ದಾಳಿಕೋರ ಅಲೆನ್‌ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ!

KannadaprabhaNewsNetwork |  
Published : Apr 27, 2026, 03:00 AM ISTUpdated : Apr 27, 2026, 04:55 AM IST
Alen

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಲ್ಗೊಂಡಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದವನನ್ನು ಕೋಲ್‌ ಥಾಮಸ್‌ ಅಲೆನ್‌ (31) ಎಂದು ಗುರುತಿಸಲಾಗಿದ್ದು, ಈತ ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌ ಹಾಗೂ ಸ್ವತಂತ್ರ ಗೇಮರ್‌ ಎಂದು ತಿಳಿದುಬಂದಿದೆ. 

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಲ್ಗೊಂಡಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದವನನ್ನು ಕೋಲ್‌ ಥಾಮಸ್‌ ಅಲೆನ್‌ (31) ಎಂದು ಗುರುತಿಸಲಾಗಿದ್ದು, ಈತ ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌ ಹಾಗೂ ಸ್ವತಂತ್ರ ಗೇಮರ್‌ ಎಂದು ತಿಳಿದುಬಂದಿದೆ. ಅಲ್ಲದೆ, ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಕೂಡ ಪಡೆದಿದ್ದ ಎಂಬ ಅಚ್ಚರಿಯ ಮಾಹಿತಿಯೂ ಲಭಿಸಿದೆ.

ಲಿಂಕ್ಡ್‌ ಇನ್‌ ಮಾಹಿತಿ ಪ್ರಕಾರ ಈತ ಕಂಪ್ಯೂಟರ್‌ ವಿಜ್ಞಾನಿ

ಲಿಂಕ್ಡ್‌ ಇನ್‌ ಮಾಹಿತಿ ಪ್ರಕಾರ ಈತ ಕಂಪ್ಯೂಟರ್‌ ವಿಜ್ಞಾನಿ, ಸ್ವತಂತ್ರ ಗೇಮ್‌ ಡೆವಲಪರ್‌, ಅರೆಕಾಲಿಕ ಶಿಕ್ಷಕ. ಆನ್‌ಲೈನ್‌ ಪ್ರೊಫೈಲ್‌ ಪ್ರಕಾರ, ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಅಲೆನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್‌ ಆಫ್‌ ಸೈನ್ಸ್‌ ಡಿಗ್ರಿ (2017) ಪಡೆದಿದ್ದ. ನಂತರ ಕ್ಯಾಲಿಫೋರ್ನಿಯಾ ಸರ್ಕಾರಿ ವಿವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ.

ಕಾಲ್‌ಟೆಕ್‌ನಲ್ಲಿ ಸಹಾಯಕ ಶಿಕ್ಷಕ

ಐಜೆಕೆ ಕಂಟ್ರೋಲ್‌ನಲ್ಲಿ ಎಂಜಿನಿಯರ್‌ ಮತ್ತು ಕಾಲ್‌ಟೆಕ್‌ನಲ್ಲಿ ಸಹಾಯಕ ಶಿಕ್ಷಕನಾಗಿ ಕೆಲಸ ನಿರ್ವಹಿಸಿದ್ದ. ಇದರ ಜತೆಗೆ ಸಿ2 ಎಜುಕೇಷನ್‌ ಎಂಬ ತರಬೇತಿ ಕಂಪನಿಯಲ್ಲಿ ಅರೆಕಾಲಿಕ ಶಿಕ್ಷಕನಾಗಿಯೂ ಕಾರ್ಯ ನಿರ್ವಹಿಸಿದ್ದ. 2024ರಲ್ಲಿ ಸಿ2 ಎಜುಕೇಷನ್‌ ಸಂಸ್ಥೆಯಲ್ಲಿ ಅಲೆನ್‌ ‘ಟೀಚರ್‌ ಆಫ್‌ ದಿ ಮಂಥ್‌’ ಗೌರವಕ್ಕೂ ಪಾತ್ರನಾಗಿದ್ದ. 2024ರಲ್ಲಿ ಅಲೆನ್‌ ನಾಸಾದ ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿಯ ರಿಸರ್ಚ್‌ ಫೆಲೋಶಿಪ್‌ನಲ್ಲೂ ಭಾಗಿಯಾಗಿದ್ದ.

ಇಷ್ಟೇ ಅಲ್ಲದೆ, ಸ್ಟೀಮ್‌ ಪ್ಲಾಟ್‌ಫಾರ್ಮ್‌ಗೆ ವಿಡಿಯೋ ಗೇಮ್‌ ಅನ್ನು ಈತ ಅಭಿವೃದ್ಧಿಪಡಿಸಿದ್ದ. ಭೂ ವಾತಾವರಣದ ಹೊರಗಿನ ಪರಿಸರದ ‘ಟಾಪ್‌ ಡೌನ್‌ ಶೂಟರ್‌ ಗೇಮ್‌’ ಅನ್ನೂ ಅಭಿವೃದ್ಧಿಪಡಿಸುತ್ತಿದ್ದ.

ಡೆಮಾಕ್ರಟಿಕ್‌ ಪಕ್ಷಕ್ಕೆ ದೇಣಿಗೆ ನೀಡಿದ್ದ:

2024ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಪರವಾಗಿ 25 ಡಾಲರ್‌ (2,300 ರು.) ದೇಣಿಗೆಯನ್ನೂ ಅಲೆನ್‌ ನೀಡಿದ್ದ.

ದಾಳಿಕೋರ ಶಸ್ತ್ರಸಜ್ಜಿತ ಒಂಟಿ ತೋಳ: ಟ್ರಂಪ್‌

ವಾಷಿಂಗ್ಟನ್‌: ತಾವು ಭಾಗಿಯಾಗಿದ್ದ ಭೋಜನಕೂಟದಲ್ಲಿ ಸಂಭವಿಸಿದ ಗುಂಡಿನ ದಾಳಿ ಬಳಿಕವೂ ಧೃತಿಗೆಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೆಲವೇ ನಿಮಿಷ ಬಳಿಕ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ದಾಳಿಕೋರನನ್ನು ‘ಶಸ್ತ್ರಸಜ್ಜಿತ ರೋಗಿಷ್ಟ, ಒಂಟಿ ತೋಳ’ ಎಂದು ಕರೆದಿದ್ದಾರೆ. ‘ಕೆಲಸಗಾರರು, ಪ್ರಭಾವಿಗಳು ದಾಳಿಗೆ ಒಳಗಾಗುವುದು ಸಹಜ. 

ಇದಕ್ಕೆ ಉದಾಹರಣೆ ಅಬ್ರಹಾಂ ಲಿಂಕನ್‌. ಈಗ ನಾನೇ ಗುರಿ ಆಗಿರಲೂಬಹುದು. ತನಿಖೆಯಿಂದ ಗೊತ್ತಾಗುತ್ತದೆ’ ಎಂದಿದ್ದಾರೆ.ಪತ್ರಕರ್ತರಿಗೆ ಸವಿಸ್ತಾರ ಮಾಹಿತಿ ನೀಡಿದ ಟ್ರಂಪ್‌, ‘ಹಲವು ಆಯುಧಗಳನ್ನು ಹಿಡಿದು ಚೆಕ್‌ ಪಾಯಿಂಟ್‌ನಿಂದ ಒಳಗೆ ನುಗ್ಗಿದ ವ್ಯಕ್ತಿಯನ್ನು ನಮ್ಮ ಶೂರ ಭದ್ರತಾ ಸಿಬ್ಬಂದಿ ಹಿಡಿದುಹಾಕಿದ್ದಾರೆ. ಆತ ನಮ್ಮೊಬ್ಬ ಭದ್ರತಾ ಅಧಿಕಾರಿಯ ಮೇಲೆ ಶಕ್ತಿಶಾಲಿ ಗನ್‌ನಿಂದ ಹತ್ತಿರದಿಂದ ಗುಂಡು ಹಾರಿಸಿದ. ಆದರೆ ಅವರು ಬುಲೆಟ್‌ ಪ್ರೂಫ್‌ ಜಾಕೆಟ್‌ ಧರಿಸಿದ್ದ ಕಾರಣ ಸುರಕ್ಷಿತವಾಗಿದ್ದಾರೆ’ ಎಂದು ವಿವರಿಸಿದರು.

‘ದಾಳಿಕೋರನ ಗುರಿ ನೀವು ಆಗಿದ್ದಿರಾ?’ ಎಂದು ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ, ‘ಇರಬಹುದು. ಆತನ ಉದ್ದೇಶವೇನಿತ್ತು ಎಂಬುದರ ಪತ್ತೆಗೆ ತನಿಖೆ ನಡೆಯುತ್ತಿದೆ. ದಾಳಿಕೋರ ಒಬ್ಬಂಟಿಯಾಗಿದ್ದಿರಬಹುದು. ಇದರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ’ ಎಂದು ಉತ್ತರಿಸಿದರು. ಅಲ್ಲದೆ, ಇರಾನ್‌ ಯುದ್ಧಕ್ಕೂ ಇದಕ್ಕೂ ಸಂಬಂಧ ಇದ್ದಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ‘ಪದೇ ಪದೇ ದಾಳಿ ನನ್ನ ಮೇಲೆ ನಡೆದಿವೆ. ಈ ವೃತ್ತಿ ಇಷ್ಟು ಅಪಾಯಕಾರಿ ಎಂದುಕೊಂಡಿರಲಿಲ್ಲ’ ಎಂದು ಟ್ರಂಪ್ ಚಟಾಕಿ ಹಾರಿಸಿದರು.

ದಾಳಿ ಬಳಿಕ ಮದ್ಯದ ಬಾಟಲಿ ಹೊತ್ತೊಯ್ದರು!

ವಾಷಿಂಗ್ಟನ್‌: ಟ್ರಂಪ್ ಅವರ ಔತಣಕೂಟದಲ್ಲಿ ಗುಂಡಿನ ದಾಳಿಯ ನಂತರ, ಕೆಲವು ಪತ್ರಿಕಾ ಪ್ರತಿನಿಧಿಗಳು ವೈನ್ ಬಾಟಲಿಗಳನ್ನು ತಮ್ಮ ಚೀಲದಲ್ಲಿ ಹಾಕಿಕೊಂಡು ಸಂತಸ ಪಡುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ.ದಾಳಿಯ ನಂತರ ಟ್ರಂಪ್‌ ಸೇರಿ ಎಲ್ಲ ಅತಿಥಿಗಳನ್ನು ಭದ್ರತಾ ಸಿಬ್ಬಂದಿ ಅಲ್ಲಿಂದ ತೆರವು ಮಾಡಿದರು. ದಾಳಿಕೋರನನ್ನೂ ಬಂಧಿಸಿ ಕರೆದೊಯ್ದರು. ಈ ವೇಳೆ ಆತಂಕದ ವಾತಾವರಣ ಇದ್ದರೂ ಕೆಲವು ಪತ್ರಕರ್ತರು ಸೆಲ್ಫಿ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ಮದ್ಯದ ಬಾಟಲುಗಳನ್ನು ತಮ್ಮ ಚೀಲದಲ್ಲಿ ಹಾಕಿಕೊಳ್ಳುತ್ತಿರುವುದು ಕಂಡುಬಂತು.

ಗುಂಡು ಹಾರುತ್ತವೆ ಎಂದು ತಮಾಷೆ ಮಾಡಿದ್ದ ಟ್ರಂಪ್‌ ಆಪ್ತೆ

ವಾಷಿಂಗ್ಟನ್: ಶ್ವೇತಭವನದ ಪತ್ರಕರ್ತರ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಯುವ ಕೆಲವೇ ಹೊತ್ತು ಮೊದಲು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೆವಿಟ್, ‘ಈಗ ಪಾರ್ಟಿ ನಡೆಯಲಿದೆ. ಶಾಟ್ಸ್ ವಿಲ್‌ ಬಿ ಫೈರ್ಡ್‌ (ಗುಂಡು ಹಾರುತ್ತವೆ)’ ಎಂದಿದ್ದರು. ಪಾರ್ಟಿಯಲ್ಲಿ ಎಂದಿನಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಫೋಟಕ ಮಾತು ಆಡುತ್ತಾರೆ ಎಂಬ ಅರ್ಥದಲ್ಲಿ ಅವರು ತಮಾಷೆ ಮಾಡಿದ್ದರು. ಆದರೆ ಅದಾದ ಕೆಲವೇ ಹೊತ್ತಿನಲ್ಲಿ ಗುಂಡಿನ ದಾಳಿ ನಡೆದಿದ್ದು ಕಾಕತಾಳೀಯ. ಲೆವಿಟ್ ಅವರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಕಾಶ್‌ ಪಟೇಲ್ ಶೀಘ್ರ ತಲೆದಂಡ?

