ವಿಶ್ವದ ಯಾರಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ವಾಪಸ್‌ ತರಲಾಗದು : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Nov 09, 2024, 01:18 AM ISTUpdated : Nov 09, 2024, 04:47 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

ಜಗತ್ತಿನ ಯಾವುದೇ ಶಕ್ತಿ ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.  

ಪಿಟಿಐ ಧುಲೆ/ಸಾಂಗ್ಲಿಜಗತ್ತಿನ ಯಾವುದೇ ಶಕ್ತಿ ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರಲಿ, ಅವರ ಮುಂದಿನ 4 ತಲೆಮಾರಿಗೂ 370ನೇ ವಿಧಿ ಮರು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಬ್ಬರಿಸಿದ್ದಾರೆ.

ವಿಶೇಷ ಸ್ಥಾನಮಾನದ ಕುರಿತು ಜಮ್ಮು- ಕಾಶ್ಮೀರದ ವಿಧಾನಸಭೆ ಅಧಿವೇಶನದಲ್ಲಿ ತೀವ್ರ ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಇಬ್ಬರೂ ನಾಯಕರಿಂದ ಇಂಥ ಹೇಳಿಕೆ ಹೊರಬಿದ್ದಿದೆ.ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು ಜಮ್ಮು-ಕಾಶ್ಮೀರದಿಂದ ಸಂವಿಧಾನವನ್ನು ಹೊರಗೆ ತರಲು ಯತ್ನಿಸುತ್ತಿದೆ. ಆದರೆ, ಜಗತ್ತಿನ ಯಾವುದೇ ಶಕ್ತಿಯು ಜಮ್ಮು- ಕಾಶ್ಮೀರಕ್ಕೆ ಮತ್ತೆ 370ನೇ ವಿಧಿಯನ್ನು ತರಲು ಸಾಧ್ಯವಿಲ್ಲ. ದೇಶ ಒಗ್ಗಟ್ಟಾಗಿದ್ದರೆ ಮಾತ್ರ ಸುರಕ್ಷಿತವಾಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ ಮತ್ತು ಅದರ ಮಿತ್ರರು ಪಾಕಿಸ್ತಾನದ ಅಜೆಂಡಾವನ್ನು ಪ್ರೋತ್ಸಾಹಿಸಬಾರದು. ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಬಾರದು. ನನಗೆ ಜನರ ಆಶೀರ್ವಾದ ಇರುವವರೆಗೂ ಈ ಸಂಚು ಫಲಿಸುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕೇವಲ ಅಂಬೇಡ್ಕರ್‌ ಸಂವಿಧಾನ ಮಾತ್ರ ನಡೆಯಲಿದೆ. 370ನೇ ವಿಧಿಯನ್ನು ಮತ್ತೆ ತರಬೇಕೆಂದು ಅಲ್ಲಿನ ಅಸೆಂಬ್ಲಿಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಅದನ್ನು ಪ್ರತಿಭಟಿಸಿದ ಬಿಜೆಪಿ ಶಾಸಕರನ್ನು ಹೊರಹಾಕಿದ್ದನ್ನು ನೀವೂ ಟೀವಿಯಲ್ಲಿ ನೋಡಿರುತ್ತೀರಿ. ಇದರ ಬಗ್ಗೆ ಎಚ್ಚೆತ್ತುಕೊಳ್ಳಿ’ ಎಂದು ಹೇಳಿದರು.

ಇನ್ನೊಂದೆಡೆ ಸಾಂಗ್ಲಿಯಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘370ನೇ ವಿಧಿ ರದ್ದಾದರೆ ಕಾಶ್ಮೀರದಲ್ಲಿ ರಕ್ತದ ಕೋಡಿಯೇ ಹರಿಯುತ್ತದೆ ಎಂದು ರಾಹುಲ್‌, ಪವಾರ್‌, ಮಮತಾ, ಅಖಿಲೇಶ್‌ ಎಚ್ಚರಿಸಿದ್ದರು. ಆದರೆ ರಕ್ತದ ಕೋಡಿ ಇರಲಿ, ಇದೀಗ ಕಲ್ಲು ಎಸೆಯಲೂ ಜನ ಹೆದರುತ್ತಾರೆ’ ಎಂದು ವಿಪಕ್ಷ ನಾಯಕರ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು.

ರಾಹುಲ್‌ ಅಲ್ಲ ಅವರ, 4 ಪೀಳಿಗೆಯಿಂದಲೂ ಆಗದು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರಲಿ, ಅವರ ಮುಂದಿನ 4 ತಲೆಮಾರಿಗೂ 370ನೇ ವಿಧಿ ಮರು ಜಾರಿ ಸಾಧ್ಯವಿಲ್ಲ. 370ನೇ ವಿಧಿ ರದ್ದಾದರೆ ಕಾಶ್ಮೀರದಲ್ಲಿ ರಕ್ತದ ಕೋಡಿಯೇ ಹರಿಯುತ್ತದೆ ಎಂದು ವಿಪಕ್ಷ ನಾಯಕರು ಹೇಳಿದ್ದರು. ಆದರೆ ಅಲ್ಲಿ ಕಲ್ಲು ಎಸೆಯಲೂ ಜನರು ಹೆದರುತ್ತಿದ್ದಾರೆ.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !