ನೀಟ್‌ ರಾದ್ಧಾಂತ ಕೋಚಿಂಗ್‌ ಸಂಸ್ಥೆಗಳು ಸೃಷ್ಟಿಸಿದ ಕುತಂತ್ರ?

KannadaprabhaNewsNetwork |  
Published : Jun 15, 2024, 01:03 AM ISTUpdated : Jun 15, 2024, 05:35 AM IST
ವಿದ್ಯಾರ್ಥಿಗಳ ಹೋರಾಟ | Kannada Prabha

ಸಾರಾಂಶ

ಪರೀಕ್ಷೆಯ ಬಗ್ಗೆ ಹಲವು ಶಂಕೆ ಎಬ್ಬಿಸಿದ ಸಂಸ್ಥೆಗಳು ಕುತಂತ್ರ ಎಸಗಿರಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳ ಬಲವಾದ ಗುಮಾನಿ ಹರಿದಾಡುತ್ತಿದೆ.

ನವದೆಹಲಿ: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್‌ನಲ್ಲಿ ದೇಶಾದ್ಯಂತ ಈ ಬಾರಿ ಅಕ್ರಮವಾಗಿದೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬೆಲ್ಲಾ ವಿವಾದ ಸೃಷ್ಟಿಯಾಗಲು ಖಾಸಗಿ ಕೋಚಿಂಗ್‌ ಸಂಸ್ಥೆಗಳೇ ಕಾರಣ ಎಂದು ಕೇಂದ್ರ ಸರ್ಕಾರದ ಮೂಲಗಳು ದೂಷಿಸುತ್ತಿವೆ.

‘ಈ ಬಾರಿಯ ಪರೀಕ್ಷೆಯಲ್ಲಿ ಕೋಚಿಂಗ್‌ ಸಂಸ್ಥೆಯ ವಿದ್ಯಾರ್ಥಿಗಳು ಕಳಪೆ ಸಾಧನೆ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಎದುರು ತಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳಲು ಈ ರೀತಿಯ ರಾದ್ಧಾಂತವನ್ನು ಆ ಸಂಸ್ಥೆಗಳು ಸೃಷ್ಟಿ ಮಾಡಿವೆ. ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಮುಂಚೂಣಿಯಲ್ಲಿ ಈ ಸಂಸ್ಥೆಗಳೇ ಇವೆ’ ಎಂದು ಮೂಲಗಳು ಹೇಳುತ್ತಿವೆ ಎಂದು ಟೀವಿ ಚಾನೆಲ್‌ ಒಂದು ವರದಿ ಮಾಡಿದೆ.

‘ಈ ಬಾರಿಯ ನೀಟ್‌ ಪರೀಕ್ಷೆಯ ಸಿಲಬಸ್‌ ಅನ್ನು ಸುಮಾರು ಶೇ.15ರಷ್ಟು ಕಡಿತಗೊಳಿಸಲಾಗಿದೆ. ಹೀಗಾಗಿ 23.3 ಲಕ್ಷ ಅಧಿಕ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದೂ ಅಲ್ಲದೆ ಈ ಸಲ ಪ್ರಶ್ನೆಪತ್ರಿಕೆ ಕೂಡ ಸರಳವಾಗಿತ್ತು. ಈವರೆಗೆ ನೀಟ್‌ ಸಿಲಬಸ್‌ ಸಂಕೀರ್ಣವಾಗಿದೆ ಹಾಗೂ ವಿಸ್ತಾರವಾಗಿದೆ ಎಂಬುದೇ ಕೋಚಿಂಗ್‌ ಸಂಸ್ಥೆಯ ಬಂಡವಾಳವಾಗಿತ್ತು. ಹೀಗಾಗಿ ಕೋಚಿಂಗ್‌ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದರು. ಈ ಬಾರಿ ಅದರಲ್ಲಿ ಬದಲಾವಣೆಯಾಗಿದೆ’ ಎಂದು ಮಾಹಿತಿ ನೀಡಿವೆ.

