ಗೊಂದಲಗಳ ನಡುವೆ ನೀಟ್‌ ಮರುಪರೀಕ್ಷೆ

KannadaprabhaNewsNetwork |  
Published : Jun 22, 2026, 02:00 AM IST
ನೀಟ್‌ | Kannada Prabha

ಸಾರಾಂಶ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್-ಯುಜಿ ಮರುಪರೀಕ್ಷೆ ಕೆಲವೆಡೆ ಗೊಂದಲದ ಹೊರತಾಗಿಯೂ ಭಾನುವಾರ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಯಶಸ್ವಿಯಾಗಿ ನಡೆಯಿತು. ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾರತದ 551 ನಗರಗಳ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳ 14 ಕೇಂದ್ರಗಳಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ದೇಶದ 5440, ವಿದೇಶಗಳ 14 ಕೇಂದ್ರದಲ್ಲಿ 22 ಲಕ್ಷ ವಿದ್ಯಾರ್ಥಿಗಳು ಹಾಜರು

95,000ಕ್ಕೂ ಹೆಚ್ಚು ಪರೀಕ್ಷಾ ಕೊಠಡಿಗಳಿಗೆ 1,38,560 ಸಿಸಿಟೀವಿ ಕಣ್ಗಾವಲು

ಎಲೆಕ್ಟ್ರಾನಿಕ್ ವಂಚನೆ ತಡೆಗಟ್ಟಲು 51,311 ಜಾಮರ್‌ ಅಳವಡಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರಿಂದ ವ್ಯವಸ್ಥೆ ಪರಿಶೀಲನೆ

ಪಿಟಿಐ ನವದೆಹಲಿದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್-ಯುಜಿ ಮರುಪರೀಕ್ಷೆ ಕೆಲವೆಡೆ ಗೊಂದಲದ ಹೊರತಾಗಿಯೂ ಭಾನುವಾರ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಯಶಸ್ವಿಯಾಗಿ ನಡೆಯಿತು. ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾರತದ 551 ನಗರಗಳ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳ 14 ಕೇಂದ್ರಗಳಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.ಮೇ 3ರಂದು ನಡೆದಿದ್ದ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರದ್ದಾಗಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಕೇಂದ್ರ ಸರ್ಕಾರಕ್ಕೆ ಭಾರಿ ತಲೆನೋವು ಸೃಷ್ಟಿಸಿತ್ತು. ಇದು ರಾಜಕೀಯ ಹಾಗೂ ಕಾನೂನು ಸಮರಕ್ಕೂ ಕಾರಣವಾಗಿತ್ತು. ಇದಾಗಿ ಸುಮಾರು 7 ವಾರಗಳ ಬಳಿಕ ಭಾನುವಾರ ಮರುಪರೀಕ್ಷೆ ನಡೆಸಲಾಯಿತು.ಪರೀಕ್ಷೆಯು ನಿಗದಿತ ಸಮಯದಂತೆ ಮಧ್ಯಾಹ್ನ 2.00ರಿಂದ ಸಂಜೆ 5.15ರ ವರೆಗೆ ನಡೆಯಿತು. ಅಂಗವಿಕಲ ಅಭ್ಯರ್ಥಿಗಳಿಗೆ (ಪಿಡಬ್ಲ್ಯೂಡಿ/ಪಿಡಬ್ಲ್ಯೂಬಿಡಿ) ಸಂಜೆ 6.20ರವರೆಗೆ ಪರೀಕ್ಷೆ ಬರೆಯಲು ಅವಕಾಶವಿತ್ತು. ಇಂಗ್ಲಿಷ್ ಮತ್ತು 12 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಭದ್ರತಾ ದೃಷ್ಟಿಯಿಂದ 95,000ಕ್ಕೂ ಹೆಚ್ಚು ಪರೀಕ್ಷಾ ಕೊಠಡಿಗಳಲ್ಲಿ, 1,38,560 ಸಿಸಿಟೀವಿ ಕಣ್ಗಾವಲು ಅಳವಡಿಸಲಾಗಿತ್ತು. ಎಲೆಕ್ಟ್ರಾನಿಕ್ ವಂಚನೆ ತಡೆಗಟ್ಟಲು 51,311 ಜಾಮರ್‌ಗಳನ್ನು ಸಹ ಅಳವಡಿಸಲಾಗಿತ್ತು.ಸಚಿವ ಪ್ರಧಾನ್ ಮುತುವರ್ಜಿ:

ಮರುಪರೀಕ್ಷೆಗೂ ಮುನ್ನ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ದೆಹಲಿಯ ಓಖ್ಲಾದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಧಾನ ಕಛೇರಿಯಲ್ಲಿ ಮರುಪರೀಕ್ಷೆಯನ್ನು ಸುಗಮವಾಗಿ ನಡೆಸುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ದೆಹಲಿ ವಿವಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ನಿರ್ಭಯವಾಗಿ ಮತ್ತು ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಧೈರ್ಯ ತುಂಬಿದರು. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು. ಇದೇ ವೇಳೆ, ತಮಗೆ ಎನ್‌ಟಿಎ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಶಿಕ್ಷಣ ಸಮುದಾಯ ಮತ್ತು ವಿದ್ಯಾರ್ಥಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

==

ಭೀಕರ ಅಪಘಾತ ಆಗಿದ್ರೂ ನೀಟ್‌ ಎಕ್ಸಾಂ ಬರೆದ ಗಟ್ಟಿಗಿತ್ತಿ

- ವೈದ್ಯರ ಮೇಲ್ವಿಚಾರಣೆಯಲ್ಲಿ ಪರೀಕ್ಷೆ

ಕೋಲ್ಕತಾ: ವಾರದ ಹಿಂದೆ ಭೀಕರ ಅಪಘಾತಕ್ಕೆ ತುತ್ತಾಗಿ, 9 ಪಕ್ಕೆಲುಬುಗಳನ್ನು ಮುರಿದುಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ಹೊರತಾಗಿಯೂ ಪ. ಬಂಗಾಳದ ವಿದ್ಯಾರ್ಥಿನಿಯೊಬ್ಬರು ಭಾನುವಾರ ನೀಟ್‌ ಪರೀಕ್ಷೆ ಬರೆದಿದ್ದಾರೆ.

ಶಾಸಕೋಶಕ್ಕೆ ಗಂಭೀರ ಪೆಟ್ಟುಗಳಾಗಿ ಸರ್ಜರಿಗೆ ಒಳಪಟ್ಟಿರುವ ಮಗಳು ಪರೀಕ್ಷೆ ಬರೆಯಲು ಬಯಸಿದ್ದು, ಅದಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂದು ಸೃಷ್ಟಿ ದುಬೆ ಅವರ ಪೋಷಕರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸಚಿವಾಲಯ ಸ್ಪಂದಿಸಿದ್ದು, ನೆಲಮಹಡಿಯಲ್ಲಿ ಆಕೆಗೆಂದೇ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿತು ಹಾಗೂ ಆಸ್ಪತ್ರೆಯಲ್ಲಿ ಧರಿಸುವ ಬಟ್ಟೆಯಲ್ಲೇ ಪರೀಕ್ಷೆ ಬರೆಯಲು ಅನುಮತಿಸಿತು. ಜತೆಗೆ, ಅಗತ್ಯ ಬಿದ್ದರೆ ನೆರವಿಗೆ ಧಾವಿಸಲು ಆಂಬುಲೆನ್ಸ್‌ ಮತ್ತು ವೈದ್ಯರ ತಂಡವನ್ನು ಸಿದ್ಧಸ್ಥಿತಿಯಲ್ಲಿಡಲಾಗಿತ್ತು.

ಮಗಳಿಗೆ ನೆರವಾದ ಪ್ರಧಾನ್‌ ಅವರಿಗೆ ಕರೆ ಮಾಡಿ ಸೃಷ್ಟಿಯ ಪೋಷಕರು ಧನ್ಯವಾದ ಅರ್ಪಿಸಿದ ಭಾವುಕ ಕ್ಷಣದ ವಿಡಿಯೋ ವೈರಲ್‌ ಆಗುತ್ತಿದೆ.

==

ನೀಟ್‌: ಸುಳ್ಳು ಪ್ರಶ್ನೆಪತ್ರಿಕೆ ನೀಡಿ ।₹30 ಸಾವಿರ ಪಡೆದು ವಂಚಿಸಲು ಯತ್ನ

ಅಜ್ಮೇರ್‌: ಭಾನುವಾರ ನಡೆದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂಬ ಸುದ್ದಿ ಹಬ್ಬಿಸಿ, ಅದನ್ನು 30 ಸಾವಿರ ರು.ಗೆ ವಿದ್ಯಾರ್ಥಿಗಳಿಗೆ ಮಾರಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ.‘ಪ್ರಶ್ನೆಪತ್ರಿಕೆಯೆಂದು ಹೇಳಿ ವಿಡಿಯೋ ಕಾಲ್‌ನಲ್ಲಿ ಒಂದು ಕಾಗದವನ್ನು ತೋರಿಸಿ, 30 ಸಾವಿರ ರು. ಪಾವತಿಸಲು ಕ್ಯುಆರ್‌ ಕೋಡ್‌ ಕಳಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರು ನನಗೆ ಮಾಹಿತಿ ನೀಡಿದರು. ಅದನ್ನು ಪರಿಶೀಲಿಸಲು ನಾನು ಕೂಡ ಆ ಸಂಖ್ಯೆಗೆ ಕರೆ ಮಾಡಿದೆ. ಅದರ ರೆಕಾರ್ಡಿಂಗ್‌ ಸಲ್ಲಿದಿದ್ದೇನೆ’ ಎಂದು ಡಿಎವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಸಿಂಗ್‌ ಠಾಕೂರ್‌ ಹೇಳಿದ್ದಾರೆ. ಜತೆಗೆ, ಹಲವು ವಿದ್ಯಾರ್ಥಿಗಳು ಈ ವಂಚನೆಗೆ ಬಲಿ ಆಗಿದ್ದಾರೆ ಎಂದಿರುವ ಅವರು, ಇಂಥದ್ದಕ್ಕೆಲ್ಲಾ ಬಲಿಯಾಗದೆ ಪರೀಕ್ಷಾ ತಯಾರಿಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿದ್ದಾರೆ.

==

ಪರೀಕ್ಷೆ ಮುನ್ನಾದಿನ ನೀಟ್‌ ವಿದ್ಯಾರ್ಥಿನಿ ನೇಣಿಗೆ ಶರಣು

ಹೈದರಾಬಾದ್‌: ಭಾನುವಾರ ನಡೆದ ನೀಟ್‌ ಮರುಪರೀಕ್ಷೆಗೆ ಹಾಜರಾಗಬೇಕಿದ್ದ ಹೈದರಾಬಾದ್‌ನ ವಿದ್ಯಾರ್ಥಿನಿಯೊಬ್ಬರು ಅದರ ಹಿಂದಿನ ದಿನ(ಶನಿವಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಬ್ಬರು ಕಿರಿಯ ಸಹೋದರಿಯರೊಂದಿಗೆ ಮಿಯಾಪುರದಲ್ಲಿ ವಾಸವಾಗಿದ್ದ ಸನಾ ಶೇಖ್‌(19), ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಮರಣಪತ್ರವನ್ನೂ ಬರೆದಿಟ್ಟಿದ್ದರು ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಕೋಣೆ ಸೇರಿಕೊಂಡಾಕೆ ಸಂಜೆಯಾದರೂ ಹೊರಬಾರದಿದ್ದುದನ್ನು ನೋಡಿ ಬಾಗಿಲು ತೆರೆದಾಗ ಸನಾಳ ಮೃತದೇಹ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಪರೀಕ್ಷೆ ಹಾಗೂ ಪರಿವಾರದವರ ನಿರೀಕ್ಷೆಗಳ ತಾಳಲಾರದೆ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ.

==

ನೀಟ್‌ ಗೊಂದಲ!

