ನವದೆಹಲಿ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತನ್ನ ಹೊಸ ಮಾಡ್ಯೂಲ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ದೇಶವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಹಾಗೂ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಕಾರಣ ಎಂಬ ಪಠ್ಯವನ್ನು ಸೇರಿಸಿದೆ.
ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಎನ್‌ಸಿಇಆರ್‌ಟಿ 2 ಹೊಸ ಮಾಡ್ಯೂಲ್‌ಗಳನ್ನು ಪ್ರಕಟಿಸಿದೆ. ಒಂದು 6-8ನೇ ತರಗತಿಗೆ ಹಾಗೂ ಇನ್ನೊಂದು 9-12ನೇ ತರಗತಿಗೆ. ಇವು ಮುಖ್ಯ ಪಠ್ಯಪುಸ್ತಕಗಳಲ್ಲ, ಬದಲಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಪೂರಕ ಪಠ್ಯಗಳಾಗಿವೆ. ವಿದ್ಯಾರ್ಥಿಗಳಿಗೆ ವಿಶೇಷ ಪೋಸ್ಟರ್‌ಗಳು, ಚರ್ಚೆಗಳಿಗೆ ಇವುಗಳನ್ನು ಬಳಸಲು ಉದ್ದೇಶಿಸಲಾಗಿದೆ.
ಪಠ್ಯದಲ್ಲೇನಿದೆ?:‘ಭಾರತ ವಿಭಜನೆ ತಪ್ಪು ಯೋಚನೆಗಳಿಂದಾಗಿ ನಡೆಯಿತು. ಮುಸ್ಲಿಂ ಲೀಗ್ 1940ರಲ್ಲಿ ಲಾಹೋರ್‌ನಲ್ಲಿ ಅಧಿವೇಶನವನ್ನು ನಡೆಸಿತು. ಇದರ ನಾಯಕ ಮೊಹಮ್ಮದ್ ಅಲಿ ಜಿನ್ನಾ, ಹಿಂದೂ ಮತ್ತು ಮುಸ್ಲಿಮರು 2 ಭಿನ್ನ ಧಾರ್ಮಿಕ ತತ್ವಗಳು, ಸಾಮಾಜಿಕ ಆಚರಣೆಗಳು ಹಾಗೂ ಗ್ರಂಥಗಳಿಗೆ ಸೇರಿದ್ದಾರೆ ಎಂದರು. ಅಂತಿಮವಾಗಿ 1947ರ ಆ.15ರಂದು ಭಾರತ ವಿಭಜನೆಯಾಯಿತು. ಆದರೆ ಇದು ಯಾವುದೇ ಒಬ್ಬ ವ್ಯಕ್ತಿಯಿಂದ ನಡೆದದ್ದಲ್ಲ. ಇದಕ್ಕೆ 3 ಸಂಗತಿಗಳು ಕಾರಣವಾಗಿದ್ದವು: ಮೊದಲನೆಯದಾಗಿ ಜಿನ್ನಾ, ಈ ಬೇಡಿಕೆಯಿಟ್ಟವರು; 2ನೆಯದಾಗಿ ಕಾಂಗ್ರೆಸ್, ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದು ಹಾಗೂ 3ನೆಯದಾಗಿ ಮೌಂಟ್‌ಬ್ಯಾಟನ್, ಇದನ್ನು ಜಾರಿಗೊಳಿಸಿದವರು. ಆದರೆ ಮೌಂಟ್‌ಬ್ಯಾಟನ್ ಈ ದೊಡ್ಡ ಪ್ರಮಾದಕ್ಕೆ ತಪ್ಪಿತಸ್ಥನೆಂದು ಸಾಬೀತಾಯಿತು’ ಎಂದು ಪಠ್ಯದಲ್ಲಿ ವಿವರಿಸಲಾಗಿದೆ.
‘1948ರ ಜೂನ್‌ನಲ್ಲಿ ನಡೆಯಬೇಕಿದ್ದ ಅಧಿಕಾರ ಹಸ್ತಾಂತರವನ್ನು ಬ್ಯಾಟನ್ 1947ರ ಆ.15ಕ್ಕೆ ಹಿಂದಕ್ಕೆ ಹಾಕಿದರು. ಇದನ್ನು ಎಲ್ಲರೂ ಒಪ್ಪುವಂತೆ ಮನವೊಲಿಕೆ ಮಾಡಿದರು. ಹೀಗಾಗಿ ವಿಭಜನೆಗೂ ಮುನ್ನ ಪೂರ್ಣ ತಯಾರಿ ಸಾಧ್ಯವಾಗಲಿಲ್ಲ. ಗಡಿಗಳನ್ನು ಗುರುತಿಸುವ ಕೆಲಸವೂ ತರಾತುರಿಯಲ್ಲಿ ನಡೆಯಿತು. ಅದಕ್ಕಾಗಿ ಸರ್ ಸಿರಿಲ್ ರಾಡ್‌ಕ್ಲಿಫ್‌ಗೆ ಕೇವಲ 5 ವಾರಗಳ ಕಾಲಾವಕಾಶ ನೀಡಲಾಯಿತು. ಆ.15ರ 2 ದಿನಗಳ ನಂತರ ಪಂಜಾಬ್‌ನ ಜನರಿಗೆ ತಾವು ಭಾರತದಲ್ಲಿದ್ದೇವೋ ಪಾಕಿಸ್ತಾನದಲ್ಲಿದ್ದೇವೋ ಎಂಬುದೇ ತಿಳಿಯಲಿಲ್ಲ’ ಎಂದು ತಿಳಿಸಲಾಗಿದೆ. ಮಹಾತ್ಮ ಗಾಂಧೀಜಿಯವರು ಮೊದಲು ದೇಶವಿಭಜನೆಯನ್ನು ವಿರೋಧಿಸಿದ್ದರೂ, ನಂತರ ಕಾಂಗ್ರೆಸ್ ನಿರ್ಣಯವನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದನ್ನು ಹಾಗೂ 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆ.14ನ್ನು ವಿಭಜನೆಯ ಭಯಾನಕತೆಯ ನೆನಪಿನ ದಿನ ಎಂದು ಘೋಷಿಸಿದ್ದನ್ನು ಮಾಡ್ಯೂಲ್‌ನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ತೀವ್ರ ಆಕ್ರೋಶ
ಎನ್‌ಸಿಇಆರ್‌ಟಿ ಪಠ್ಯದಲ್ಲಿ ದೇಶವಿಭಜನೆಗೆ ಕಾಂಗ್ರೆಸ್ ಅನ್ನು ಹೊಣೆ ಮಾಡಿದ್ದಕ್ಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ಸತ್ಯವನ್ನು ಹೇಳದ ಈ ಪಠ್ಯವನ್ನು ಸುಟ್ಟುಹಾಕಿ. ದೇಶವಿಭಜನೆಯ ಕಲ್ಪನೆಯನ್ನು ಮೊದಲು ಹಿಂದೂ ಮಹಾಸಭಾ 1938ರಲ್ಲಿ ಪ್ರಚಾರ ಮಾಡಿತು. ನಂತರ ಇದನ್ನು 1940ರಲ್ಲಿ ಜಿನ್ನಾ ಪುನರಾವರ್ತಿಸಿದರು’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಿಳಿಸಿದ್ದಾರೆ.