಮಗೆ ಎನ್‌ಟಿಎ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಶಿಕ್ಷಣ ಸಮುದಾಯ ಮತ್ತು ವಿದ್ಯಾರ್ಥಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

==

ಹಿಜಾಬ್‌ಗೆ ಅನುಮತಿಸಿದ್ರೂ ಪವಿತ್ರ ದಾರಕ್ಕೆ ನೋ ಎಂಟ್ರಿ: ವಿವಾದ

ಅಹಮದಾಬಾದ್‌: ಇಲ್ಲಿನ ಪರೀಕ್ಷಾ ಕೇಂದ್ರವೊಂದರಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ನೀಟ್‌ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿಸಿದರೂ, ಕಂಠಿ (ಪವಿತ್ರ ದಾರ) ಧರಿಸಿ ಬಂದಿದ್ದ ಹಿಂದೂಗಳಿಗೆ ಒಳಹೋಗಲು ಬಿಡದೆ ತಡೆದದ್ದು ಜಟಾಪಟಿಗೆ ಕಾರಣವಾಗಿದೆ.ಹಿಂದೂ ಸಂಘಟನೆಗಳು ಮತ್ತು ಎಐಎಂಐಎಂ ಕಾರ್ಯಕರ್ತರೂ ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯನ್ನು ಸಂಭಾಳಿಸುವ ಉದ್ದೇಶದಿಂದ, ಗಲಾಟೆಯೆಬ್ಬಿಸಿದ ಹಿಂದೂ ಸಂಘಟನೆಯ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು. ‘ವಸ್ತ್ರನೀತಿಗೆ ಸಂಬಂಧಿಸಿದ ಗೊಂದಲದಿಂದ ಹೀಗಾಗಿದೆ’ ಎಂದು ಪೊಲೀಸರು ಹೇಳಿದರು.

==

ಪರೀಕ್ಷೆ ಮುನ್ನಾದಿನ ನೀಟ್‌ ವಿದ್ಯಾರ್ಥಿನಿ ನೇಣಿಗೆ ಶರಣು

ಹೈದರಾಬಾದ್‌: ಭಾನುವಾರ ನಡೆದ ನೀಟ್‌ ಮರುಪರೀಕ್ಷೆಗೆ ಹಾಜರಾಗಬೇಕಿದ್ದ ಹೈದರಾಬಾದ್‌ನ ವಿದ್ಯಾರ್ಥಿನಿಯೊಬ್ಬರು ಅದರ ಹಿಂದಿನ ದಿನ(ಶನಿವಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಬ್ಬರು ಕಿರಿಯ ಸಹೋದರಿಯರೊಂದಿಗೆ ಮಿಯಾಪುರದಲ್ಲಿ ವಾಸವಾಗಿದ್ದ ಸನಾ ಶೇಖ್‌(19), ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಮರಣಪತ್ರವನ್ನೂ ಬರೆದಿಟ್ಟಿದ್ದರು ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಕೋಣೆ ಸೇರಿಕೊಂಡಾಕೆ ಸಂಜೆಯಾದರೂ ಹೊರಬಾರದಿದ್ದುದನ್ನು ನೋಡಿ ಬಾಗಿಲು ತೆರೆದಾಗ ಸನಾಳ ಮೃತದೇಹ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಪರೀಕ್ಷೆ ಹಾಗೂ ಪರಿವಾರದವರ ನಿರೀಕ್ಷೆಗಳ ತಾಳಲಾರದೆ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ.

==

ನೀಟ್‌: ಸುಳ್ಳು ಪ್ರಶ್ನೆಪತ್ರಿಕೆ ನೀಡಿ ।₹30 ಸಾವಿರ ಪಡೆದು ವಂಚಿಸಲು ಯತ್ನ

ಅಜ್ಮೇರ್‌: ಭಾನುವಾರ ನಡೆದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂಬ ಸುದ್ದಿ ಹಬ್ಬಿಸಿ, ಅದನ್ನು 30 ಸಾವಿರ ರು.ಗೆ ವಿದ್ಯಾರ್ಥಿಗಳಿಗೆ ಮಾರಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ.‘ಪ್ರಶ್ನೆಪತ್ರಿಕೆಯೆಂದು ಹೇಳಿ ವಿಡಿಯೋ ಕಾಲ್‌ನಲ್ಲಿ ಒಂದು ಕಾಗದವನ್ನು ತೋರಿಸಿ, 30 ಸಾವಿರ ರು. ಪಾವತಿಸಲು ಕ್ಯುಆರ್‌ ಕೋಡ್‌ ಕಳಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರು ನನಗೆ ಮಾಹಿತಿ ನೀಡಿದರು. ಅದನ್ನು ಪರಿಶೀಲಿಸಲು ನಾನು ಕೂಡ ಆ ಸಂಖ್ಯೆಗೆ ಕರೆ ಮಾಡಿದೆ. ಅದರ ರೆಕಾರ್ಡಿಂಗ್‌ ಸಲ್ಲಿದಿದ್ದೇನೆ’ ಎಂದು ಡಿಎವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಸಿಂಗ್‌ ಠಾಕೂರ್‌ ಹೇಳಿದ್ದಾರೆ. ಜತೆಗೆ, ಹಲವು ವಿದ್ಯಾರ್ಥಿಗಳು ಈ ವಂಚನೆಗೆ ಬಲಿ ಆಗಿದ್ದಾರೆ ಎಂದಿರುವ ಅವರು, ಇಂಥದ್ದಕ್ಕೆಲ್ಲಾ ಬಲಿಯಾಗದೆ ಪರೀಕ್ಷಾ ತಯಾರಿಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶ-ವಿದೇಶಗಳಲ್ಲಿ 12ನೇ ಯೋಗ ದಿನ ಯಶಸ್ವಿ
ಗೊಂದಲಗಳ ನಡುವೆ ನೀಟ್‌ ಮರುಪರೀಕ್ಷೆ