ಜೈಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಭಾಂಗಿ ಎನ್ನುವವರು .2 ಕೇಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಸಾಮಾನ್ಯವಾಗಿ ನವಜಾತ ಗಂಡು ಶಿಶು 2.8 - 3.2 ಕೇಜಿ ಮತ್ತು, ಹೆಣ್ಣು ಮಗು 2.7- 3.1 ಕೇಜಿ ತೂಕವಿರುತ್ತದೆ, ಆದರೆ ಈ ಮಗು ಹುಟ್ಟುವಾಗಲೇ 5.2 ಕೇಜಿ ತೂಕಹೊಂದಿದ್ದು ವೈದ್ಯರು ಆಶ್ವರ್ಯಚಕಿತರಾದರು. ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ವೈದ್ಯಕೀಯ ಸಿಬ್ಬಂದಿ ತಮ್ಮ ತೋಳುಗಳಲ್ಲಿ ಮಗುವನ್ನು ಎತ್ತಿಕೊಂಡು ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ. ಕರ್ನಾಟಕದಲ್ಲಿ 2016ರಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 6.82 ಕೇಜಿ ತೂಕದ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಳು. ಇದು ಭಾರತದಲ್ಲಿಯೇ ದಾಖಲೆ. ಇನ್ನು 2015ರಲ್ಲಿ ಉತ್ತರಪ್ರದೇಶದ ಮಹಿಳೆಯೊಬ್ಬರು 6.7ಕೇಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಕರ್ನಾಟಕ ಹೈಕೋರ್ಟ್‌ನ
ಗೇಮಿಂಗ್ ಕೇಸು ಸುಪ್ರೀಂಗೆ
ವರ್ಗಕ್ಕೆ ಕೇಂದ್ರ ಮನವಿ
ನವದೆಹಲಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಂದಿರುವ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.ಹಣವನ್ನು ಬಳಸಿ ಆಡುವ ಆನ್‌ಲೈನ್ ಆಟಗಳಿಗೆ ಕಡಿವಾಣ ಹಾಕಲು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 ಅನ್ನು ಮೊದಲ ಬಾರಿ ಜಾರಿಗೆ ತರಲಾಗಿತ್ತು. ಇದನ್ನು ಕರ್ನಾಟಕ, ಮಧ್ಯಪ್ರದೇಶ ಮತ್ತು ದೆಹಲಿ ಹೈಕೋರ್ಟ್‌ಗಳನ್ನು ಪ್ರಶ್ನಿಸಲಾಗಿತ್ತು. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತು ಮಧ್ಯಂತರ ಆದೇಶ ಹೊರಡಿಸಲೂ ನಿರ್ಧಾರವಾಗಿದೆ. ಹೀಗಿರುವಾಗ, 3 ಹೈಕೋರ್ಟ್‌ಗಳು ಭಿನ್ನ ತೀರ್ಪು ಕೊಟ್ಟರೆ ಉಂಟಾಗಬಹುದಾದ ಗೊಂದಲವನ್ನು ತಡೆಯುವ ಸಲುವಾಗಿ, ಎಲ್ಲಾ ಕೇಸ್‌ಗಳನ್ನು ಸುಪ್ರೀಂ ಅಂಗಳಕ್ಕೆ ತರಬೇಕೆಂದು ಕೇಂದ್ರ ಸರ್ಕಾರವು ಮುಖ್ಯ ನ್ಯಾ। ಬಿ.ಆರ್. ಗವಾಯಿ ಮತ್ತು ನ್ಯಾ। ಕೆ. ವಿನೋದ್ ಚಂದ್ರನ್ ಅವರ ಪೀಠದೆದುರು ಕೋರಿಕೊಂಡಿದೆ. ಇದರ ವಿಚಾರಣೆಯನ್ನು ಮುಂದಿನ ವಾರ ನಡೆಸಲು ಸಿಜೆಐ ಒಪ್ಪಿಗೆ ಸೂಚಿಸಿದ್ದಾರೆ.
ಸಿಂದೂರದ ಪೆಟ್ಟು ತಿಂದ ಪಾಕ್‌ನ
ನೂರ್‌ಖಾನ್ ನೆಲೆ ಮರು ನಿರ್ಮಾಣ
ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹಾನಿಗೀಡಾಗಿದ್ದ ಮಹತ್ವದ ನೂರ್‌ಖಾನ್ ಏರ್‌ಬೇಸ್ ಅನ್ನು ಪಾಕಿಸ್ತಾನ ಭಾಗಶಃ ಪುನರ್ ನಿರ್ಮಿಸಿದೆ.ನೂರ್‌ಖಾನ್ ಪಾಕಿಸ್ತಾನದ ಪಾಲಿಗೆ ಮಹತ್ವದ ಏರ್‌ಬೇಸ್ ಆಗಿದ್ದು, ಇದು ಇಸ್ಲಾಮಾಬಾದ್‌ನಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಮೇ 10ರಂದು ಭಾರತ ನಡೆಸಿದ ವಾಯುದಾಳಿಯಲ್ಲಿ ನೂರ್‌ಖಾನ್ ಏರ್‌ಬೇಸ್‌ಗೆ ತೀವ್ರ ಹಾನಿಯಾಗಿತ್ತು. ಭಾರತದ ವಿರುದ್ಧದ ದಾಳಿಗೆ ಕಮಾಂಡ್ ಕಂಟ್ರೋಲ್ ರೂಮ್ ಆಗಿ ಕಾರ್ಯಾಚರಿಸುತ್ತಿದ್ದ ಎರಡು ವಿಶೇಷ ಟ್ರಕ್‌ಗಳು ಈ ವೇಳೆ ನಾಶಗೊಂಡಿತ್ತು. ಇದರ ಜತೆಗೆ ಪಕ್ಕದಲ್ಲೇ ಇದ್ದ ಕಟ್ಟಡಕ್ಕೂ ಸಾಕಷ್ಟು ಹಾನಿಯಾಗಿತ್ತು.
