ಕೇರಳಕ್ಕೆ ಇಂದು ಮುಂಗಾರು ಪ್ರವೇಶ

KannadaprabhaNewsNetwork |  
Published : May 30, 2024, 12:54 AM ISTUpdated : May 30, 2024, 05:23 AM IST
ಮಳೆ | Kannada Prabha

ಸಾರಾಂಶ

ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ 30 ಗುರುವಾರ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿ ಮತ್ತು ಈಶಾನ್ಯ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ 30 ಗುರುವಾರ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿ ಮತ್ತು ಈಶಾನ್ಯ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಮುಂಗಾರು ಮೇ 31- ಜೂ.1ರ ವೇಳೆಗೆ ಕೇರಳ ಪ್ರವೇಶಿಸಲಿದೆ. ಬಳಿಕ ಮುಂದಿನ 5-10 ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸುವ ನಿರೀಕ್ಷೆಯಿದೆ. ರೆಮಲ್ ಚಂಡಮಾರುತ ಬಂದ ಹಿನ್ನೆಲೆಯಲ್ಲಿ ಈಶಾನ್ಯ ಭಾರತದಲ್ಲೂ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಿದೆ.

ಮುಂಗಾರು ಪೂರ್ವ ಮಳೆಯಿಂದಾಗಿ ಭಾರತದ ಬಹುತೇಕ ಕಡೆ ಮೇ ತಿಂಗಳಲ್ಲಿ ಅತಿವೃಷ್ಟಿಯಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಅದರಲ್ಲೂ ಕೇರಳದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಜೂನ್‌- ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳ ಈ ಬಾರಿ ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಿ ಮಳೆ ಸುರಿಸಬಹುದು ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿತ್ತು.ನೈಋತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈಋತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ

ಕಳೆದ ವರ್ಷ ಎಷ್ಟು ಮಳೆ ಬಂದಿತ್ತು:2023ರಲ್ಲಿ ಜೂ.8ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶ ಮಾಡಿದ್ದವು. ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ 7 ದಿನ ವಿಳಂಬವಾಗಿ ಆಗಮನವಾಗಿತ್ತು. ಕಳೆದ ವರ್ಷ ದೇಶದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.93ರಷ್ಟು ಮಳೆ ಸುರಿದಿತ್ತು.

ಈ ವರ್ಷ ಮಳೆ ಹೇಗಿರಲಿದೆ?ಕರ್ನಾಟಕ ಒಳಗೊಂಡ ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ವಾಯುವ್ಯದಲ್ಲಿ ಸಾಮಾನ್ಯ ಮತ್ತು ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ.ಜೂನ್‌ನಲ್ಲಿ 166.9 ಮಿ.ಮೀ. ಅಥವಾ ಶೇ.92ರಿಂದ 108ರಷ್ಟು ಮಳೆ ಆಗಲಿದೆ. ದಕ್ಷಿಣ ಭಾರತದ ಕೆಲವು ಪ್ರದೇಶ ಹೊರತುಪಡಿಸಿ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

PREV

Recommended Stories

ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?