ಕಳೆದ ವರ್ಷ ಅಕ್ರಮಗಳಿಂದ ಸುದ್ದಿಯಾಗಿದ್ದ ನೀಟ್ ಯುಜಿ ಪರೀಕ್ಷೆ ಭಾನುವಾರ ದೇಶಾದ್ಯಂತ 5400 ಯಶಸ್ವಿಯಾಗಿ ನಡೆದಿದೆ.
ನವದೆಹಲಿ: ಕಳೆದ ವರ್ಷ ಅಕ್ರಮಗಳಿಂದ ಸುದ್ದಿಯಾಗಿದ್ದ ನೀಟ್ ಯುಜಿ ಪರೀಕ್ಷೆ ಭಾನುವಾರ ದೇಶಾದ್ಯಂತ 5400 ಯಶಸ್ವಿಯಾಗಿ ನಡೆದಿದೆ. ವೈದ್ಯಕೀಯ ಪ್ರವೇಶಾತಿಗಾಗಿ ನಡೆಸಲಾಗುವ ಈ ಪರೀಕ್ಷೆ ವೇಳೆ ಈ ಸಲ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಸುಮಾರು 22.7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಕಳೆದ ವರ್ಷದಂತೆ ಅಕ್ರಮ ಮರುಕಳಿಸಬಾರದು ಎನ್ನುವ ಕಾರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ( ಎನ್‌ಟಿಎ) ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಪೊಲೀಸ್ ಬೆಂಗಾವಲಿನಲ್ಲಿ ಪ್ರಶ್ನೆ ಪತ್ರಿಕೆಗಳ ಸಾಗಣೆ, ಕೇಂದ್ರಗಳ ಮೇಲ್ವಿಚಾರಣೆ, ಭದ್ರತಾ ಸಿಬ್ಬಂದಿ ಜೊತೆಗೆ ಜಿಲ್ಲಾ ಪೊಲೀಸರಿಂದ ಬಹು ಹಂತದ ತಪಾಸಣೆಯನ್ನು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.
ಪರೀಕ್ಷೆಯಂದು ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಆದರೆ ಕರ್ನಾಟಕದ ಕಲಬುರ್ಗಿಯಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಸೂಚಿಸಿದ್ದಕ್ಕೆ ಬ್ರಾಹ್ಮಣ ಸಮುದಾಯದವರು ಪ್ರತಿಭಟಿಸಿದ ಘಟನೆ ನಡೆದಿದೆ.
ನೀಟ್ ವೇಳೆ ಯುವತಿಯ ಮೂಗುತಿ ತೆಗೆಸಿದ ಪರೀಕ್ಷಾ ಸಿಬ್ಬಂದಿ
ಮದುರೈ: 2025-26ನೇ ಸಾಲಿನ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ನಡೆದಿದ್ದು, ಈ ವೇಳೆ ಮೂಗುತಿ ತೊಟ್ಟಿದ್ದ ಅಭ್ಯರ್ಥಿಯಿಂದ ಬಲವಂತವಾಗಿ ಮೂಗುತಿ ತೆಗೆಸಿದ ಘಟನೆ ತಮಿಳುನಾಡಿನ ಮದುರೈಯಲ್ಲಿ ವರದಿಯಾಗಿದೆ. ಪರೀಕ್ಷಾ ಸಿಬ್ಬಂದಿ ಕ್ರಮಕ್ಕೆ ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.‘ನಾನು ಮೂಗುತಿ ಧರಿಸಿದ್ದರಿಂದ ಅಧಿಕಾರಿಗಳು ಪರೀಕ್ಷೆ ಕೋಣೆಯೊಳಗೆ ಹೋಗಲು ಬಿಡಲಿಲ್ಲ. ಬಲವಂತವಾಗಿ ಮೂಗುತಿ ತೆಗೆಸಿದರು. ಮೂಗುತಿಯ ಕುಣಿಕೆ ಸಾಕಷ್ಟು ಬಿಗಿಯಿತ್ತು. ಆದರೂ ಕಷ್ಟಪಟ್ಟು ತೆಗೆದೆ’ ಎಂದಿದ್ದಾರೆ.ಇನ್ನು, ತಿರುಪ್ಪುರದ ತಿರುಮುರುಗನ್‌ಪುಂಡಿಯ ಪರೀಕ್ಷಾ ಕೇಂದ್ರದಲ್ಲಿ ಉಡುಪಿನ ಮೇಲೆ ಲೋಹದ ಗುಂಡಿಗಳು ಇದ್ದ ಕಾರಣ ಇಬ್ಬರು ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೋಟಾದಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ: ಈ ವರ್ಷದ 14ನೇ ಪ್ರಕರಣ
ಕೋಟಾ: ಭಾನುವಾರ ನಿಗದಿಯಾಗಿದ್ದ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯೊಬ್ಬಳು ಶನಿವಾರ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಕೋಟಾದ ಪಾರ್ಶ್ವನಾಥ್ ಪ್ರದೇಶದಲ್ಲಿ ನಡೆದಿದೆ.ಯುವತಿಯು ಮಧ್ಯಪ್ರದೇಶದ ಶೇಯೋಪುರದವಳು. ಕಳೆದ ಕೆಲ ವರ್ಷಗಳಿಂದ ತನ್ನ ಪೋಷಕರೊಂದಿಗೆ ಕೋಟಾದಲ್ಲಿ ವಾಸವಿದ್ದಳು. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಿರುವ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಲೇ ಇದ್ದು, ಈ ವರ್ಷ ಒಟ್ಟು 14 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದಂತಾಗಿದೆ. ಕಳೆದ ವರ್ಷ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.