ಲಖನೌ: 2024ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಚಾರದ ವೇಳೆಯಲ್ಲಿ ಹಲವು ಸಲ ವೇದಿಕೆ ಮೇಲೆ ಪುಟ್ಟ ಸಂವಿಧಾನವನ್ನು ತೋರಿಸಿ, ಮೋದಿ ಸರ್ಕಾರದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿ ಗಮನ ಸೆಳೆದಿದ್ದರು. ಈ 20 ಸೆಂ.ಮೀ ಉದ್ದ ಮತ್ತು 9 ಸೆಂ.ಮೀ ಅಗಲದ ಸಂವಿಧಾನಕ್ಕೆ ಈಗ ಭಾರಿ ಡಿಮಾಂಡ್ ಬಂದಿದೆಯಂತೆ.
ಈ ಕಿರು ಸಂವಿಧಾನ ಪುಸ್ತಕದ ಮೇಲೆ ಜನರು ಇದೀಗ ಹೆಚ್ಚುಆಸಕ್ತಿ ತೋರಿಸುತ್ತಿದ್ದಾರೆ. ಹಿಂದಿಗಿಂತ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಪಾಕೆಟ್ ಸಂವಿಧಾನ ಪುಸ್ತಕ ಪ್ರಕಟಿಸುವ ಈಸ್ಟರ್ನ್ ಬುಕ್ ಕಂಪೆನಿ ಪ್ರಕಾಶಕ ಸುಮಿತ್ ಮಲ್ಲಿಕ್ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಮೊದಲ ಆವೃತ್ತಿಯಲ್ಲಿ 700-800 ಕಾಪಿ ಮುದ್ರಿದಿದ್ದೆವು. 16ನೇ ಆವೃತ್ತಿಯಲ್ಲಿ 5000-6000 ಮುದ್ರಿಸಿದ್ದೆವು. ಈಗ ಮತ್ತಷ್ಟು ಬೇಡಿಕೆ ಬಂದಿದೆ’ ಎಂದು ಮಲಿಕ್ ಹೇಳಿದ್ದಾರೆ.
ಐಡಿಯಾ ಬಂದಿದ್ದು ಹೇಗೆ?:
ಪಾಕೆಟ್ ಸಂವಿಧಾನದ ಮುದ್ರಿಸುವ ಆಲೋಚನೆ ಸುಪ್ರೀಂ ಕೋರ್ಟ್ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಎನ್ನುವರಿಂದ ಬಂದಿತ್ತು. ಅವರ ಸಲಹೆಯಿಂದ ಮೊದಲು ಪಾಕೆಟ್ ಸಂವಿಧಾನ ಪ್ರಕಟವಾಯಿತು ಎಂದು ತಿಳಿಸಿದ್ದಾರೆ.ಈ ಪುಸ್ತಕವನ್ನು ಮೊದಲು 2009ರಲ್ಲಿ ಈಸ್ಟರ್ನ್ ಬುಕ್ ಕಂಪೆನಿಯವರು ಮೊದಲ ಬಾರಿ ಮುದ್ರಿಸಿದ್ದರು. ಈವರೆಗೆ ಈ ಪುಸ್ತಕ ಸುಮಾರು 16 ಮುದ್ರಣಗಳನ್ನು ಕಂಡಿದೆ. ಇದೇ ಪುಸ್ತಕವನ್ನು ಚುನಾವಣೆ ಪ್ರಚಾರದ ವೇಳೆ ರಾಹುಲ್ ಸಣ್ಣ ಗಾತ್ರದ ಪುಸ್ತಕವನ್ನು ಬಿಜೆಪಿಯನ್ನು ಟೀಕಿಸುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಬಳಿಕ ಸಣ್ಣ ಗಾತ್ರದ ಸಂವಿಧಾನದ ಬಗ್ಗೆ ಜನರಲ್ಲಿ ಆಸಕ್ತಿ ಹುಟ್ಟಿಕೊಂಡಿದೆ ಎಂದು ಮಲಿಕ್ ಹೇಳಿದ್ದಾರೆ.
ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ, ಅನೇಕ ವಕೀಲರು ಮತ್ತು ನ್ಯಾಯಾಧೀಶರು ಇದನ್ನು ಖರೀದಿಸಿದ್ದರು. ಅಲ್ಲದೇ ಗಣ್ಯರ ಉಡುಗೊರೆಯಾಗಿ ಬಳಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿದ್ದರು ಎಂದು ಮಲಿಕ್ ತಿಳಿಸಿದ್ದಾರೆ.