ನಾಗ್ಪುರ : ‘ನಾಯಕರು 75 ವರ್ಷಕ್ಕೆ ಹಿಂದೆ ಸರಿಯಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ 75ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ಭಾಗವತ್ ನೀಡಿರುವ ಈ ಹೇಳಿಕೆ ಭಾರೀ ಚರ್ಚೆ ಹುಟ್ಟಿಸಿದೆ. ಇದರ ಬೆನ್ನಲ್ಲೇ, ‘ಇದು ಇಬ್ಬರಿಗೂ ನಿವೃತ್ತಿ ಸಮಯ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಸಿದ್ಧಾಂತವಾದಿ ದಿ. ಮೋರೋಪಂತ್ ಪಿಂಗಳೆ ಅವರಿಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ‘ಒಬ್ಬರು 75 ವರ್ಷ ಪೂರೈಸಿದ ಗೌರವಾರ್ಥವಾಗಿ ಅವರ ಹೆಗಲ ಮೇಲೆ ಶಾಲು ಹೊದಿಸಿದರೆ ಅವರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದಾರೆ ಎಂದರ್ಥ. ಅವರು ಪಕ್ಕಕ್ಕೆ ಸರಿದು (ನಿವೃತ್ತಿ ಹೊಂದಿ) ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು’ ಎಂದರು.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದಕ್ಕೂ 6 ದಿನ ಮುನ್ನ, ಎಂದರೆ ಸೆ.11ರಂದು ಭಾಗವತ್ 75 ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿಯೇ ಆರ್‌ಎಸ್‌ಎಸ್ ಮುಖ್ಯಸ್ಥ ಇಂತಹದ್ದೊಂದು ಹೇಳಿಕೆ ನೀಡುತ್ತಿರುವುದು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಬಿಜೆಪಿಯಲ್ಲಿ 75 ತುಂಬಿದವರನ್ನು ನಿವೃತ್ತಿ ಮಾಡಿ ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಗುತ್ತದೆ ಎಂಬ ಅಘೋಷಿತ ನಿಯಮ ಇದೆ ಎಂದು ಮೋದಿ ಚುಕ್ಕಾಣಿ ಹಿಡಿದಾಗಿನಿಂದ ಗುಸುಗುಸು ಇದೆ ಎಂಬುದು ಇಲ್ಲಿ ಗಮನಾರ್ಹ. ಆದರೆ ಇಂಥ ನಿಯಮವಿಲ್ಲ ಎಂದು ಅನೇಕ ಬಾರಿ ಬಿಜೆಪಿ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ವ್ಯಂಗ್ಯ:‘ಮೋದಿಯನ್ನು ಉಲ್ಲೇಖಿಸಿ ಭಾಗವತ್ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿ, ‘ಪ್ರಶಸ್ತಿ ಬಯಸುವ ಕಳಪೆ ಪ್ರಧಾನಿ ವಿದೇಶದಿಂದ ಈಗ ಹಿಂದಿರುಗಿದ್ದಾರೆ. ಅವರಿಗೆ ಇದೆಂಥ ಸ್ವಾಗತ? ಸರಸಂಘಚಾಲಕರು ಮೋದಿ 2025ರ ಸೆ. 17 ರಂದು 75 ವರ್ಷ ತುಂಬುತ್ತಿದೆ ಎಂದು ನೆನಪಿಸಿದ್ದಾರೆ.
ಆಗ ಮೋದಿ ಕೂಡ ಸರಸಂಘಚಾಲಕರಿಗೆ ಸೆ.11ಕ್ಕೆ 75 ತುಂಬುತ್ತಿದೆ ಎಂದು ತಿರುಗೇಟು ನೀಡಬಹುದು’ ಎಂದು ಕುಟುಕಿದ್ದಾರೆ.ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿ, ‘ಒಂದು ಬಾಣ, ಎರಡು ಗುರಿ. ಈಗ ನೀವಿಬ್ಬರೂ ಬ್ಯಾಗ್ ಎತ್ತಿಕೊಂಡು ಒಬ್ಬರಿಗೊಬ್ಬರು ಮಾರ್ಗದರ್ಶನ ಮಾಡಬಹುದು’ ಎಂದು ಕಾಲೆಳೆದಿದ್ದಾರೆ.