‘ಸಿಲಬಸ್‌ ಕಡಿತವಾಗಿರುವುದರಿಂದ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಪುನರ್ಮನನ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಇದರಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಬರೆದು ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆ ಬರೆಯುವವರಿಗೆ ಗರಿಷ್ಠ ವಯೋಮಿತಿ ಇಲ್ಲ. ಎಷ್ಟು ಬಾರಿ ಬೇಕಾದರೂ ಪ್ರಯತ್ನಿಸಬಹುದು. ಹೀಗಾಗಿ ಅನುಭವಿ ಅಭ್ಯರ್ಥಿಗಳು ಹೆಚ್ಚು ಬಾರಿ ಪ್ರಶ್ನೆಪತ್ರಿಕೆ ಬರೆದಿದ್ದಾರೆ. ಇದರಿಂದಾಗಿ ಹೆಚ್ಚು ಅಂಕಗಳು ಬಂದಿವೆ. ಆದರೆ ಕೋಚಿಂಗ್‌ ವಿದ್ಯಾರ್ಥಿಗಳ ಅಂಕಗಳು ಕುಸಿದಿವೆ. ಆ ಕಾರಣಕ್ಕೆ ಆ ಸಂಸ್ಥೆಗಳು ವಿವಾದ ಸೃಷ್ಟಿಸಿವೆ’ ಎಂದು ಸರ್ಕಾರದ ಮೂಲಗಳು ಆರೋಪಿಸಿವೆ.

ನೀಟ್‌ ಅಕ್ರಮ ಸಹಿಸಲ್ಲ, ಲೋಪ ಆದರೆ ಕಠಿಣ ಕ್ರಮ: ಪ್ರಧಾನ್‌

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಸ್ಪರ್ಧೆ ಹೆಚ್ಚಿದ ಕಾರಣ ಟಾಪರ್‌ಗಳ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ಆದರೆ ಅಕ್ರಮ ಸಾಬೀತಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.ನೀಟ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ವಿದ್ಯಾರ್ಥಿಗಳನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನ್‌, ‘ನೀಟ್‌ನಲ್ಲಿ ಅಕ್ರಮ ಸಹಿಸಲ್ಲ. ಯಾವುದೇ ಲೋಪ ಕಂಡುಬಂದಲ್ಲಿ ಪರೀಕ್ಷಾ ಪ್ರಾಧಿಕಾರವನ್ನು ಹೊಣೆ ಮಾಡಲಾಗುವುದು. ವಿದ್ಯಾರ್ಥಿಗಳ ಸಮಸ್ಯೆಯನ್ನು ಪಾರದರ್ಶಕ ಮತ್ತು ಸಮಾನತೆಯಿಂದ ಬಗೆಹರಿಸಲಾಗುವುದು’ ಎಂದರು,

ಅಲ್ಲದೆ, ‘ವೈದ್ಯ ಕೋರ್ಸ್‌ ಪ್ರವೇಶಕ್ಕೆ ಸ್ಪರ್ಧೆ ಹೆಚ್ಚಳ ಮತ್ತು ಪಠ್ಯ ಕಡಿತದ ಕಾರಣದಿಂದಾಗಿ ನೀಟ್‌ ಟಾಪರ್‌ಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ನೀಟ್‌ ಅಕ್ರಮ ಸಿಬಿಐ ತನಿಖೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌ವೈದ್ಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ‘ನೀಟ್‌’ನಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ಈ ವಿವಾದದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂಬ ಅರ್ಜಿ ಸಲ್ಲಿಕೆ ಆಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ನೋಟಿಸ್‌ ಜಾರಿಗೊಳಿಸಿದೆ.

ಇದೇ ವೇಳೆ, ರಾಜಸ್ಥಾನದ ಕೋಟಾದಲ್ಲಿ ನೀಟ್‌ ತರಬೇತಿನಿರತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ಅರ್ಜಿದಾರರ ವಾದಕ್ಕೆ ಆಕ್ಷೇಪಿಸಿರುವ ನ್ಯಾಯಾಲಯ, ‘ನೀಟ್‌ ಫಲಿತಾಂಶಕ್ಕೂ ಕೋಟಾ ಆತ್ಮಹತ್ಯೆಗಳಿಗೂ ಸಂಬಂಧವಿಲ್ಲ. ಇಂತಹ ಭಾವನಾತ್ಮಕ ವಾದಗಳನ್ನು ಮಾಡಲು ಬರಬೇಡಿ’ ಎಂದು ತಾಕೀತು ಮಾಡಿದೆ.ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಹಾಗೂ ಪರೀಕ್ಷೆ ವೇಳೆ ಹಲವಾರು ಅಕ್ರಮಗಳಾಗಿವೆ ಎಂದು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠ, ಸಿಬಿಐ ಹಾಗೂ ಬಿಹಾರ ಸರ್ಕಾರದಿಂದಲೂ 2 ವಾರಗಳಲ್ಲಿ ಪ್ರತಿಕ್ರಿಯೆ ಬಯಸಿತು. ಜು.8ರಿಂದ ಬೇಸಿಗೆ ರಜೆ ಮುಗಿಸಿ ಸುಪ್ರೀಂಕೋರ್ಟ್‌ ಪುನಾರಂಭವಾಗಲಿದ್ದು, ಅಂದು ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತು.