ಈ ದಾಳಿ ನಡೆದು ನಾಲ್ಕು ತಿಂಗಳ ಬಳಿಕ ಇದೀಗ ನೂರ್‌ಖಾನ್ ಏರ್‌ಬೇಸ್‌ನ ಮರುನಿರ್ಮಾಣ ಕಾರ್ಯ ಭರದಿಂದ ಸಾಗಿರುವುದು ಬೆಳಕಿಗೆ ಬಂದಿದೆ. ಅಮೆರಿಕದ ಮ್ಯಾಕ್ಸರ್ ಟೆಕ್ನಾಲಜೀಸ್ ಸಂಸ್ಥೆಯ ಉಪಗ್ರಹ ಚಿತ್ರಗಳು ಇದನ್ನು ಖಚಿತಪಡಿಸಿವೆ. ಹಾನಿಗೀಡಾದ ಕಟ್ಟಡದ ಒಂದು ಭಾಗ ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ.ಪಾಕಿಸ್ತಾನ ಸೇನೆಗೆ ಸೇರಿದ ಬೊಂಬಾರ್ಡಿಯರ್ ಗ್ಲೋಬಲ್ 6000 ವಿವಿಐಪಿ ಜೆಟ್ ಮತ್ತು ಮಿಲಿಟರಿ ಟ್ರಾನ್ಸ್‌ಪೋರ್ಟ್ ವಿಮಾನವು ಏರ್‌ಬೇಸ್ ಮರು ನಿರ್ಮಾಣ ಪ್ರದೇಶದ ಸಮೀಪದಲ್ಲೇ ನಿಲ್ಲಿಸಲಾಗಿದೆ. ಪಾಕ್ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಅವರು ಪಿಎಎಫ್ ಗ್ಲೋಬಲ್ 6000 ವಿಮಾನವನ್ನು ತಮ್ಮ ವಿದೇಶಿ ಪ್ರವಾಸಗಳಿಗಾಗಿ ಬಳಸುತ್ತಿರುತ್ತಾರೆ.
ಚೀನಾದ ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಶೃಂಗಕ್ಕೂ ಇದೇ ಏರ್‌ಬೇಸ್ ಮೂಲಕವೇ ಆಸಿಂ ಮುನೀರ್ ತೆರಳಿದ್ದರು.
ಪ್ರಮುಖ ನಗರಗಳಲ್ಲಿ
ಕೆಜಿಗೆ ₹24ಗೆ ಈರುಳ್ಳಿ
ಮಾರಾಟ: ಸರ್ಕಾರ
ನವದೆಹಲಿ: ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಕೆಜಿಗೆ 24 ರು.ನಂಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಗುರುವಾರದಿಂದಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಆರಂಭವಾಗಿದೆ. ದಿಲ್ಲಿಯಲ್ಲಿ ಸಬ್ಸಿಡಿ ಈರುಳ್ಳಿ ಮಾರಾಟಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ, ‘ ಬಫರ್ ಸ್ಟಾಕ್‌ನಿಂದ ಸುಮಾರು 25 ಟನ್ ಈರುಳ್ಳಿಯನ್ನು ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ನಾಫೆಡ್. ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರದ ಮೂಲಕ ಮಾರಲಾಗುತ್ತದೆ. ಚಿಲ್ಲರೆ ಮಾರಾಟ ಬೆಲೆ 30 ರು.ಗಿಂತ ಹೆಚ್ಚಿರುವ ಸ್ಥಳಗಳಲ್ಲಿ ಈರುಳ್ಳಿಯನ್ನು ಕೇಜಿಗೆ 24 ರು.ನಂತೆ ಮಾರಾಟ ಮಾಡಲಾಗುವುದು’ ಎಂದರು. ಸಬ್ಸಿಡಿ ಮಾರಾಟ ಶುಕ್ರವಾರದಿಂದ ಚೆನ್ನೈ, ಗುವಾಹಟಿ, ಕೋಲ್ಕತಾಗೆ ವಿಸ್ತರಣೆ ಆಗಲಿದ್ದು, ಡಿಸೆಂಬರ್ ತನಕವೂ ಮುಂದುವರೆಯಲಿದೆ.