ನವದೆಹಲಿ: ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಹಿಳಾ ಏಕದಿನ ವಿಶ್ವಕಪ್‌ನ ಪಂದ್ಯಗಳನ್ನು ಬೆಂಗಳೂರಿನಿಂದ ಎತ್ತಂಗಡಿ ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ನವಿ ಮುಂಬೈನಲ್ಲಿರುವ ಡಿ.ವೈ.ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿರುವುದಾಗಿ ಶುಕ್ರವಾರ ಐಸಿಸಿ ಅಧಿಕೃತವಾಗಿ ಘೋಷಿಸಿದೆ.
ನವಿ ಮುಂಬೈನಲ್ಲಿ ಉದ್ಘಾಟನಾ ಪಂದ್ಯ, ಸೆಮಿಫೈನಲ್ ಹಾಗೂ ಫೈನಲ್ (ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸಿದರೆ, ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ) ಸೇರಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಫೈನಲ್ ನ.2ಕ್ಕೆ ನಿಗದಿಯಾಗಿದೆ. ಸ್ಥಳಾಂತರ ಏಕೆ?: ಐಸಿಸಿ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸುವ ಯಾವುದೇ ಕ್ರೀಡಾಂಗಣವನ್ನು ಟೂರ್ನಿ ಆರಂಭಗೊಳ್ಳುವ ಒಂದು ತಿಂಗಳು ಮೊದಲು ಆಯೋಜಕರಿಗೆ ಬಿಟ್ಟುಕೊಡಬೇಕು. ಈ ಹಿನ್ನೆಲೆಯಲ್ಲಿ ಆಗಸ್ಟ್ 2ನೇ ವಾರದೊಳಗೆ ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆಯುವಂತೆ ಬಿಸಿಸಿಐ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಸೂಚಿಸಿತ್ತು. ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಘಟನೆ ಸಂಭವಿಸಿ, 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯ ವರದಿ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣ ಅಸುರಕ್ಷಿತ ಎಂದು ತಿಳಿಸಲಾಗಿದೆ. ಹೀಗಾಗಿ, ಸರ್ಕಾರ ಯಾವುದೇ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿಲ್ಲ.
ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ, ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಸೆ.30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ನೀಡಲಿವೆ. 8 ತಂಡಗಳು ಸೆಣಸಲಿರುವ ವಿಶ್ವಕಪ್‌ನ ಬಹುತೇಕ ಪಂದ್ಯಗಳು ಭಾರತದ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗುತ್ತಿದೆ.
ನವಿ ಮುಂಬೈ ಜೊತೆ ಗುವಾಹಟಿ, ಇಂದೋರ್ ಹಾಗೂ ವಿಶಾಖಪಟ್ಟಣಂ ಆತಿಥ್ಯ ಅವಕಾಶ ಪಡೆದಿವೆ. ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಭಾರತದ ವೇಳಾಪಟ್ಟಿ
ದಿನಾಂಕಎದುರಾಳಿಸ್ಥಳ
ಸೆ.30 ಶ್ರೀಲಂಕಾ ನವಿ ಮುಂಬೈ
ಅ.5 ಪಾಕಿಸ್ತಾನ ಕೊಲಂಬೊ
ಅ.9 ದ.ಆಫ್ರಿಕಾ ವಿಶಾಖಪಟ್ಟಣಂ
ಅ.12 ಆಸ್ಟ್ರೇಲಿಯಾ ವಿಶಾಖಪಟ್ಟಣಂ
ಅ.19 ಇಂಗ್ಲೆಂಡ್ ಇಂದೋರ್
ಅ.23 ನ್ಯೂಜಿಲೆಂಡ್ ಗುವಾಹಟಿ
ಅ.26 ಬಾಂಗ್ಲಾದೇಶ ನವಿ ಮುಂಬೈ
*ಎಲ್ಲ ಪಂದ್ಯಗಳು ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿವೆ.