ಉತ್ತರದಲ್ಲಿ ಉಷ್ಣ ಮಾರುತದಿಂದ ವಿದ್ಯುತ್‌ ಕ್ಷಾಮ

KannadaprabhaNewsNetwork |  
Published : Jun 20, 2024, 01:11 AM ISTUpdated : Jun 20, 2024, 04:18 AM IST
ವಿದ್ಯುತ್‌ ಕ್ಷಾಮ | Kannada Prabha

ಸಾರಾಂಶ

ತಾಪಮಾನ ಏರಿಕೆ ಕಾರಣ ಸೋಮವಾರ ಭಾರೀ ಪ್ರಮಾಣದ ವಿದ್ಯುತ್‌ಗೆ ಬೇಡಿಕೆ ವ್ಯಕ್ತವಾದ ಕಾರಣ ದೇಶದ ಉತ್ತರ ವಲಯದಲ್ಲಿ ಹಲವು ಕಡೆ ವಿದ್ಯುತ್‌ ಲೈನ್‌ ಟ್ರಿಪ್‌ ಆದ ಘಟನೆ ನಡೆದಿದೆ.

ನವದೆಹಲಿ: ತಾಪಮಾನ ಏರಿಕೆ ಕಾರಣ ಸೋಮವಾರ ಭಾರೀ ಪ್ರಮಾಣದ ವಿದ್ಯುತ್‌ಗೆ ಬೇಡಿಕೆ ವ್ಯಕ್ತವಾದ ಕಾರಣ ದೇಶದ ಉತ್ತರ ವಲಯದಲ್ಲಿ ಹಲವು ಕಡೆ ವಿದ್ಯುತ್‌ ಲೈನ್‌ ಟ್ರಿಪ್‌ ಆದ ಘಟನೆ ನಡೆದಿದೆ.

ಸೋಮವಾರ ವಿದ್ಯುತ್‌ ಬೇಡಿಕೆ 89.4 ಗಿಗಾವ್ಯಾಟ್‌ನಷ್ಟಿದ್ದರೆ, ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ 16.5 ಗಿಗಾವ್ಯಾಟ್‌ನಷ್ಟಿತ್ತು. ಪರಿಣಾಮ ಹಲವು ಕಡೆ ವಿದ್ಯುತ್‌ ಲೈನ್‌ ಟ್ರಿಪ್‌ ಆದವು. ಹೀಗಾಗಿ ಹರ್ಯಾಣ, ದೆಹಲಿ, ಪಂಜಾಬ್‌, ಉತ್ತರಾಖಂಡ, ಹಿಮಾಚಲ, ಉತ್ತರಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನ್ಲಲಿ ಸರ್ಕಾರಿ ಕಚೇರಿಗಳ ಅವಧಿಯನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ವಾಣಿಜ್ಯ ಉದ್ಯಮಗಳನ್ನು ಸಂಜೆ 7 ಗಂಟೆಗೆ ಮುಚ್ಚುವ ಆದೇಶ ಹೊರಡಿಸಬೇಕೆಂದು ಅಖಿಲ ಭಾರತ ಪವರ್‌ ಎಂಜಿನಿಯರ್‌ ಫೆಡರೇಷನ್‌ ಸರ್ಕಾರಕ್ಕೆ ಸಲಹೆ ನೀಡಿದೆ.

