ಮುಂಬೈ: ಹಾಡಹಗಲೇ ಮುಂಬೈನಲ್ಲಿ 17 ಮಕ್ಕಳು ಸೇರಿದಂತೆ 19 ಜನರನ್ನು ವ್ಯಕ್ತಿಯೊಬ್ಬ ಪೊವಾಯ್‌ನ ಸ್ಟುಡಿಯೋದಲ್ಲಿ ಒತ್ತೆ ಇಟ್ಟುಕೊಂಡು ಹೈಡ್ರಾಮಾ ಸೃಷ್ಟಿಸಿದ, ಬಳಿಕ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಆತಂಕಕಾರಿ ಘಟನೆಯೊಂದು ಗುರುವಾರ ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್, ಆತನ ವಶದಲ್ಲಿದ್ದ ಎಲ್ಲಾ 19 ಜನರು ಯಾವುದೇ ತೊಂದರೆ ಇಲ್ಲದೆ ಪಾರಾಗಿ ಬಂದಿದ್ದಾರೆ.ಘಟನೆ ಹಿನ್ನೆಲೆ:
ವೆಬ್ ಸೀರೀಸ್ ಒಂದರ ಆಡಿಷನ್‌ಗೆಂದು ಆರೋಪಿ ರೋಹಿತ್ ಆರ್ಯ(38) 17 ಮಕ್ಕಳನ್ನು ಆರ್‌ಎ ಸ್ಟುಡಿಯೋಗೆ ಕರೆಸಿಕೊಂಡಿದ್ದ. ಆದರೆ ಬಳಿಕ ಅವರನ್ನು ಹೊರಗೆ ಬಿಟ್ಟಿರಲಿಲ್ಲ. ಬದಲಿಗೆ ವಿಡಿಯೋವೊಂದನ್ನು ಮಾಡಿ ಅದರಲ್ಲಿ, ‘ನಾನು ಕೆಲ ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದೇನೆ. ನಾನು ಉಗ್ರನಲ್ಲ, ದುಡ್ಡೂ ಬೇಡ. ಬದಲಿಗೆ ನನಗೆ ಕೆಲವರೊಂದಿಗೆ ಮಾತನಾಡಿ ಕೆಲ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕು’ ಎಂದಿದ್ದಾನೆ.
ಜತೆಗೆ, ‘ಯಾರಾದರೂ ಇದಕ್ಕೆ ಅಡ್ಡಿಪಡಿಸಿದರೆ ಸ್ಟುಡಿಯೋಗೆ ಬೆಂಕಿ ಹಚ್ಚಿಬಿಡುತ್ತೇನೆ. ಅದರಿಂದ ನಾನು ಸಾಯುತ್ತೇನೋ ಇಲ್ಲವೋ ಗೊತ್ತಿಲ್ಲ, ಮಕ್ಕಳಿಗಂತೂ ಹಾನಿಯಾಗಿ ಆಘಾತಕ್ಕೊಳಗಾಗುತ್ತಾರೆ. ಅದಕ್ಕೆ ನಾನು ಜವಾಬ್ದಾರನಾಗಿರುವುದಿಲ್ಲ’ ಎಂದೂ ಬೆದರಿಸಿದ್ದಾನೆ. ಇದೇ ವೇಳೆ, ‘ನನ್ನ ಬೇಡಿಕೆ ಈಡೇರಿದರೆ, ನಾನು ಇದೇ ಮಕ್ಕಳ ಜತೆಗೆ ಅಂದುಕೊಂಡಿರುವ ಕಾರ್ಯಕ್ರಮ ಚಿತ್ರೀಕರಿಸುತ್ತೇನೆ’ ಎಂದೂ ಹೇಳಿದ್ದ.
ಈ ವಿಷಯ ಗುರುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪೊಲೀಸರಿಗೆ ತಿಳಿಸಿದ್ದು, ಅವರು ಆರ್ಯನೊಂದಿಗೆ ಮಾತಾಡಿ ಸಂಧಾನಕ್ಕೆ ಯತ್ನಿಸಿದ್ದಾರೆ. ಆದರೆ ಆತ ಅದ್ಯಾವುದಕ್ಕೂ ಒಪ್ಪದಾಗ ಕಾರ್ಯಾಚರಣೆಗೆ ಇಳಿದಿದ್ದಾರೆ. ಆ ವೇಳೆ ಆರೋಪಿ ಗುಂಡು ಹಾರಿಸಿದ ಪರಿಣಾಮ ಪೊಲೀಸರೂ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಘಾಸಿಗೊಂಡವನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಮಕ್ಕಳನ್ನು ಆರ್ಯ ಕೂಡಿಹಾಕಿರುವ ವಿಷಯ ತಿಳಿಯುತ್ತಿದ್ದಂತೆ 8 ಕಮಾಂಡೋಗಳ ತ್ವರಿತ ಪ್ರತಿಕ್ರಿಯೆ ತಂಡ ಸ್ಟುಡಿಯೋ ತಲುಪಿ, ಸ್ನಾನಗೃಹದ ಮೂಲಕ ಒಳಪ್ರವೇಶಿಸಿತು. ಮೊದಲು ಒಳಹೋದ ಕಮಾಂಡರ್, ಆರ್ಯನ ಜತೆ ಒಪ್ಪಂದ ಮಾಡಿಕೊಳ್ಳಲು ಹಲವು ವಿಧದಲ್ಲಿ ಮಾಡಿದ ಯತ್ನ ಫಲಿಸಲಿಲ್ಲ. ಸಾಲದ್ದಕ್ಕೆ, ತನ್ನ ಕೈಯ್ಯಲ್ಲಿ ಗನ್, ರಾಸಾಯನಿಕ ಹಾಗೂ ಲೈಟರ್ ಹಿಡಿದಿದ್ದ ಆರೋಪಿ, ಪೊಲೀಸರು ಒಳಬಂದರೆ ಸ್ಟುಡಿಯೋಗೆ ಬೆಂಕಿ ಹಚ್ಚುವುದಾಗಿ ಬೆದರಿಸಿದ. ಬಳಿಕ ತನ್ನ ಕೈಲಿದ್ದ ಗನ್‌ನಿಂದ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಕಮಾಂಡೋ ಕೂಡ ಗುಂಡು ಹಾರಿಸಿದ್ದು, ಆರ್ಯನಿಗೆ ಘಾಸಿಯಾಗಿದೆ. ಆ ವೇಳೆ, ಆತನ ಬಳಿ ಇದ್ದುದು ಹೆಚ್ಚೇನೂ ಹಾನಿ ಮಾಡದ ಏರ್‌ಗನ್ ಎಂದು ತಿಳಿದಿದೆ. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ.
ದೀಪಕ್ ಕೇಸರ್ಕರ್ ಮಹಾರಾಷ್ಟ್ರದ ಶಿಕ್ಷಣ ಸಚಿವರಾಗಿದ್ದ ವೇಳೆ, ಆರೋಪಿ ಆರ್ಯನಿಗೆ ಶಿಕ್ಷಣಕ್ಕೆ ಸಂಬಂಧಿಸಿದ್ದ 2 ಕೋಟಿ ರು.ನ ಯೋಜನೆಯ ಟೆಂಡರ್ ಕೊಡಲಾಗಿತ್ತು. ಆದರೆ ಕೊನೆಗೆ ಅದಕ್ಕಾಗಿ ಹಣ ಪಾವತಿಯಾಗಿರಲಿಲ್ಲ ಹಾಗೂ ಆರ್ಯನಿಗೆ ಅದರ ಶ್ರೇಯವನ್ನೂ ಕೊಟ್ಟಿರಲಿಲ್ಲ ಎನ್ನಲಾಗಿದೆ. ಈ ಸಂಬಂಧರಾತ ಕೇಸರ್ಕರ್‌ರ ಮನೆ ಮುಂದೆ ಹಲವು ಬಾರಿ ಉಪವಾಸ ಹಾಗೂ ಪ್ರತಿಭಟನೆ ಮಾಡಿದ್ದ. ಅದು ಫಲಿಸದಿದ್ದಾಗ, ‘ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕೇಸರ್ಕರ್ ಹಾಗೂ ಇತರೆ ಕೆಲ ಅಧಿಕಾರಿಗಳೇ ಹೊಣೆ’ ಎಂದಿದ್ದ. ಈಗ ಆತ ಮಾತನಾಡಬೇಕು ಎನ್ನುತ್ತಿರುವುದೂ ಅವರೊಂದಿಗೇ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಸರ್ಕರ್ ಪ್ರತಿಕ್ರಿಯೆ:
ಆರ್ಯ ಸಾವಿನ ಬೆನ್ನಲ್ಲೇ ಮಾತನಾಡಿದ ಶಾಸಕ ಕೇಸರ್ಕರ್, ‘ಆತ ಸ್ವಚ್ಛತಾ ಮಾನಿಟರ್ ಎಂಬ ಯೋಜನೆ ರೂಪಿಸಿದ್ದ ಹಾಗೂ ಅದಕ್ಕೆ ಬದಲಾಗಿ ಇಲಾಖೆಯಿಂದ ಹಣವನ್ನೂ ಪಡೆದಿದ್ದ. ಸಮಸ್ಯೆಯಿದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಒತ್ತೆಯಾಳುಗಳನ್ನು ಇಟ್ಟುಕೊಂಡಲ್ಲ’ ಎಂದಿದ್ದಾರೆ.