ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಕಾಯ್ದೆ ರದ್ದು ಮಾಡಿರುವುದು ಬಾಲ್ಯವಿವಾಹ ರದ್ದತಿಗೆ ಮಹತ್ವದ ಹೆಜ್ಜೆ ಎಂದು ಸಿಎಂ ಹಿಮಂತ ತಿಳಿಸಿದ್ದಾರೆ.
ಗುವಾಹಟಿ: ಶುಕ್ರವಾರ ಅಸ್ಸಾಂ ಬಿಜೆಪಿ ಸರ್ಕಾರವು ಮುಸ್ಲಿಂ ವಿವಾಹ ಕಾಯ್ದೆಯನ್ನು ರದ್ದು ಮಾಡಿ, ‘ಎಲ್ಲ ಮುಸ್ಲಿಮರು ಇನ್ನು ಮುಂದೆ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ನಿರ್ಣಯ ಕೈಗೊಂಡಿರುವುದು ರಾಜ್ಯದಲ್ಲಿನ ಬಾಲ್ಯವಿವಾಹ ಪಿಡುಗಿಗೆ ಬ್ರೇಕ್ ಹಾಕಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಸಚಿವ ಜಯಂತ ಮಲ್ಲ ಬರುವಾ, ‘ಈವರೆಗೆ ಇಲ್ಲಿ ಸಾವಿರಾರು ಬಾಲ್ಯ ವಿವಾಹಗಳು ಆಗಿವೆ. ಈಗ ನಮ್ಮ ಕ್ರಮವು ಬಾಲ್ಯವಿವಾಹ ನಿರ್ಮೂಲನೆಗೆ ನೆರವು ನೀಡಲಿದೆ’ ಎಂದಿದ್ದಾರೆ.
ಬಾಲ್ಯವಿವಾಹಕ್ಕೆ ಬ್ರೇಕ್ ಹೇಗೆ?
ಅಸ್ಸಾಂನಲ್ಲಿ ಮುಸ್ಲಿಮರು ವಿವಾಹ ನೋಂದಣಿ ಮಾಡಿಕೊಳ್ಳಲು ಬ್ರಿಟಿಷ್ ಕಾಲದಿಂದಲೂ ಮುಸ್ಲಿಂ ವಿವಾಹ ಕಾಯ್ದೆ ಅಸ್ತಿತ್ವದಲ್ಲಿದೆ. ಈ ಕಾಯ್ದೆ ಪ್ರಕಾರ ಮುಸ್ಲಿಮರ ವಿವಾಹ ನೋಂದಣಿ ಕಡ್ಡಾಯವೇನೂ ಅಲ್ಲ.
ಅಲ್ಲದೆ, 18 ತುಂಬದ ಮುಸ್ಲಿಂ ಬಾಲಕಿಯರು ಹಾಗೂ 21 ತುಂಬದ ಮುಸ್ಲಿಂ ಯುವಕರು ವಿವಾಹವಾದರೆ, ಅವರ ಮದುವೆಯನ್ನು ನಿರಾತಂಕವಾಗಿ ನೋಂದಣಿ ಮಾಡಿಕೊಳ್ಳಬಹುದು.
ಇದರಿಂದ ಅಸ್ಸಾಂ ಮುಸ್ಲಿಮರಲ್ಲಿ ಬಾಲ್ಯವಿವಾಹ ಪಿಡುಗು ತಾರಕಕ್ಕೇರಿದೆ ಎಂಬ ದೂರುಗಳಿದ್ದವು. ಆದರೆ, ಈಗ ಸಂಪುಟದ ನಿರ್ಧಾರದಂತೆ ವಿಧಾನಸಭೆಯು ಮುಸ್ಲಿಂ ವಿವಾಹ ಕಾಯ್ದೆಯನ್ನು ರದ್ದುಗೊಳಿಸಿದರೆ ಇನ್ನು ವಿಶೇಷ ವಿವಾಹ ಕಾಯ್ದೆಯಡಿ ಮುಸ್ಲಿಮರು ಮದುವೆ ನೋಂದಣಿ ಮಾಡಿಕೊಳ್ಳಬೇಕು.
21 ತುಂಬದ ಮುಸ್ಲಿಂ ಯುವಕರು ಹಾಗೂ 18 ತುಂಬದ ಮುಸ್ಲಿಂ ಯುವತಿಯರ ಮದುವೆ ನಿಷೇಧವಾಗಲಿದೆ. ಹೀಗಾಗಿ ಮುಸ್ಲಿಮರಲ್ಲಿ ತಂತಾನೇ ಬಾಲ್ಯವಿವಾಹಕ್ಕೆ ಬ್ರೇಕ್ ಬೀಳಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ 4000 ಜನರ ಬಂಧನವಾಗಿತ್ತು:2011ರ ಜನಗಣತಿಯ ಪ್ರಕಾರ, ಮುಸ್ಲಿಮರು ಅಸ್ಸಾಂನ ಜನಸಂಖ್ಯೆಯ ಶೇ.34ರಷ್ಟಿದ್ದಾರೆ.
ಅರ್ಥಾತ್ ಒಟ್ಟು 3.12 ಕೋಟಿ ಜನಸಂಖ್ಯೆಯಲ್ಲಿ 1.06 ಕೋಟಿಯಷ್ಟಿದ್ದಾರೆ.ಕಳೆದ ವರ್ಷ ಇಲ್ಲಿ ಬಾಲ್ಯವಿವಾಹದ ವಿರುದ್ಧ ಸರ್ಕಾರ ಸಮರ ಸಾರಿ, ಇದಕ್ಕೆ ಪ್ರೇರಣೆ ನೀಡಿದ 4000ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು.