ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ 97ನೇ ಆಸ್ಕರ್, ಪ್ರದಾನ ಇಲ್ಲಿನ ಡಾಲ್ಬಿ ಥಿಯೇಟರ್‌ನಲ್ಲಿ ಭಾರತೀಯ ಕಾಲಮಾನ ಸೋಮವಾರ ನಡೆದಿದ್ದು, ಸಿಂಡ್ರೆಲ್ಲಾ ಕಥೆ ಆಧಾರಿತ ‘ಅನೋರಾ’ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ ಒಲಿದಿದೆ.
ಲಾಸ್ ಏಂಜಲಿಸ್: ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ 97ನೇ ಆಸ್ಕರ್, ಪ್ರದಾನ ಇಲ್ಲಿನ ಡಾಲ್ಬಿ ಥಿಯೇಟರ್‌ನಲ್ಲಿ ಭಾರತೀಯ ಕಾಲಮಾನ ಸೋಮವಾರ ನಡೆದಿದ್ದು, ಸಿಂಡ್ರೆಲ್ಲಾ ಕಥೆ ಆಧಾರಿತ ‘ಅನೋರಾ’ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ ಒಲಿದಿದೆ. ಜೊತೆಗೆ, ಇದೇ ಚಿತ್ರಕ್ಕಾಗಿ ನಿರ್ದೇಶಕ ಶಾನ್ ಬೇಕರ್‌ಗೆ ಉತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ.
ಅನೋರಾ ಚಿತ್ರವನ್ನು ಕೇ 52 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ನರ್ತಕಿಯೊಬ್ಬಳು ರಷ್ಯಾದ ಪ್ರಭಾವಿಯೊಬ್ಬನ ಮಗನೊಂದಿಗೆ ಓಡಿಹೋಗುವ ಕಥೆಯಾಗಿದೆ.
ಉಳಿದಂತೆ, ‘ಅನೋರಾ’ ಚಿತ್ರದ ನಾಯಕಿ ಮೈಕಿ ಮ್ಯಾಡಿಸನ್ ಉತ್ತಮ ನಟಿ ಹಾಗೂ ‘ದಿ ಬ್ರೂಟಲಿಸ್ಟ್’ ಚಿತ್ರದ ಏಡ್ರಿಯೆನ್ ಬ್ರೋಡಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಅನೋರಾಗೇ 5 ಪ್ರಶಸ್ತಿ: ಉತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಅನೋರಾ ಚಿತ್ರಕ್ಕೆ, ಉತ್ತಮ ನಿರ್ದೇಶ, ಉತ್ತಮ ನಟಿ, ಉತ್ತಮ ಮೂಲ ಚಿತ್ರಕಥೆ ಹಾಗೂ ಉತ್ತಮ ಎಡಿಟಿಂಗ್ ಪ್ರಶಸ್ತಿಗಳನ್ನೂ ಏಕಕಾಲಕ್ಕೆ ಬಾಚಿಕೊಂಡಿದೆ.
ಭಾರತದ ಅನುಜಾಗೆ ಒಲಿಯಲ್ಲಿ ಪ್ರಶಸ್ತಿ
ಅತ್ಯುತ್ತಮ ಲೈವ್ ಆಕ್ಷನ್ ವರ್ಗದಲ್ಲಿ ಸ್ಪರ್ಧಿಸಿದ್ದ ಭಾರತದ ಕಿರುಚಿತ್ರ ಅನುಜಾ ಆಸ್ಕರ್ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದೆ. ಬದಲಿಗೆ ‘ಐ ಆ್ಯಮ್ ನಾಟ್ ಅ ರೋಬೋಟ್’ ಎಂಬ ವಿಜ್ಞಾನ ಚಿತ್ರಕ್ಕೆ ಆ ಪ್ರಶಸ್ತಿ ಲಭಿಸಿದೆ. ಅದಕ್ಕೂ ಮೊದಲು ಆಸ್ಕರ್‌ಗೆ ಆಯ್ಕೆಯಾಗಿದ್ದ ಬಾಲಿವುಡ್ ಸಿನಿಮಾ ಲಾಪತಾ ಲೇಡಿಸ್ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತ್ತು.
ಆಸ್ಕರ್‌ನಲ್ಲಿ ಮೊಳಗಿದ ನಮಸ್ಕಾರ ಆಸ್ಕರ್ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ಕಾನನ್ ಒಬ್ರೇನ್ ‘ನಮಸ್ಕಾರ’ ಎನ್ನುವ ಮೂಲಕ ಎಲ್ಲರನ್ನೂ ಸ್ವಾಗತಿಸಿದ್ದು ಗಮನ ಸೆಳೆದಿದೆ. ‘ಭಾರತೀಯರಿಗೆ ನಮಸ್ಕಾರ. ಭಾರತದಲ್ಲಿ ಈಗ ಬೆಳಗಾಗಿರುವ ಕಾರಣ ಎಲ್ಲರೂ ಆಸ್ಕರ್‌ನೊಂದಿಗೆ ತಿಂಡಿ ಸೇವಿಸುತ್ತಿದ್ದೀರ ಎಂದು ಭಾವಿಸುತ್ತೇನೆ’ ಎಂದು ಅವರು ಹಿಂದಿಯಲ್ಲಿ ಮಾತನಾಡಿದರು. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.