ಈ ವರ್ಷ ಮುಂಗಾರು ಮಳೆ ಪ್ರಮಾಣ ಇಳಿಕೆ : ಐಎಂಡಿ

KannadaprabhaNewsNetwork |  
Published : Apr 14, 2026, 02:15 AM ISTUpdated : Apr 14, 2026, 05:28 AM IST
Monsoon

ಸಾರಾಂಶ

ಇನ್ನೆರಡು ತಿಂಗಳಲ್ಲಿ ಆರಂಭವಾಗಲಿರುವ ಮುಂಗಾರು ಈ ಬಾರಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.‘3 ವರ್ಷಗಳ ಬಳಿಕ ಬರುತ್ತಿರುವ ಎಲ್‌ ನಿನೋ ಕಾರಣದಿಂದಾಗಿ ಭಾರತದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.92ರಷ್ಟು ಮಾತ್ರ ಮಳೆಯಾಗಲಿದೆ.

 ನವದೆಹಲಿ: ಇನ್ನೆರಡು ತಿಂಗಳಲ್ಲಿ ಆರಂಭವಾಗಲಿರುವ ಮುಂಗಾರು ಈ ಬಾರಿ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

‘3 ವರ್ಷಗಳ ಬಳಿಕ ಬರುತ್ತಿರುವ ಎಲ್‌ ನಿನೋ ಕಾರಣದಿಂದಾಗಿ ಭಾರತದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.92ರಷ್ಟು ಮಾತ್ರ ಮಳೆಯಾಗಲಿದೆ. ಆದರೆ ಈಶಾನ್ಯ, ವಾಯುವ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಕೊಂಚ ಹೆಚ್ಚು ಮಳೆ ಸುರಿಯಬಹುದು. ಮಾನ್ಸೂನ್‌ನ ಉತ್ತರಾರ್ಧದಲ್ಲಿ ಎಲ್‌ ನಿನೋ ಪ್ರಭಾವ ತಗ್ಗಲಿದ್ದು, ಎಲ್ಲೆಡೆ ಹೆಚ್ಚು ಮಳೆಯಾಗಬಹುದು’ ಎಂದು ಐಎಂಡಿಯ ಡಿಜಿಎಂ ಡಾ। ಎಂ.ಮಹಾಪಾತ್ರ ಹೇಳಿದ್ದಾರೆ. 1971-2020ರ ಅವಧಿಯಲ್ಲಿ ದೇಶದಲ್ಲಿ ಸರಾಸರಿ 87 ಸೆ.ಮೀ. ಮಳೆಯಾಗಿದೆ. ಆದರೆ ಈ ವರ್ಷ ಬರೀ 80 ಸೆ.ಮೀ. ವರ್ಷಧಾರೆಯಾಗಲಿದೆ.

ಜತೆಗೆ, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತರ ಗೋಳಾರ್ಧದಲ್ಲಿ ಆವರಿಸಿದ್ದ ಹಿಮದ ಪ್ರಮಾಣ ಕಳೆದ 3 ತಿಂಗಳಲ್ಲಿ ತಗ್ಗಿದೆ ಎನ್ನಲಾಗಿದೆ.

ಮುಂಗಾರು ಅವಧಿ

ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯನ್ನು ಭಾರತದಲ್ಲಿ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ವೇಳೆ ಸುರಿಯುವ ಮಳೆಯನ್ನೇ ದೇಶದ ರೈತಾಪಿ ಸಮುದಾಯ ಮತ್ತು ದೇಶದ ಆರ್ಥಿಕತೆ ಅವಲಂಬಿಸಿದೆ.

ಎಲ್‌ ನಿನೋ ಎಂದರೇನು?

ಇದು ಪೆಸಿಫಿಕ್‌ ಸಮುದ್ರದಲ್ಲಿ ನಡೆಯುವ ಒಂದು ವಿದ್ಯಮಾನವಾಗಿದ್ದು, ವಿಶ್ವಾದ್ಯಂತ ಮಳೆ ಹೇಗಾಗಲಿದೆ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾ ಭಾಗದಲ್ಲಿ ನೀರು ಬೆಚ್ಚಗಿದ್ದು, ದಕ್ಷಿಣ ಅಮೆರಿಕದ ಸಮುದ್ರದ ಬಳಿ ಅದು ತಂಪಾಗಿರುತ್ತದೆ. ಬೆಚ್ಚಗಿನ ನೀರು ತಂಪು ಪ್ರದೇಶದತ್ತ ಸಾಗುತ್ತಿದ್ದಂತೆ ಅಲ್ಲಿನ ನೀರು ಸಾಮಾನ್ಯಕ್ಕಿಂತ ಬಿಸಿಯಾಗುತ್ತದೆ. ಇದರಿಂದಾಗಿ ಭಾರತದ ಆಗಸದಲ್ಲಿ ರಚನೆಯಾಗುವ ಮೋಡಗಳ ಪ್ರಮಾಣ ತಗ್ಗುತ್ತದೆ. ಪರಿಣಾಮ ಮಳೆ ಕಡಿಮೆಯಾಗುತ್ತದೆ. ಇದರಿಂದಾಗಿ ಖಾರಿಫ್‌ ಬೆಳೆಗಳಿಗೆ ಹಾನಿಯಾಗುತ್ತದೆ. 

ಎರಡೂವರೆ ದಶಕದಲ್ಲಿ 4ನೇ ಬಾರಿ ಎಲ್‌ನಿನೋ

2000ನೇ ಇಸವಿ ಬಳಿಕ ದೇಶದಲ್ಲಿ ಎನ್‌ನಿನೋ ಪರಿಣಾಮ ಉಂಟಾಗುತ್ತಿರುವುದು ಇದೇ 4ನೇ ಬಾರಿ. ಇದಕ್ಕೂ ಮೊದಲು 2002, 2009, 2015 ಮತ್ತು 2023ರಲ್ಲಿ ಸಂಭವಿಸಿತ್ತು.

ಕಳೆದ ಬಾರಿ 2023ರಲ್ಲಿ ಎಲ್‌ ನಿನೋ ಉಂಟಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ ಬಗ್ಗೆ ಟ್ರಂಪ್‌-ಮೋದಿ ಫೋನ್‌ ಮಾತುಕತೆ - ಕದನವಿರಾಮ ಬಳಿಕ ಮೊದಲ ಮಾತು
ಶೇ.33 ಸ್ತ್ರೀ ಮೀಸಲಿಗೆ ಲೋಕಸಭಾ ಸ್ಥಾನ 850ಕ್ಕೆ ಏರಿಕೆ