ವಿಶ್ವದ ದುಬಾರಿ ಉಪಗ್ರಹ ನಿಸಾರ್‌ ಯಶಸ್ವಿ ಉಡಾವಣೆ

Published : Jul 31, 2025, 07:21 AM IST
NISAR Launched From Sriharikota, India In NASA-ISRO Milestone

ಸಾರಾಂಶ

ಭಾರತ ಹಾಗೂ ಅಮೆರಿಕ ಮೊದಲ ಬಾರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಾಗೂ ವಿಶ್ವದ ಅತಿ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ ‘ನಿಸಾರ್ ಯಶಸ್ವಿಯಾಗಿ ಉಡಾವಣೆ

ಶ್ರೀಹರಿಕೋಟ : ಭಾರತ ಹಾಗೂ ಅಮೆರಿಕ ಮೊದಲ ಬಾರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಾಗೂ ವಿಶ್ವದ ಅತಿ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ ‘ನಿಸಾರ್’ ಬುಧವಾರ ಸಂಜೆ 5.40ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನದ ಬೆನ್ನಲ್ಲೇ, ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

27.30 ಗಂಟೆಗಳ ಕ್ಷಣಗಣನೆ ಬಳಿಕ, ಇಸ್ರೋದ ಜಿಎಸ್‌ಎಲ್‌ವಿ-16 ರಾಕೆಟ್ ಸುಮಾರು 745 ಕಿ.ಮೀ. ದೂರ, 19 ನಿಮಿಷಗಳ ಕಾಲ ಹಾರಾಟ ನಡೆಸಿ ನಿಸಾರ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ.

ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಸ್‌-ಬ್ಯಾಂಡ್‌ ಅನ್ನು ಇಸ್ರೋ ಒದಗಿಸಿದ್ದರೆ, ಎಲ್-ಬ್ಯಾಂಡ್ ಅನ್ನು ನಾಸಾ ಒದಗಿಸಿದೆ. ಉಪಗ್ರಹದ ಕಾರ್ಯಾಚರಣೆ ಜವಾಬ್ದಾರಿಯನ್ನು ಇಸ್ರೋ, ಕಕ್ಷೆ ಮತ್ತು ರಾಡಾರ್‌ನ ಕಾರ್ಯಾಚರಣೆಯನ್ನು ನಾಸಾ ವಹಿಸಿಕೊಂಡಿವೆ. ಉಪಗ್ರಹ ತೆಗೆದ ಚಿತ್ರಗಳನ್ನು ಡೌನ್‌ಲೋಡ್ ಮಾಡಲು ಇಸ್ರೋ ಮತ್ತು ನಾಸಾ ಎರಡೂ ಕೇಂದ್ರಗಳು ಕೆಲಸ ಮಾಡಲಿವೆ ಎಂದು ಇಸ್ರೋ ತಿಳಿಸಿದೆ.

ಇದು ಶ್ರೀಹರಿಕೋಟದಿಂದ ನಡೆದ 102ನೇ ಉಡಾವಣೆ ಆಗಿತ್ತು.

ವಿಶ್ವದ ಅತಿ ದುಬಾರಿ ಉಪಗ್ರಹ:

ಈ ಯೋಜನೆಗೆ 11,394 ಕೋಟಿ ರು. ವ್ಯಯಿಸಲಾಗಿದೆ. ಇದರಲ್ಲಿ ಅಮೆರಿಕದ ಪಾಲು ಹೆಚ್ಚಿದೆ. ‘ನಿಸಾರ್‌’ ಈವರೆಗಿನ ವಿಶ್ವದ ಅತ್ಯಂತ ದುಬಾರಿ ಉಪಗ್ರಹವಾಗಿದೆ. ಉಪಗ್ರಹದ ತೂಕ 2,393 ಕೆ.ಜಿ. ಇದ್ದರೆ, ರಾಕೆಟ್‌ನ ಉದ್ದ 51.7 ಮೀ. ಇದೆ.

ಲಾಭವೇನು?:

ಇದು 12 ದಿನಗಳ ಮಧ್ಯಂತರದಲ್ಲಿ ಇಡೀ ಭೂಮಿಯನ್ನು ಸ್ಕ್ಯಾನ್ ಮಾಡುತ್ತದೆ. 12 ದಿನಕ್ಕೊಮ್ಮೆ ವರದಿಯನ್ನು ಭೂಮಿಗೆ ರವಾನಿಸುತ್ತದೆ. ಈ ಉಪಗ್ರಹವು ಇಡೀ ಭೂಮಿಯ ಹಗಲು-ರಾತ್ರಿ ವೀಕ್ಷಣೆ ನಡೆಸಿ, 3-ಡಿ ಚಿತ್ರಗಳನ್ನು ಒದಗಿಸುತ್ತದೆ. ನೆಲ ಮತ್ತು ಮಂಜುಗಡ್ಡೆಯ ವಿರೂಪ, ಭೂಮಿಯ ಮೇಲಿನ ಸಣ್ಣಪುಟ್ಟ ಬದಲಾವಣೆ, ಭೂಕುಸಿತ, ಭೂಕಂಪನದಂತಹ ಪ್ರಾಕೃತಿಕ ವಿಕೋಪಗಳು, ಹಡಗುಗಳ ಪತ್ತೆ, ಮಣ್ಣಿನ ತೇವಾಂಶ, ಹವಾಮಾನ ಮೇಲ್ವಿಚಾರಣೆ, ಸಮುದ್ರದ ಮೇಲೆ ಕಣ್ಗಾವಲು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ.

PREV
Read more Articles on

Recommended Stories

ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು
ಮೈಸೂರು ಫ್ಯಾಕ್ಟರಿ ಕೇಸ್‌ : ವಶಪಡಿಸಿಕೊಂಡ ಡ್ರಗ್ಸ್‌ಮೌಲ್ಯ ₹435 ಕೋಟಿಗೆ