ಉಷ್ಣದಿಂದ ಗಾಜಿನ ಬಳೆ ಉದ್ಯಮ ಅಪಾಯದಲ್ಲಿ

ಉತ್ತರ ಭಾರತದ ಉಷ್ಣಮಾರುತದಿಂದ ಗಾಜಿನ ಬಳೆ ತಯಾರಿಕೆಯ ಕೇಂದ್ರ ಸ್ಥಳ ಎಂದೇ ಪರಿಗಣಿತವಾದ ಉತ್ತರ ಪ್ರದೇಶದ ‘ಗ್ಲಾಸ್‌ ಸಿಟಿ’ ಫಿರೋಜಾಬಾದ್‌ನ ಗಾಜಿನ ಬಳೆ ತಯಾರಿಕಾ ಘಟಕಗಳ ನೌಕರರಿಗೆ ಸಂಕಷ್ಟ ಎದುರಾಗಿದೆ. 5 ಲಕ್ಷ ಜನರಿಗೆ ಉದ್ಯೋಗ ನೀಡುವ ರೂ 1,000 ಕೋಟಿ ಉದ್ಯಮದ ಭವಿಷ್ಯದ ಮೇಲೆ ಬಿಸಿಲು ಪರಿಣಾಮ ಬೀರುತ್ತಿದೆ.ಈ ಘಟಕಗಳಲ್ಲಿ ಗಾಜನ್ನು ಕರಗಿಸಿ ನಂತರ ಅವುಗಳಿಗೆ ಅಚ್ಚುಗಳ ಮೂಲಕ ಬಳೆ ಸ್ವರೂಪ ನೀಡಲಾಗುತ್ತದೆ. ಈ ಕಾರ್ಯಾಗಾರಗಳೊಳಗಿನ ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುತ್ತದೆ. ಈಗ ಹೊರಗಿನ ತಾಪಮಾನವೂ 45 ಡಿಗ್ರಿ ದಾಟಿರುವ ಕಾರಣ ಘಟಕಗಳಲ್ಲಿ ಕೆಲಸ ಮಾಡುವುದೇ ದುಸ್ತರವಾಗಿದೆ.

‘ಬಳೆ ಕಾರ್ಖಾನೆಗಳು, ಪ್ರಧಾನವಾಗಿ ಸಣ್ಣ-ಪ್ರಮಾಣದ ಘಟಕಗಳು, ಸರಿಯಾದ ಗಾಳಿ ಮತ್ತು ತಂಪಾಗಿಸುವ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಹೀಗಾಗಿ ನಮಗೆ ಪದೇ ಪದೇ ನಿರ್ಜಲೀಕರಣ ಸಮಸ್ಯೆ ಆಗುತ್ತಿದೆ. ಇದು ನರಕದಲ್ಲಿ ಕೆಲಸ ಮಾಡುವಂತಿದೆ. 1 ತಿಂಗಳಲ್ಲಿ 2 ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆರೋಗ್ಯ ಹದಗೆಡುತ್ತಿದೆ’ ಎಂದು ನೌಕರರೊಬ್ಬರು ಹೇಳಿದರು.

ಸ್ಪೈಸ್‌ಜೆಟ್‌ ವಿಮಾನದಲ್ಲಿ 1 ತಾಸು ಎಸಿ ಆಫ್‌: ಪ್ರಯಾಣಿಕರು ಸುಸ್ತು

ನವದೆಹಲಿ: ದಿಲ್ಲಿ ಸೇರಿ ಉತ್ತರ ಭಾರತದಲ್ಲಿ ತಾಪಮಾನ 45 ಡಿಗ್ರಿ ಮೀರಿರುವ ನಡುವೆ ಸ್ಪೈಸ್‌ಜೆಟ್‌ ವಿಮಾನದಲ್ಲಿ 1 ತಾಸು ಎಸಿ ಹಾಕದೇ ಪ್ರಯಾಣಿಕರನ್ನು ಸತಾಯಿಸಲಾಯಿತು ಎಂಬ ಆರೋಪ ಕೇಳಿಬಂದಿದೆ. ದಿಲ್ಲಿಯಿಂದ ದರ್ಭಂಗಾಗೆ ಹೋಗುವ ವಿಮಾನದಲ್ಲಿ ಈ ಘಟನೆ ನಡೆದಿದೆ.ದಿಲ್ಲಿಯಿಂದ ಬೆಳಗ್ಗೆ 11ಕ್ಕೆ ಹೊರಡಬೇಕಿದ್ದ ವಿಮಾನಕ್ಕೆ 10 ಗಂಟೆಯಿಂದಲೇ ಚೆಕ್‌ ಇನ್‌ಗೆ ಅವಕಾಶ ಕಲ್ಪಿಸಲಾಯಿತು. ವಿಮಾನದೊಳಗೆ 40 ಡಿಗ್ರಿ ತಾಪಮಾನವಿದ್ದರೂ ಸಿಬ್ಬಂದಿ ಹವಾನಿಯಂತ್ರಕವನ್ನು ಆನ್‌ ಮಾಡಲಿಲ್ಲ. ಇದರಿಂದ ಉಸಿರುಕಟ್ಟುವ ವಾತಾವರಣ ನಿರ್ಮಾಣ ಆಗಿತ್ತು. ಒಂದು ಗಂಟೆಯ ಬಳಿಕ ವಿಮಾನ ಹೊರಟಾಗ ಹವಾನಿಯಂತ್ರಣವನ್ನು ಚಾಲೂ ಮಾಡಲಾಯಿತು ಎಂದು ಪ್ರಯಾಣಿಕ ರೋಹನ್‌ ಕುಮಾರ್‌ ಹೇಳಿದ್ದಾರೆ.ಈ ಬಗ್ಗೆ ಸ್ಪೈಸ್‌ಜೆಟ್ ಪ್ರತಿಕ್ರಿಯಿಸಿ ಅತಿಯಾದ ತಾಪದಿಂದ ಎಸಿ ಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡಿತ್ತು ಎಂದು ವಿಷಾದಿಸಿದೆ.

ಉಷ್ಣಮಾರುತದ ಕಾರಣ ಎಸಿಗೆ ಡಿಮ್ಯಾಂಡ್‌ನವದೆಹಲಿ: ಉಷ್ಣಮಾರುತ ಹೆಚ್ಚಾದ ಬೆನ್ನಲ್ಲೇ ದೆಹಲಿ ಸೇರಿದಂತೆ ದೇಶದ ಉತ್ತರ, ಪೂರ್ವ, ಈಶಾನ್ಯದ ಹಲವು ರಾಜ್ಯಗಳಲ್ಲಿ ಹವಾನಿಯಂತ್ರಣ ಉಪಕರಣಗಳಿಗೆ ಈ ಹಿಂದೆಂದೂ ಕಂಡುಕೇಳರಿಯದ ರೀತಿಯ ಬೇಡಿಕೆ ವ್ಯಕ್ತವಾಗಿದೆ.ಅದರೆ ಅಗತ್ಯ ಪ್ರಮಾಣದ ಹವಾನಿಯಂತ್ರಣ ಉಪಕರಣಗಳು ಸದ್ಯ ದೇಶದಲ್ಲಿ ಲಭ್ಯ ಇಲ್ಲದ ಕಾರಣ, ಹಲವು ಕಂಪನಿಗಳು ವಿಮಾನಗಳ ಮೂಲಕ ವಿದೇಶಗಳಿಂದ ಬಿಡಿಭಾಗ ಆಮದು ಮಾಡಿಕೊಂಡು, ಉತ್ಪನ್ನ ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಎಸಿಗಳಲ್ಲಿ ಬಳಸಲಾಗುವ ಕಂಪ್ರೆಸ್ಸರ್‌, ಕ್ರಾಸ್‌ಫ್ಲೋ ಫ್ಯಾನ್‌/ ಮೋಟಾರ್‌, ಪಿಸಿಬಿ ಸರ್ಕಿಟ್‌ ಮೊದಲಾದವುಗಳನ್ನು ಚೀನಾ, ಜಪಾನ್‌, ತೈವಾನ್‌, ಥಾಯ್ಲೆಂಡ್‌ನಿಂದ ವಿಮಾನಗಳ ಮೂಲಕ ಆಮದು ಮಾಡಿಕೊಳ್ಳಲಾಗಿದೆ. ಸಾಂಪ್ರದಾಯಿಕ ಮಾರ್ಗಗಳಲ್ಲಿ ಇವುಗಳ ಆಮದಿಗೆ ಸಾಕಷ್ಟು ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಉತ್ಪಾದಕರು ವಿಮಾನಗಳಿಗೆ ಮೊರೆ ಹೋಗಿದ್ದಾರೆ.ಅಲ್ಲದೆ ಹಲವೆಡೆ ವ್ಯಾಪಾರಿಗಳು ಹವಾನಿಯಂತ್ರಣ ಉಪಕರಣಗಳ ಬೆಲೆಯನ್ನು ಶೇ.5-ಶೇ.10ರವರೆಗೂ ಹೆಚ್ಚಳ ಮಾಡಿದ್ದಾರೆ.ಹವಾ ನಿಯಂತ್ರಣ ಉಪಕರಣಗಳ ಮಾರಾಟ ಕಳೆದ ಮೂರು ತಿಂಗಳಲ್ಲಿ ಶೇ.50ರಷ್ಟು ದಾಖಲೆ ಏರಿಕೆ ಕಂಡಿದೆ.

