ರಾಜ್ಯಸಭೆಯಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಶೀಘ್ರ ಬಹುಮತ ಸಿಗುವ ನಿರೀಕ್ಷೆ

KannadaprabhaNewsNetwork |  
Published : Aug 12, 2024, 01:03 AM ISTUpdated : Aug 12, 2024, 05:17 AM IST
 ರಾಜ್ಯಸಭೆ | Kannada Prabha

ಸಾರಾಂಶ

ಲೋಕಸಭೆಯಲ್ಲಿ ಸತತ 10 ವರ್ಷಗಳಿಂದ ಬಹುಮತ ಹೊಂದಿದ್ದರೂ, ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಕಾರಣ ಮಹತ್ವದ ಮಸೂದೆ ಅಂಗೀಕಾರದ ವೇಳೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಶೀಘ್ರ ಬಹುಮತ ಸಿಗುವ ನಿರೀಕ್ಷೆ ಇದೆ.

 ನವದೆಹಲಿ :  ಲೋಕಸಭೆಯಲ್ಲಿ ಸತತ 10 ವರ್ಷಗಳಿಂದ ಬಹುಮತ ಹೊಂದಿದ್ದರೂ, ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಕಾರಣ ಮಹತ್ವದ ಮಸೂದೆ ಅಂಗೀಕಾರದ ವೇಳೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಶೀಘ್ರ ಬಹುಮತ ಸಿಗುವ ನಿರೀಕ್ಷೆ ಇದೆ.

ಸೆ.3ರಂದು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ 11 ಸ್ಥಾನ ಎನ್‌ಡಿಎ ಪಾಲಾಗುವ ಕಾರಣ ಎನ್‌ಡಿಎ ಕೂಟಕ್ಕೆ ಬಹುಮತ ಸಿಗುವುದು ಖಚಿತವಾಗಿದೆ. ಇದರಿಂದ, ಸದ್ಯ ಜೆಪಿಸಿ ಪರಿಶೀಲನೆಗೆ ಒಳಪಟ್ಟಿರುವ ವಕ್ಫ್‌ ತಿದ್ದುಪಡಿ ಕಾಯ್ದೆ ಸೇರಿ ಹಲವು ಮಹತ್ವದ ಕಾಯ್ದೆಗಳನ್ನು ಸುಲಭವಾಗಿ ಅಂಗೀಕರಿಸುವುದು ಎನ್‌ಡಿಎ ಕೂಟಕ್ಕೆ ಸಾಧ್ಯವಾಗಲಿದೆ.ಹಾಲಿ ರಾಜ್ಯಸಭೆಯ ಒಟ್ಟು ಬಲಾಬಲ 229. ಈ ಪೈಕಿ ಬಿಜೆಪಿ 87 ಸ್ಥಾನ ಹೊಂದಿದ್ದು, ಮಿತ್ರರ ಬಲವೂ ಸೇರಿದರೆ 105 ಬಲ ಇದೆ. 

ಇನ್ನು 6 ನಾಮ ನಿರ್ದೇಶಿತ ಸದಸ್ಯರ ಬೆಂಬಲ ಸರ್ಕಾರಕ್ಕೆ ಇರುವ ಕಾರಣ ಎನ್‌ಡಿಎ ಬಲ 111 ಆಗುತ್ತದೆ. ಅಂದರೆ ಬಹುಮತಕ್ಕೆ ಅಗತ್ಯವಾದ 115ಕ್ಕೆ 4 ಸ್ಥಾನದ ಕೊರತೆ ಇದೆ.ಇನ್ನೊಂದೆಡೆ ಕಾಂಗ್ರೆಸ್‌ನ 26 ಸೇರಿ ಇಂಡಿಯಾ ಕೂಟ 84 ಸ್ಥಾನ ಹೊಂದಿದೆ. ವೈಎಸ್‌ಆರ್‌ ಕಾಂಗ್ರೆಸ್ 11 ಮತ್ತು ಬಿಜೆಡಿ 8 ಸ್ಥಾನ ಹೊಂದಿದ್ದು, ವಿಷಯಾಧಾರಿತ ಬೆಂಬಲದ ನೀತಿ ಹೊಂದಿವೆ. ಇವೆರೆಡೂ ಬಿಜೆಪಿಯಿಂದ ಅಷ್ಟೇನೂ ದೂರ ಹೊಂದಿಲ್ಲದ ಕಾರಣ ಅಗತ್ಯ ಬಿದ್ದಾಗ ಬೆಂಬಲದ ಸಾಧ್ಯತೆ ಇದೆ.

ಈ ನಡುವೆ ಸದಸ್ಯರ ರಾಜೀನಾಮೆ, ನಿವೃತ್ತಿ ಮೊದಲಾದ ಕಾರಣದಿಂದ ತೆರವಾದ 12 ಸ್ಥಾನಗಳಿಗೆ ಸೆ.3ರಂದು ಚುನಾವಣೆ ನಿಗದಿಯಾಗಿದೆ. ಈ ಪೈಕಿ ಬಿಜೆಪಿ ಮತ್ತು ಮಿತ್ರರು 11 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಅದರೊಂದಿಗೆ ಎನ್‌ಡಿಎ ಕೂಟದ ಬಲ 122ಕ್ಕೆ ತಲುಪುತ್ತದೆ. ಸದನದ ಒಟ್ಟು ಬಲ 245 ಆಗಿದ್ದರೂ, ಜಮ್ಮು-ಕಾಶ್ಮೀರದ 4 ಸ್ಥಾನ ಖಾಲಿ ಇರುವ ಕಾರಣ ಸದನದ ಬಲ 241ಕ್ಕೆ ಕುಸಿಯುತ್ತದೆ. ಅಂದರೆ ಬಹುಮತಕ್ಕೆ ಅಗತ್ಯವಾದ 121ಕ್ಕಿಂತ 1 ಸ್ಥಾನ ಹೆಚ್ಚು ಎನ್‌ಡಿಎ ಬಲ ಇರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!