ಈಗಾಗಲೇ ಸುಪ್ರೀಂ ಕೋರ್ಟು, ನೀಟ್‌ ನಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್‌ ಅಂಕಗಳ ವಿವಾದದ ಬಗ್ಗೆ ಸಲ್ಲಿಕೆ ಆಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಆ ಅರ್ಜಿಗಳ ಜತೆ ಸಿಬಿಐ ತನಿಖೆ ಕೋರಿರುವ ಅರ್ಜಿಗಳ ವಿಚಾರಣೆಯನ್ನೂ ನಡೆಸಲಿದೆ.ಅರ್ಜಿ ಸಂಯೋಜನೆಗೆ ಎನ್‌ಟಿಎ ಮನವಿ:

ವಿವಿಧ ಹೈಕೋರ್ಟುಗಳಲ್ಲಿ ನೀಟ್‌ ಕುರಿತು ಸಲ್ಲಿಕೆ ಆಗಿರುವ ಅರ್ಜಿಗಳನ್ನು ಸಂಯೋಜಿಸಿ ಒಂದೇ ಕಡೆ ನಡೆಸಬೇಕು ಎಂದು ಎನ್‌ಟಿಎ ವಾದಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಅರ್ಜಿದಾರರಿಂದ ಸುಪ್ರೀಂ ಕೋರ್ಟು ಪ್ರತಿಕ್ರಿಯೆ ಬಯಸಿ ನೋಟಿಸ್‌ ಜಾರಿ ಮಾಡಿದೆ.

‘ನೀಟ್ ಚೀಟ್‌’ ಬಗ್ಗೆ ಮೋದಿ ಮೌನವೇಕೆ?: ಕಾಂಗ್ರೆಸ್ ಪ್ರಶ್ನೆ

ನೀಟ್ ಅಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮೌನದ ವಿರುದ್ಧ ಕಿಡಿ ಕಾರಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೂಲಕ ಅಕ್ರಮವನ್ನು ಮುಚ್ಚಿ ಹಾಕಲು ಆರಂಭಿಸಿದೆ ಎಂದು ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಕಿಡಿಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ನೀಟ್‌ ಎಂಬುದು ಚೀಟ್‌ (ವಂಚನೆ) ಆಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲವೆಂದಾದರೆ ಬಿಹಾರದಲ್ಲಿ, ಗುಜರಾತ್‌ನಲ್ಲಿ ಆರೋಪಿಗಳನ್ನು ಏಕೆ ಬಂಧಿಸಲಾಯಿತು? ಈ ಅಕ್ರಮದಲ್ಲಿ ಶಿಕ್ಷಣ ಮಾಫಿಯಾ ಮತ್ತು ವ್ಯವಸ್ಥಿತ ಗುಂಪು ಭಾಗಿಯಾಗಲಿಲ್ಲವೇ? ಪರೀಕ್ಷೆಯಲ್ಲಿ ಅಕ್ರಮ ನಡೆಯದಿದ್ದರೆ ಅವರನೆಲ್ಲ ಏಕೆ ಬಂಧಿಸಲಾಯಿತು? ಮೋದಿ ಸರ್ಕಾರ 24 ಲಕ್ಷ ಯುವ ಸಮುಯದಾಯದ ಜನರ ಭವಿಷ್ಯವನ್ನು ಹಾಳು ಮಾಡಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ‘ನೀಟ್‌ ಹಗರಣ ವ್ಯಾಪಂ 2.0 ಹಗರಣ. 2013ರಲ್ಲಿ ಈ ರೀತಿ ಅಕ್ರಮ ನಡೆದಿತ್ತು. ಪ್ರಧಾನ್‌ ಇದೊಂದು ಪ್ರೇರಿತ ಎಂದು ಲಜ್ಜೆಗೆಟ್ಟ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮೌನವಾಗಿರಲು ಸಾಧ್ಯವಿಲ್ಲ. 24 ಲಕ್ಷ ಜನರ ಭವಿಷ್ಯ ಅಪಾಯದಲ್ಲಿರುವಾಗ ಯಾಕೆ ಮೌನವಾಗಿದ್ದಾರೆ? ಸುಪ್ರೀಂ ಕೋರ್ಟ್‌ ತನಿಖೆಯಿಂದ ಮಾತ್ರವೇ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಸಾಧ್ಯ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