ವಿಧಾನಸಭಾ ಚುನಾವಣೆ : ಮಹಾರಾಷ್ಟ್ರದಲ್ಲಿ ಪುನಃ ಎನ್‌ಡಿಎ, ಜಾರ್ಖಂಡ್‌ನಲ್ಲಿ ರೋಚಕ ರಿಸಲ್ಟ್‌?

KannadaprabhaNewsNetwork | Updated : Nov 21 2024, 04:26 AM IST

ಸಾರಾಂಶ

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮುಗಿಯುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟ ಆಗಿವೆ. ಮಹಾರಾಷ್ಟ್ರದಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ (ಮಹಾಯುತಿ) ಕೂಟ ಪುನಃ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

 ಮುಂಬೈ/ರಾಂಚಿ : ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮುಗಿಯುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟ ಆಗಿವೆ. ಮಹಾರಾಷ್ಟ್ರದಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ (ಮಹಾಯುತಿ) ಕೂಟ ಪುನಃ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ ಜಾರ್ಖಂಡ್‌ನಲ್ಲಿ ಮಿಶ್ರ ಫಲಿತಾಂಶ ಬರುವ ಸಮೀಕ್ಷೆಗಳು ಪ್ರಕಟವಾಗಿದ್ದು, ಸಮಬಲದ ಭವಿಷ್ಯ ನುಡಿದಿವೆ. ಹೀಗಾಗಿ ನ.23ರಂದು ನಡೆಯಲಿರುವ ಮತಎಣಿಕೆ ಸಹಜವಾಗಿಯೇ ಕುತೂಹಲ ಕೆರಳುವಂತೆ ಮಾಡಿದೆ. ಆದರೆ ಲೋಕಸಭೆ ಚುನಾವಣೆ ಮತ್ತು ಹರ್ಯಾಣ ಚುನಾವಣೆಗಳಲ್ಲಿ ಎಕ್ಸಿಟ್‌ ಪೋಲ್‌ಗಳು ತಲೆಕೆಳಗಾಗಿದ್ದವು ಎಂಬುದು ಇಲ್ಲಿ ಗಮನಾರ್ಹ.

ಮಹಾರಾಷ್ಟ್ರದಲ್ಲಿ ಬಿಜೆಪಿ ಕೂಟಕ್ಕೆ ಜಯ:

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 9 ಮಾಧ್ಯಮ ಸಂಸ್ಥೆಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ಸಮೀಕ್ಷೆ ಪ್ರಕಟಿಸಿವೆ. ಆಡಳಿತಾರೂಢ ಮಹಾಯುತಿ (ಬಿಜೆಪಿ-ಶಿವಸೇನೆ ಶಿಂಧೆ ಬಣ-ಎನ್ಸಿಪಿ ಅಜಿತ್‌ ಬಣ) ಹಾಗೂ ‘ಎಂವಿಎ’ ಎಂದು ಕರೆಯಲಾಗುವ ಮಹಾ ವಿಕಾಸ ಅಘಾಡಿ (ಕಾಂಗ್ರೆಸ್‌- ಶಿವಸೇನೆ ಠಾಕ್ರೆ ಬಣ-ಎನ್‌ಸಿಪಿ ಶರದ್‌ ಬಣ) ಇಲ್ಲಿ ಪ್ರಮುಖ ಎದುರಾಳಿಗಳು. 9 ಸಮೀಕ್ಷೆಗಳ ಪೈಕಿ ಮಹಾಯುತಿ ಪರ 6, ಎಂವಿಎ ಪರ 2 ಸಮೀಕ್ಷೆಗಳು ಬಂದಿವೆ. ಒಂದು ಅಥವಾ 2 ಸಮೀಕ್ಷೆಗಳು ಅತಂತ್ರ ಸ್ಥಿತಿಯ ಭವಿಷ್ಯ ಹೇಳಿವೆ.

ಜಾರ್ಖಂಡಲ್ಲಿ ಸಮಬಲ:

ಇನ್ನು ಜಾರ್ಖಂಡಲ್ಲಿ 8 ಸಮೀಕ್ಷಾ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಇಲ್ಲಿ ಆಡಳಿತಾರೂಢ ಕಾಂಗ್ರೆಸ್‌-ಜೆಎಂಎಂ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಇಲ್ಲಿ ಕಾಂಗ್ರೆಸ್‌-ಜೆಎಂಎಂ ಪರ 3, ಬಿಜೆಪಿ ಪರ 3 ಸಮೀಕ್ಷಾ ಸಂಸ್ಥೆಗಳು ಜಯದ ಭವಿಷ್ಯ ಹೇಳಿವೆ. 2 ಸಮೀಕ್ಷೆಗಳು ಅತಂತ್ರ ಸ್ಥಿತಿ ಬರಲಿದೆ ಎಂದಿವೆ.

ಉ.ಪ್ರ.ದಲ್ಲಿ ಕಮಲ:

ಇನ್ನು 9 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ನಡೆದಿರುವ ಉತ್ತರ ಪ್ರದೇಶದಲ್ಲಿ 7ರಲ್ಲಿ ಬಿಜೆಪಿ, 2ರಲ್ಲಿ ಎಸ್ಪಿ ಗೆಲ್ಲಲಿವೆ ಎಂದು ಸಮೀಕ್ಷೆಗಳು ಹೇಳಿವೆ.

Share this article