ದಿಲ್ಲಿಯಲ್ಲಿ 8656 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ: ಸಾರ್ವಕಾಲಿಕ ಗರಿಷ್ಠ  

ನವದೆಹಲಿ: ಉಷ್ಣಮಾರುತದ ದಾಳಿಗೆ ಸಿಲುಕಿರುವ ದೆಹಲಿಯಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 8656 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ವ್ಯಕ್ತವಾಗಿದೆ. ಇದು ದೆಹಲಿಯಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಬೇಡಿಕೆಯಾಗಿದೆ. ಮಂಗಳವಾರ 8647 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಬಂದಿತ್ತು. ಅದು ಈ ಹಿಂದಿನ ಸಾರ್ವಕಾಲಿಕ ಗರಿಷ್ಠವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ದೆಹಲಿಯಲ್ಲಿ ಕನಿಷ್ಠ ತಾಪಮಾನವೇ 35.2 ಡಿಗ್ರಿಯಷ್ಟಿತ್ತು. ಇದು ಕಳೆದ 12 ವರ್ಷಗಳಲ್ಲೇ ಗರಿಷ್ಠ ಮತ್ತು ಸರಾಸರಿಗಿಂತ 8 ಡಿಗ್ರಿಯಷ್ಟು ಹೆಚ್ಚು.

ದಿಲ್ಲಿ ನೀರಿನ ಸಮಸ್ಯೆ ಬಗೆಹರಿಯದಿದ್ರೆ 21ರಿಂದ ಉಪವಾಸ: ಸಚಿವೆ ಆತಿಶಿ

ಪಿಟಿಐ ನವದೆಹಲಿಬೇಸಿಗೆಯಲ್ಲಿ ದಿಲ್ಲಿಯಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಜಲ ಸಚಿವೆ ಆತಿಶಿ, ಸಮಸ್ಯೆ ಬರೆಹರೆಯದಿದ್ದರೆ ಜೂ.21ರಿಂದ ಅನಿರ್ದಿಷ್ಟ ಉಪವಾಸ ನಡೆಸುವುದಾಗಿ ಎಚ್ಚರಿಸಿದ್ದಾರೆ. ‘ದಿಲ್ಲಿಗೆ ಸಿಗಬೇಕಾದ ನೀರಿನ ಪಾಲನ್ನು ಹರಿಯಾಣ ಬಿಡುಗಡೆ ಮಾಡದೆ ಸಮಸ್ಯೆ ಉಂಟಾಗಿದೆ. ಪ್ರತಿನಿತ್ಯ ಹರಿಸಬೇಕಾದ 613 ದಶಲಕ್ಷ ಗ್ಯಾಲನ್‌ನಲ್ಲಿ ಕೇವಲ 513 ದಶಲಕ್ಷ ಗ್ಯಾಲನ್‌ ನೀರು ಬಿಡುಗಡೆಯಾಗಿದ್ದು, 28 ಲಕ್ಷ ಜನರಿಗೆ ನೀರಿಲ್ಲದಂತಾಗಿದೆ’ ಎಂದು ಆತಿಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಬಗ್ಗೆ ಪ್ರಧಾನಿಗೆ ಬರೆದ ಪತ್ರದಲ್ಲಿ ಸಮಸ್ಯೆಯನ್ನು ಎರಡು ದಿನದಲ್ಲಿ ಪರಿಹರಿಸದಿದ್ದರೆ ಜೂ.21ರಿಂದ ಅನಿರ್ದಿಷ್ಟ ಉಪವಾಸ ಕೈಗೊಳ್ಳುವುದಾಗಿ ಬರೆದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