ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ

Follow Us

ಸಾರಾಂಶ

ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ.27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ನವದೆಹಲಿ: ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ.27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ವಾಡಿಕೆಯಂತೆ ಜೂ.1ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ. ಆದರೆ ಈ ಬಾರಿ 5 ದಿನ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ, 2009ರಲ್ಲಿ ಮೇ 23ರಂದು ಮಳೆ ಪ್ರಾರಂಭವಾಗಿತ್ತು. ಈ ವರ್ಷ ನಿರೀಕ್ಷೆಯಂತೆ ಮೇ.27ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸಿದರೆ, 16 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದ ಮುಖ್ಯ ಭೂಭಾಗದಲ್ಲಿ ಮುಂಗಾರು ಮಾರುತಗಳು ಬೇಗನೇ ಪ್ರವೇಶ ಮಾಡಿದಂತಾಗುತ್ತದೆ.

ಮಳೆ ಕೇರಳವನ್ನು ಪ್ರವೇಶಿಸಿದ ನಂತರ ಭಾರತದ ಮುಖ್ಯ ಭೂಭಾಗದ ಮೇಲೆ ಮಳೆಯ ಆಗಮನವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂ.1ರ ವೇಳೆಗೆ ಕೇರಳಕ್ಕೆ ಕಾಲಿಟ್ಟು, ಜು.8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆ.17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸಿ, ಅ.15ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ. ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವೆರೆಗೆ ಸಾಮಾನ್ಯಕ್ಕಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.