ಬುರ್ಖಾ ತೆಗೆಯಲು ಒತ್ತಾಯಅಜ್ಮೇರ್‌ನ ಪರೀಕ್ಷಾ ಕೇಂದ್ರವೊಂದಕ್ಕೆ ಬುರ್ಖಾ ಧರಿಸಿ ನೀಟ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಅದನ್ನು ತೆಗೆಯುವಂತೆ ಸೂಚಿಸಿದ ಹಾಗೂ ಅದಕ್ಕೆ ಆಕೆ ಹಾಗೂ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಕುಲ್ಸುಂ ಬಾನೋ, ‘ಮೇ 3ರಂದು ನಡೆದಿದ್ದ ಪರೀಕ್ಷೆಗೂ ಇಂತಹ ಬಟ್ಟೆಯನ್ನೇ ಧರಿಸಿದ್ದೆ. ಆಗ ಯಾರೂ ತಡೆದಿರಲಿಲ್ಲ. ಎನ್‌ಟಿಎ ಅನುಮತಿಸಿರುವಾಗ ಇವರು ನಮ್ಮನ್ನು ತಡೆಯಲಾಗದು. ನನಗೆ ಪರೀಕ್ಷೆಗಿಂತ ಬುರ್ಖಾ ಹಾಗೂ ನನ್ನ ಗುರುತೇ ಮುಖ್ಯ’ ಎಂದಳು.

ಪವಿತ್ರ ದಾರಕ್ಕೂ ಆಕ್ಷೇಪಅಹಮದಾಬಾದ್‌ನ ವಸ್ತ್ರಾಪುರವೆಂಬಲ್ಲಿ ಹಿಂದೂ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡು ಬಂದಿದ್ದ ಪವಿತ್ರ ದಾರವನ್ನು ಕತ್ತರಿಸಿದ ಹಾಗೂ ಮುಸಲ್ಮಾನ ವಿದ್ಯಾರ್ಥಿನಿಯರ ಬುರ್ಖಾ ತೆಗೆಸಿದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಪೋಷಕರು ಪ್ರತಿಭಟಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಬುರ್ಕಾ ಮತ್ತು ದಾರ ಧರಿಸಿ ಪರೀಕ್ಷೆ ಬರೆಯಲು ಅನುಮತಿಸಿದರು.

ಹಳೆ ಪ್ರವೇಶಪತ್ರ ಹಿಡಿದು

ಬಂದ ವಿದ್ಯಾರ್ಥಿ: ಗೊಂದಲಮರುಪರೀಕ್ಷೆ ಬರೆಯಲೆಂದು ವಿದ್ಯಾರ್ಥಿನಿಯೊಬ್ಬರು ಮೇನಲ್ಲಿ ನಡೆದ ಎಕ್ಸಾಂನ ಪ್ರವೇಶಪತ್ರವನ್ನು ಹಿಡಿದು, ಹಳೆಯ ಕೇಂದ್ರಕ್ಕೆ ಬಂದ ಘಟನೆ ಅಜ್ಮೇರ್‌ನಲ್ಲಿ ನಡೆದಿದೆ. ಪರಿಶೀಲನೆ ವೇಳೆ ಈ ವಿಷಯ ಗಮನಕ್ಕೆ ಬಂದಿದ್ದು, ಆನ್‌ಲೈನ್‌ನಲ್ಲಿ ಚೆಕ್‌ ಮಾಡಿದಾಗ 40 ಕಿ.ಮೀ. ದೂರದೂರಿನಲ್ಲಿ ಪರೀಕ್ಷೆ ಬರೆಯಬೇಕಿದೆ ಎಂಬುದು ತಿಳಿದುಬಂದಿದೆ. ಬಳಿಕ ಶಾಲೆಯ ಕಡೆಯಿಂದಲೇ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿನಿಯನ್ನು ಸರಿಯಾದ ಕೇಂದ್ರಕ್ಕೆ ಸಕಾಲದಲ್ಲಿ ತಲುಪಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಬ್ಬರು ಠಾಕ್ರೆ ಆಪ್ತರು ಶಿಂಧೆ ಶಿವಸೇನೆಗೆ
ಮತ್ತೆ ಟ್ರಂಪ್‌-ಮೆಲೋನಿ ಜಟಾಪಟಿ