ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಹಾಗೂ ತೆಗೆದುಹಾಕುವ ಕೆಲಸ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಈ ಆರೋಪಕ್ಕೆ ಪೂರಕವಾಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಹಾಗೂ ತೆಗೆದುಹಾಕುವ ಕೆಲಸ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಈ ಆರೋಪಕ್ಕೆ ಪೂರಕವಾಗಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ವಿಪಕ್ಷಗಳ ಅನುಮಾನವನ್ನು ಪರಿಹರಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಶುಕ್ರವಾರ ಇಲ್ಲಿ ವಿಪಕ್ಷಗಳ ನಾಯಕರ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಮಹಾರಾಷ್ಟ್ರದಲ್ಲಿ ಇರುವ ಒಟ್ಟು ವಯಸ್ಕ ಮತದಾರರ ಸಂಖ್ಯೆ 9.53 ಕೋಟಿ. ಆದರೆ ಚುನಾವಣಾ ಆಯೋಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯಲ್ಲಿ 9.7 ಕೋಟಿ ಜನರ ಹೆಸರಿದೆ. ಜೊತೆಗೆ 2019ರ ವಿಧಾನಸಭಾ ಚುನಾವಣೆಯಿಂದ 2024ರ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಒಟ್ಟು 34 ಲಕ್ಷ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದರು. ಆದರೆ 2024ರ ಲೋಕಸಭಾ ಚುನಾವಣೆ ಬಳಿಕದಿಂದ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ 5 ತಿಂಗಳ ಅವಧಿಯಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.ಪಟ್ಟಿಯಿಂದ ಹಲವರ ಹೆಸರು ಕೈಬಿಡಲಾಗಿದೆ. ಹೀಗೆ ಕೈಬಿಟ್ಟವರಲ್ಲಿ ಬಹುತೇಕರು ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರಾಗಿದ್ದಾರೆ. ಇನ್ನೊಂದೆಡೆ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಆದವರೆಲ್ಲಾ ಬಿಜೆಪಿಯ ಬೆಂಬಲಿಗರು ಎಂದು ಆರೋಪಿಸಿದ್ದಾರೆ.
ಸ್ಪಷ್ಟನೆಗೆ ಆಗ್ರಹ:
‘ಒಂದೋ ಆಯೋಗ ಮತದಾರರ ಪಟ್ಟಿಯ ಮೇಲಿನ ಹಿಡಿತ ಕಳೆದುಕೊಂಡಿದೆ. ಇಲ್ಲವೇ ಅದರಲ್ಲಿ ಅಕ್ರಮ ನಡೆಸಿದೆ. ಈ ಬಗ್ಗೆ ಆಯೋಗವೇ ಸ್ಪಷ್ಟನೆ ನೀಡಬೇಕಿದೆ. ಇಲ್ಲದಿದ್ದರೆ ಅದನ್ನು ಸರ್ಕಾರದ ಅಡಿಯಾಳೆಂದು ಪರಿಗಣಿಸಲಾಗುವುದು. ಜೊತೆಗೆ ನಮ್ಮ ಅನುಮಾನಗಳನ್ನು ಪರಿಹರಿಸುವ ಕೆಲಸವನ್ನು ಆಯೋಗ ಮಾಡದೇ ಹೋದಲ್ಲಿ ನ್ಯಾಯಾಂಗದ ಮೆಟ್ಟಿಲೇರುವುದಾಗಿ’ ಎಂದು ರಾಹುಲ್ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ‘ನಾವು ಪಕ್ಷಗಳ ಅಭಿಪ್ರಾಯ, ಸಲಹೆ ಹಾಗೂ ಪ್ರಶ್ನೆಗಳನ್ನು ಗೌರವಿಸುತ್ತೇವೆ. ಇದಕ್ಕೆ ನಾವು ಲಿಖಿತ ರೂಪದಲ್ಲಿ ಉತ್ತರಿಸುತ್ತೇವೆ’ ಎಂಬ ಭರವಸೆ ನೀಡಿದೆ.
ಈಗಾಗಲೇ ಕಾಂಗ್ರೆಸ್, ಆಯೋಗದ ಕಾರ್ಯವೈಖರಿಯ ಮೇಲೆ ಕಣ್ಣಿಡಲು ತನ್ನ ಹಲವು ನಾಯಕರನ್ನೊಳಗೊಂಡ ‘ಈಗಲ್’ ಎಂಬ ಸಮಿತಿಯನ್ನು ರಚಿಸಿದೆ.