ವಾಷಿಂಗ್ಟನ್‌: ಅಮೆರಿಕ ಅಧಕ್ಷ ಟ್ರಂಪ್‌ ಮೇಲೆ ದಾಳಿ ಯತ್ನದ ಹಿನ್ನೆಲೆಯಲ್ಲಿ ಅಮೆರಿಕ ಗುಪ್ತಚರ ಪಡೆ ಎಫ್‌ಬಿಐ ಮುಖ್ಯಸ್ಥ, ಭಾರತೀಯ ಮೂಲದ ಕಾಶ್‌ ಪಟೇಲ್‌ ಅವರನ್ನು ಶೀಘ್ರ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಅಲ್ಲದೆ, ದಾಳಿ ಬಳಿಕ ಕಾಶ್‌ ಮೊಬೈಲ್ ಸ್ಕ್ರಾಲ್‌ ಮಾಡುತ್ತಿರುವುದು ಟೀಕೆಗೆ ಗುರಿಯಾಗಿದೆ.

ಎದ್ದು-ಬಿದ್ದು ಟ್ರಂಪ್‌ ಬಚಾವ್‌!

ವಾಷಿಂಗ್ಟನ್‌: ಹಿಲ್ಟನ್‌ ಹೊಟೆಲ್‌ನಲ್ಲಿ ನಡೆದ ಗುಂಡಿನ ದಾಳಿಯ ದೃಶ್ಯಗಳು ಲಭ್ಯವಾಗಿದ್ದು, ಅದರಲ್ಲಿ ಅಧ್ಯಕ್ಷ ಟ್ರಂಪ್‌ ಅವರು ಎದ್ದು-ಬಿದ್ದು ವೇದಿಕೆಯಿಂದ ನಿರ್ಗಮಿಸಿದ್ದು ಸೆರೆಯಾಗಿದೆ.ಪತ್ನಿ ಮೆಲಾನಿಯಾ ಪಕ್ಕದಲ್ಲಿ ಕುಳಿತು ಶ್ವೇತಭವನದ ವರದಿಗಾರರ ಸಂಘದ ಅಧ್ಯಕ್ಷೆಯೊಂದಿಗೆ ಟ್ರಂಪ್‌ ಮಾತಾಡುತ್ತಿದ್ದ ವೇಳೆ ದೂರದಲ್ಲಿ ಹಲವು ಸುತ್ತು ಗುಂಡು ಹಾರಿದ ಸದ್ದು ಕೇಳಿತು. 

ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ (ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌), ಟ್ರಂಪ್‌ ಹಾಗೂ ಇತರೆ ಗಣ್ಯರ ಸುತ್ತ ನಿಂತರು ಹಾಗೂ ಅವರಿಗೆ ಮೇಜಿನ ಕೆಳಗೆ ಅವಿತುಕೊಳ್ಳಲು ಸೂಚಿಸಿದರು.ಬಳಿಕ ಮೊದಲಿಗೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ರನ್ನು ಅಲ್ಲಿಂದ ಆಚೆ ಕರೆದೊಯ್ಯಲಾಯಿತು. ಟ್ರಂಪ್‌ರ ಸರದಿ ಬಂದಾಗ ಗಡಿಬಿಡಿಯಲ್ಲಿ ಒಮ್ಮೆ ಎಡವಿ ಬಿದ್ದರು ಹಾಗೂ ಕೂಡಲೆ ಸಂಭಾಳಿಸಿಕೊಂಡು ಅಲ್ಲಿಂದ ನಿರ್ಗಮಿಸಿದರು.

ಪ್ರಜಾಸತ್ತೆಯಲ್ಲಿ ಹಿಂಸೆಗೆ ಅವಕಾಶವಿಲ್ಲ: ಮೋದಿ ಖಂಡನೆ

ನವದೆಹಲಿವಾಷಿಂಗ್ಟನ್‌ನಲ್ಲಿ ನಡೆದ ಶ್ವೇತಭವನದ ವರದಿಗಾರರ ಭೋಜನಕೂಟದಲ್ಲಿ ನಡೆದ ಗುಂದಿನ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು’ ಎಂದಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ವಾಷಿಂಗ್ಟನ್ ಡಿಸಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ದಾಳಿ ಬಳಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಅವರ ನಿರಂತರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

7 ಪಕ್ಷಾಂತರಿಗಳ ಸದಸ್ಯತ್ವ ರದ್ದು : ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ
ಜನಗಣತಿಯಲ್ಲಿ ಎಲ್ಲರೂ ಭಾಗವಹಿಸಿ : ಮೋದಿ